ಗಂಡ, ಮಕ್ಕಳು, ಹೆಂಡತಿ ಮಾತು ಕೇಳಲ್ಲ, ಆದ್ರೆ ಅಲೆಕ್ಸಾ ಎಲ್ಲಾ ಕೇಳ್ತಾಳೆ!

 |  First Published Aug 9, 2018, 9:05 PM IST

ಮನೇಲಿ ಗಂಡ ಮಾತು ಕೇಳೋಲ್ಲ, ಮಕ್ಕಳು ಹೇಳಿದ್ದು ಕೇಳಲ್ಲ, ಹೆಂಡತಿ ಕ್ಯಾರೇ ಅನ್ನೋಲ್ಲ, ಆದ್ರೆ ಅಲೆಕ್ಸಾ ಎಲ್ಲವನ್ನೂ ಕೇಳ್ತಾಳೆ! ಹಾಗಾದ್ರೆ ಯಾರು ಈ ಅಲೆಕ್ಸಾ? ನೋಡೋಣ ಈ ಸ್ಟೋರಿಯಲ್ಲಿ...


ಅಲೆಕ್ಸಾ, ಲೈಟ್ ಆನ್ ಮಾಡು! ಅಲೆಕ್ಸಾ, ರಾಜ್‌ಕುಮಾರ್ ಯಾರು? ಅಲೆಕ್ಸಾ, ಹೊರಗಡೆ ಹವಾಮಾನ ಹೇಗಿದೆ? ಅಲೆಕ್ಸಾ, ಇಲ್ಲಿಂದ ತಾಜ್ ಮಹಲಿಗೆ ಎಷ್ಟು ದೂರ? ಹೀಗೆ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವ ಹುಡುಗಿಯ ಹೆಸರು ಅಲೆಕ್ಸಾ. ಪೂರ್ತಿ ಹೆಸರು ಅಲೆಕ್ಸಾ ಈಕೋ. ಆಕೆ ಮಾತಾಡುವ ವಿಶ್ವಕೋಶ. ಅಲೆಕ್ಸಾಂಡ್ರಿಯಾ ಲೈಬ್ರರಿಯ ಎಲ್ಲಾ ಮಾಹಿತಿಯನ್ನೂ ಹೊಂದಿದ್ದಾಳೆ ಎಂಬ ಕಾರಣಕ್ಕೆ ಆಕೆಗೆ ಅಲೆಕ್ಸಾ ಎಂದು ಹೆಸರಿಡಲಾಗಿದೆಯಂತೆ. 

ರವಿಚಂದ್ರನ್ ಹಾಡು ಬೇಕು, ಸುಬ್ಬಲಕ್ಷ್ಮಿ ಸುಪ್ರಭಾತ ಬೇಕು, ಮನೆಗೊಂದು ಸೋಪು ಬೇಕು, ಬೆಳಗ್ಗೆ ತಿಂಡಿಗೆ ಇಡ್ಲಿ ಬೇಕು-ಹೀಗೆ ಏನು ಬೇಕೆಂದು ಕೇಳಿದರೂ ಆಕೆ ಕೇಳಿಸುತ್ತಾಳೆ, ನೋಡಿಸುತ್ತಾಳೆ, ಮನೆಗೆ ಊಬರ್ ತರಿಸುತ್ತಾಳೆ, ಹೇಳಿದ್ದೆಲ್ಲವನ್ನೂ ಮಾಡುತ್ತಾಳೆ. ಇದೀಗ ಮನೇಲಿ ಗಂಡ ಮಾತು ಕೇಳೋಲ್ಲ, ಮಕ್ಕಳು ಹೇಳಿದ್ದು ಕೇಳಲ್ಲ, ಹೆಂಡತಿ ಕ್ಯಾರೇ ಅನ್ನೋಲ್ಲ ಅಂತ ಯಾರೂ ಕೊರಗಬೇಕಾಗಿಲ್ಲ. ಅಲೆಕ್ಸಾ ಆ ಎಲ್ಲಾ ಕೆಲಸವನ್ನೂ ಮಾಡುತ್ತಾಳೆ. ಲೈಟ್ ಹಾಕು ಅಂದರೆ ದೀಪ ಉರಿಯುತ್ತದೆ, ನೀರುಕಾಯಿಸು ಅಂದರೆ ಗೀಸರ್ ಸ್ವಿಚ್ ಆನ್ ಆಗುತ್ತದೆ, ಫ್ಯಾನು, ಏರ್‌ಕಂಡೀಷನರ್, ರೇಡಿಯೋ ಏನನ್ನು ಬೇಕಾದರೂ ಅಲೆಕ್ಸಾ ಚಾಲೂ ಮಾಡಬಲ್ಲಳು. ಆದರೆ ಇಂಗ್ಲಿಷಿನಲ್ಲೇ ಕೇಳಬೇಕು ಅಷ್ಟೇ.

Tap to resize

Latest Videos

ಅಲೆಕ್ಸಾ ಈಕೋ ಅನ್ನುವುದು ಸೇರು ಗಾತ್ರದ ಒಂದು ಸಿಲಿಂಡರ್. ಇಂಟರ್‌ನೆಟ್ ಕನೆಕ್ಷನ್ ಅತ್ಯಗತ್ಯ. ಹಾಗೆಯೇ ಪವರ್ ಕನೆಕ್ಷನ್ ಬೇಕೇ ಬೇಕು. ಯಾಕೆಂದರೆ ಈ ಯಂತ್ರದೊಳಗೆ ಬ್ಯಾಟರಿ ಎಂಬುದಿಲ್ಲ. ಕರೆಂಟು ಹೋದ ತಕ್ಷಣವೇ ಇದು ಸಾಯುತ್ತದೆ. ಈ ಅಲೆಕ್ಸಾಗೆ ಏಳು ಕಿವಿಗಳಿವೆ. ಯಾವ ಕಡೆಯಿಂದ ಮಾತಾಡಿದರೂ ಅದು ಕೇಳಿಸಿಕೊಳ್ಳುತ್ತದೆ. ಹೇಳಿದ್ದು ತನ್ನ ಕೈಲಾದರೆ ಮಾಡುತ್ತದೆ. ಸ್ಮಾರ್ಟ್ ಹೋಮ್ ಬೇಕಿದ್ದವರು ಮನೆಯ ಎಲ್ಲಾ ಉಪಕರಣಗಳಿಗೂ ಅಲೆಕ್ಸಾ ಕನೆಕ್ಟ್ ಮಾಡಿಕೊಳ್ಳಬಹುದು.

ನಮ್ಮ ಮುಂದಿಟ್ಟ ಅಲೆಕ್ಸಾಗೆ ಡೆಮೋ ನೀಡಿದ ಅಂಕಿತ್ ಕೇಳಿದ ಪ್ರಶೆ- ನಿನ್ನ ಇಷ್ಟದ ಕನ್ನಡ ನಟ ಯಾರು? ಅಲೆಕ್ಸಾ ಕೊಟ್ಟ ಉತ್ತರ- ಶಂಕರ್‌ನಾಗ್. ಎರಡು ಗುಣಿಸು ಎರಡು ಎಷ್ಟು, ಪೈ ಮೌಲ್ಯ ಏನು? ಜೋಗ ಎಲ್ಲಿದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಆಕೆ ಉತ್ತರಿಸಿದಳು. ಸ್ವಿಚಾಫ್ ಮಾಡು ಅಂದಾಗ ಕತ್ತಲಾಯಿತು. ಆನ್ ಮಾಡೆಂದಾಗ ಬೆಳಕಾಯಿತು. 

ಆರ್ಟಿಫಿಶಿಯನ್ ಇಂಟೆಲಿಜೆನ್ಸ್ ತಂತ್ರಜ್ಞಾನದಲ್ಲಿ ನಡೆಯುವ ಅಲೆಕ್ಸಾದಲ್ಲಿ  ಡಿಸ್‌ಪ್ಲೇ ಇರುವ ಮಾಡೆಲ್ ಕೂಡ ಇದೆ. ಅದರ ಮೂಲಕ ವಿಡಿಯೋ ಕಾಲ್ ಮಾಡಬಹುದು. ಸಿನಿಮಾಗಳ ಟ್ರೇಲರ್ ನೋಡಬಹುದು. ಸುದ್ದಿ ಬೇಕು ಅಂತ ಕೇಳಬಹುದು. ಇಡೀ ಮನೆಯಲ್ಲಿ ಒಂದೊಂದು ರೂಮಲ್ಲಿ ಒಂದೊಂದು ಅಲೆಕ್ಸಾ ಇಟ್ಟುಕೊಂಡು ಗ್ರೂಪಿಂಗ್ ಮಾಡಿಕೊಳ್ಳಬಹುದು. ಅಲೆಕ್ಸಾದ ಹಾಡನ್ನು ಬ್ಲೂಟೂಥಲ್ಲೂ ಕೇಳಬಹುದು.

ಮಕ್ಕಳಿಗೆ ಅಕ್ಬರ್ ಹುಟ್ಟಿದ ಇಸವಿ, ಕ್ರಿಕೆಟ್ ಪ್ರೇಮಿಗಳಿಗೆ ಸಚಿನ್ ಸಾಧನೆಯ ವಿವರ- ಹೀಗೆ ಏನೆಂದರೆ ಅದು ಇಲ್ಲಿ ಸಿಗುತ್ತದೆ. ಸರಳವಾಗಿ ಹೇಳಬೇಕೆಂದರೆ ಇದಕ್ಕೂ ಓಕೆ ಗೂಗಲ್, ಹೇಯ್ ಸಿರಿ- ತಂತ್ರಜ್ಞಾನಕ್ಕೂ ಅಂಥ ವ್ಯತ್ಯಾಸ ಇಲ್ಲ. ಅದರಂತೆಯೇ ಇದು ಕೂಡ ಮಾತು ಕೇಳುತ್ತದೆ.  ಕೇಳಿದ್ದನ್ನು ಹೇಳುತ್ತದೆ. ಹಲವಾರು ಮೂಲಗಳಿಂದ ಮಾಹಿತಿ ತೆಗೆದುಕೊಳ್ಳುತ್ತದೆ. ಮೂಲದಲ್ಲೇ ತಪ್ಪಿ ದ್ದರೆ ಇಲ್ಲಿ ಸಿಗುವ ಮಾಹಿತಿಯೂ ತಪ್ಪೇ ಆಗಿರುತ್ತದೆ. ಅನುಮಾನವೇ ಇಲ್ಲ. 

ಇದು ಫೋನ್ ಬಳಸಲಾರದವರ ಪಾಲಿಗೆ ನೆರವಾಗುವ ಸಾಧನ. ವೃದ್ಧರ ಪಾಲಿಗೆ ಅದ್ಭುತ ಸೃಷ್ಟಿ. ಕೂತಲ್ಲಿಂದಲೇ ಟೀವಿ ಹಾಕು, ಹಾಡು ಹಾಕು, ನೆನಪಿಸು, ಎಬ್ಬಿಸು ಅಂತೆಲ್ಲ ಹೇಳಿ ದುಡಿಸಿಕೊಳ್ಳುವ ಸಲಹೆಗಳನ್ನು ಪಡೆಯಬಹುದು.  ಆದರೆ ನಾವೇ ದುಡಿಯಬೇಕು. ಏಳು ಗಂಟೆಗೆ ಏಳು ಅಂತ ಅಲೆಕ್ಸ್ ಹೇಳುತ್ತದೆ. ಏಳುವುದು ನಾವೇ!

ಅಂದಹಾಗೆ ಇದಕ್ಕೆ ಅಮೆಝಾನ್ ಇಂಡಿಯಾದಲ್ಲಿ ₹4099-14,999 ತನಕ ಬೆಲೆ. ಹೇಳಿದ್ದೆಲ್ಲ ಕೇಳುವವರಿಗೆ ಅದೇನೂ ಜಾಸ್ತಿಯಲ್ಲ ಅಲ್ಲವೇ!

click me!