
ಬೆಂಗಳೂರು(ಡಿ.10): ಉತ್ತರ ಕರ್ನಾಟಕ ಭಾಗದ ಪ್ರಮುಖ ನೀರಾವರಿ ಯೋಜನೆಯಾದ ಅಪ್ಪರ್ ಕೃಷ್ಣಾ ಪ್ರಾಜೆಕ್ಟ್ (Upper Krishna Project) ಕುರಿತು ನಡೆದ ಚರ್ಚೆಯು ಇಂದು ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ಗದ್ದಲ ಮತ್ತು ವೈಯಕ್ತಿಕ ವಾಕ್ಸಮರಕ್ಕೆ ಕಾರಣವಾಯಿತು.
ಶಾಸಕ ಶಿವಲಿಂಗೇಗೌಡ ಅವರು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡಿ, ಅಪ್ಪರ್ ಕೃಷ್ಣಾದ ನೀರು ಆಂಧ್ರಪ್ರದೇಶಕ್ಕೆ ಹರಿದು ಹೋಗುತ್ತಿದ್ದು, ಅಲ್ಲಿ ರೈತರು ಸೋನಾ ಮಸೂರಿ ಬೆಳೆಯುತ್ತಿದ್ದಾರೆ. ಈ ಯೋಜನೆ ಸರಿಯಾಗಿ ಪೂರ್ಣಗೊಂಡರೆ ಉತ್ತರ ಕರ್ನಾಟಕಕ್ಕೆ ದೊಡ್ಡ ಹೆಸರು ಬರುತ್ತೆ. ಆದ್ದರಿಂದ ಈ ಯೋಜನೆಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರದ ಬೊಗಸೆಯಿಂದ ಆಗುವುದಿಲ್ಲ, ಕೇಂದ್ರ ಸರ್ಕಾರವು ಕೈ ಹಾಕಬೇಕು ಎಂದು ಆಗ್ರಹಿಸಿದರು.
ಶಿವಲಿಂಗೇಗೌಡರ ಮಾತುಗಳ ಮಧ್ಯೆ ಪ್ರವೇಶಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, 'ನೀವು ಹಳೆ ಮೈಸೂರು ಭಾಗದವರು. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತಾಡುವುದು ಸರಿಯಲ್ಲ. ಮಾತಾಡಲು ನಮಗೆ, ಉತ್ತರ ಕರ್ನಾಟಕ ಭಾಗದವರಿಗೆ ಅವಕಾಶ ಮಾಡಿಕೊಡಿ ಎಂದು ಆಕ್ಷೇಪಿಸಿದರು. ಹಳೆ ಮೈಸೂರು ಭಾಗದ ಶಾಸಕರಿಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಏನು ಗೊತ್ತಿದೆ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು. ಯತ್ನಾಳ್ ತಮ್ಮ ಆಕ್ಷೇಪ ವ್ಯಕ್ತಪಡಿಸಲು ಸದನದ ಬಾವಿಗೂ ಇಳಿದರು.
ಉಪಸಭಾಧ್ಯಕ್ಷರಿಂದ ಗರಂ:
ಯತ್ನಾಳ್‌ರ ಈ ನಡೆಯಿಂದಾಗಿ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿಯವರು ಗರಂ ಆದರು. 'ಉತ್ತರ ಕರ್ನಾಟಕ ಭಾಗದ ಬಗ್ಗೆ ಯಾರೂ ಬೇಕಾದರೂ ಮಾತಾಡಬಹುದು. ನೀವು ಆ ರೀತಿ ವಿರೋಧ ಮಾಡೋದು ಸರಿಯಲ್ಲ' ಎಂದು ಯತ್ನಾಳ್‌ಗೆ ಸೂಚನೆ ನೀಡಿದರೂ, ಯತ್ನಾಳ್ ಸದನದ ಬಾವಿಯಲ್ಲೇ ತಮ್ಮ ಪ್ರತಿಭಟನೆ ಮುಂದುವರೆಸಿದರು.
ಈ ಗದ್ದಲದ ಮಧ್ಯೆಯೇ ಶಿವಲಿಂಗೇಗೌಡ ಅವರು ಬಿಜೆಪಿ ಸದಸ್ಯರಿಗೆ ಸವಾಲು ಹಾಕುತ್ತಾ, 'ಗ್ಯಾರಂಟಿ ತೆಗೆಯಿರಿ ಅಂತಾ ನೇರವಾಗಿ ಹೇಳಿ ನೋಡೋಣ. ಉ.ಕ ಭಾಗದ ಜನರಿಗೂ ನಾವು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಅವರು ಎಲ್ಲರೂ ಚೆನ್ನಾಗಿ ತಿಂತಾ ಇದ್ದಾರೆ' ಎಂದರು. ಆಗ ಬಿಜೆಪಿ ಶಾಸಕ ಸುರೇಶ್ ಗೌಡ ಆಕ್ಷೇಪ ವ್ಯಕ್ತಪಡಿಸಿದರು. ಸುರೇಶ್ ಗೌಡರ ವಿರುದ್ಧ ರೊಚ್ಚಿಗೆದ್ದ ಶಿವಲಿಂಗೇಗೌಡರಿಗೆ ತಿರುಗೇಟು ನೀಡಿದ ಸುರೇಶ್ ಗೌಡ, 'ಒಂದು ಗುಂಡಿ ಮುಚ್ಚುವ ಯೋಗ್ಯತೆ ಇಲ್ಲ' ಎಂದು ಟೀಕಿಸಿದರು.
ಸದನದಲ್ಲಿ ಗದ್ದಲದ ವಾತಾವರಣ ಮುಂದುವರೆದಿದ್ದರಿಂದ ಕಲಾಪಕ್ಕೆ ಅಡಚಣೆಯಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ