
ಬಳ್ಳಾರಿ (ಜ.03): ಬಳ್ಳಾರಿ ನಗರದಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಗಲಭೆಯಲ್ಲಿ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಅವರ ಕುಟುಂಬಕ್ಕೆ ಬಳ್ಳಾರಿ ಉಸ್ತುವಾರಿ ಸಚಿವರೂ ಆಗಿರುವ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು 25 ಲಕ್ಷ ರೂ. ಆರ್ಥಿಕ ನೆರವು ವಿತರಣೆ ಮಾಡಿದ್ದಾರೆ. ಜೊತೆಗೆ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಡುವುದಾಗಿಯೂ ಭರವಸೆ ನೀಡಿದ್ದಾರೆ.
ಘಟನೆ ನಡೆದು ಎರಡು ದಿನಗಳ ಬಳಿಕ ಬಳ್ಳಾರಿಗೆ ಆಗಮಿಸಿದ ಜಮೀರ್ ಅಹಮದ್ ಖಾನ್ ಅವರು ನೇರವಾಗಿ, ಗಲಭೆಯಲ್ಲಿ ಮೃತಪಟ್ಟ ರಾಜಶೇಖರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಹುಸೇನ್ ನಗರದಲ್ಲಿರುವ ಮೃತರ ಮನೆಗೆ ತೆರಳಿದ ಸಚಿವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಲ್ಲದೆ, ತಮ್ಮ ವೈಯಕ್ತಿಕ ಖಾತೆಯಿಂದ 25 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಹಸ್ತಾಂತರಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, 'ರಾಜಶೇಖರ್ ನಿಧನದಿಂದ ಅವರ ಕುಟುಂಬ ಆಧಾರಸ್ತಂಭವನ್ನೇ ಕಳೆದುಕೊಂಡಿದೆ. ತಂದೆ ಸಣ್ಣ ಹೋಟೆಲ್ ನಡೆಸುತ್ತಿದ್ದರು, ಮಗ ಆಸರೆಯಾಗಿದ್ದ. ಹಣದಿಂದ ಪ್ರಾಣ ತರಲು ಸಾಧ್ಯವಿಲ್ಲ, ಆದರೆ ಅವರ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ನಾನು, ಶಾಸಕ ಭರತ್ ರೆಡ್ಡಿ ಹಾಗೂ ಗಣೇಶ್ ಸೇರಿ ಈ ಸಹಾಯ ಮಾಡಿದ್ದೇವೆ. ಸ್ಲಂ ಬೋರ್ಡ್ ವತಿಯಿಂದ ಅವರಿಗೆ ಸುಸಜ್ಜಿತ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದೇನೆ. ಪಕ್ಷದ ವತಿಯಿಂದಲೂ ಹೆಚ್ಚಿನ ನೆರವು ನೀಡಲಾಗುವುದು' ಎಂದು ತಿಳಿಸಿದರು.
ಬ್ಯಾನರ್ ವಿಚಾರದಲ್ಲಿ ನಡೆದ ಸಂಘರ್ಷದ ಕುರಿತು ಮಾತನಾಡಿದ ಸಚಿವರು, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 'ವಾಲ್ಮೀಕಿ ಪುತ್ಥಳಿ ಅನಾವರಣ ನಮ್ಮೆಲ್ಲರ ಬಹಳ ದಿನಗಳ ಕನಸಾಗಿತ್ತು. ಬ್ಯಾನರ್ ಕಟ್ಟುವ ವಿಚಾರದಲ್ಲಿ ಜನಾರ್ದನ ರೆಡ್ಡಿ ದೊಡ್ಡ ಮನಸ್ಸು ಮಾಡಬೇಕಿತ್ತು. ಅದನ್ನು ಬಿಟ್ಟು ಚಿಲ್ಲರೆತನ ಪ್ರದರ್ಶಿಸಿದ್ದಾರೆ. ಒಂದು ವೇಳೆ ಬ್ಯಾನರ್ ಬೇಡವೆಂದಿದ್ದರೆ ಶಾಸಕ ಭರತ್ ರೆಡ್ಡಿಗೆ ಫೋನ್ ಮಾಡಿ ಹೇಳಬಹುದಿತ್ತು. ಇಷ್ಟು ದೊಡ್ಡ ಮಟ್ಟದ ಗಲಾಟೆ ನಡೆಯುವ ಅಗತ್ಯವಿರಲಿಲ್ಲ' ಎಂದು ಟೀಕಿಸಿದರು.
ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅಮಾನತು ಕುರಿತು ಪ್ರತಿಕ್ರಿಯಿಸಿದ ಜಮೀರ್, 'ಅಧಿಕಾರಿಗಳಿಗೆ ಜವಾಬ್ದಾರಿ ಹೆಚ್ಚಿರುತ್ತದೆ, ಲೋಪವಾದರೆ ಕ್ರಮ ಅನಿವಾರ್ಯ. ಆದರೆ, ಎಸ್ಪಿ ಅವರು ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಸುದ್ದಿ ಸಂಪೂರ್ಣ ಸುಳ್ಳು. ಸದ್ಯ ಚಿತ್ರದುರ್ಗದ ಎಸ್ಪಿ ಅವರು ಬಳ್ಳಾರಿಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ತನಿಖೆ ಮುಂದುವರಿಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ ಹೆಚ್.ಎಂ. ರೇವಣ್ಣ ನೇತೃತ್ವದ ಸತ್ಯ ಸಂಶೋಧನಾ ತಂಡವು ಜನಾರ್ದನ ರೆಡ್ಡಿ ನಿವಾಸದ ಮುಂದಿನ ಗಲಾಟೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಶಾಸಕ ಭರತ್ ರೆಡ್ಡಿ ಅವರೊಂದಿಗೆ ಸಮಾಲೋಚನೆ ನಡೆಸಿದ ತಂಡವು ಘಟನೆಯ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ