19 ಮಂದಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ

By Kannadaprabha News  |  First Published Sep 5, 2020, 6:03 PM IST

ಹಿರಿಯ ಕವಿ, ಯಕ್ಷಗಾನ ತಾಳಮದ್ದಲೆ ಪ್ರಸಿದ್ಧ ಅರ್ಥದಾರಿ ಅಂಬಾತನಯ ಮುದ್ರಾಡಿ ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಕೊಡಮಾಡುವ 2019ನೇ ಪ್ರತಿಷ್ಠಿತ ‘ಪಾರ್ತಿ ಸುಬ್ಬ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರೊಂದಿಗೆ ಅಕಾಡೆಮಿ ನೀಡುವ 2019ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳಿಗೆ ಒಟ್ಟು 19 ಗಣ್ಯರನ್ನು ಆಯ್ಕೆ ಮಾಡಲಾಗಿದೆ.


ಬೆಂಗಳೂರು (ಸೆ. 05): ಹಿರಿಯ ಕವಿ, ಯಕ್ಷಗಾನ ತಾಳಮದ್ದಲೆ ಪ್ರಸಿದ್ಧ ಅರ್ಥದಾರಿ ಅಂಬಾತನಯ ಮುದ್ರಾಡಿ ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಕೊಡಮಾಡುವ 2019ನೇ ಪ್ರತಿಷ್ಠಿತ ‘ಪಾರ್ತಿ ಸುಬ್ಬ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರೊಂದಿಗೆ ಅಕಾಡೆಮಿ ನೀಡುವ 2019ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳಿಗೆ ಒಟ್ಟು 19 ಗಣ್ಯರನ್ನು ಆಯ್ಕೆ ಮಾಡಲಾಗಿದೆ.

ಯಕ್ಷರಂಗದ ವಿವಿಧ ವಿಭಾಗಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಗೌರವಾನ್ವಿತರಿಗೆ ಯಕ್ಷಗಾನ ಅಕಾಡೆಮಿಯಿಂದ ‘ಪಾರ್ತಿಸುಬ್ಬ’ ಪ್ರಶಸ್ತಿ, ವಾರ್ಷಿಕ ‘ಗೌರವ’ ಪ್ರಶಸ್ತಿ, ‘ಯಕ್ಷಸಿರಿ’ ಪ್ರಶಸ್ತಿ ಮತ್ತು ‘ಪುಸ್ತಕ ಬಹುಮಾನ’ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ.

Tap to resize

Latest Videos

ಹಿರಿಯ ಕವಿ ಮತ್ತು ಯಕ್ಷಗಾನ ತಾಳಮದ್ದಲೆಯ ಪ್ರಸಿದ್ಧ ಅರ್ಥದಾರಿಗಳಾದ ಅಂಬಾತನಯ ಮುದ್ರಾಡಿ ಅವರನ್ನು ‘ಪಾರ್ತಿಸುಬ್ಬ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಯಕ್ಷಗಾನ ಕೃತಿಗಳಾದ ಮಹಾಸತಿ ಅನಸೂಯ, ಭಕ್ತಪ್ರಹ್ಲಾದ, ಪಂಚಭೂತ ಪ್ರಪಂಚ ಮತ್ತು ಯಕ್ಷವಿಜಯ ಹೀಗೆ ಹಲವಾರು ಕೃತಿಗಳನ್ನೂ ಪ್ರಕಟಿಸಿರುವ ಅವರಿಗೆ 2008ರಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ‘ಪಾರ್ತಿಸುಬ್ಬ ಪ್ರಶಸ್ತಿ’ ಒಂದು ಲಕ್ಷ ರು., ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಒಳಗೊಂಡಿದೆ.

‘ಗೌರವ’ ಪ್ರಶಸ್ತಿ:

ಯಕ್ಷಗಾನ ವಿದ್ವಾಂಸರಾದ ಸುಳ್ಯದ ಡಾ.ಚಂದ್ರಶೇಖರ ದಾಮ್ಲೆ ಮತ್ತು ಡಾ.ಆನಂದರಾಮ ಉಪಾಧ್ಯ, ಯಕ್ಷಗಾನ ಕಲಾವಿದ ಮತ್ತು ವಿದ್ವಾಂಸ ಡಾ.ರಾಮಕೃಷ್ಣ ಗುಂದಿ, ಮೂಡಲಪಾಯ ಯಕ್ಷಗಾನ ಕಲಾವಿದ ಹಾಗೂ ಸಂಘಟಕರಾದ ಕೆ.ಸಿ.ನಾರಾಯಣ ಮತ್ತು ಮೂಡಲಪಾಯ ಯಕ್ಷಗಾನ ತಜ್ಞರಾದ ಡಾ.ಚಂದ್ರ ಕಾಳೇನಹಳ್ಳಿ ಅವರು 2019ನೆ ಸಾಲಿನ ವಾರ್ಷಿಕ ‘ಗೌರವ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಶಸ್ತಿಯು ತಲಾ 50 ಸಾವಿರ ರು., ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಒಳಗೊಂಡಿದೆ.

‘ಯಕ್ಷಸಿರಿ ವಾರ್ಷಿಕ’ ಪ್ರಶಸ್ತಿ:

2019ನೆ ಸಾಲಿನ ಪ್ರಶಸ್ತಿಗೆ ಯಕ್ಷಗಾನ ಮದ್ದಲೆ ವಾದಕರಾದ ಎನ್‌.ಜಿ.ನಲ್ಲೂರು ಜನಾರ್ದನ ಆಚಾರ್‌, ಯಕ್ಷಗಾನ ಗುರುಗಳು ಹಾಗೂ ವೇಷಧಾರಿ ಉಬರಡ್ಕ ಉಮೇಶ್‌ ಶೆಟ್ಟಿ, ಹಿರಿಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿ, ಯಕ್ಷಗಾನ ಕಲಾವಿದ ಆರ್ಗೋಡು ಮೋಹನ್‌ದಾಸ್‌ ಶೆಣೈ, ಯಕ್ಷಗಾನ ಕಲಾವಿದ ಮಹಮ್ಮದ್‌ ಗೌಸ್‌, ಪ್ರಸಾಧನಕಾರ ಮೂರೂರು ರಾಮಚಂದ್ರ ಹೆಗಡೆ, ತಾಳಮದ್ದಲೆ ಮತ್ತು ಅರ್ಥದಾರಿಗಳಾದ ಎಂ.ಎನ್‌. ಹೆಗಡೆ ಹಳವಳ್ಳಿ, ವೇಷಧಾರಿ ಹಾರಾಡಿ ಸರ್ವೋತ್ತಮ ಗಾಣಿಗ, ಮೂಡಲಪಾಯ ಯಕ್ಷಗಾನ-ಮುಖವೀಣೆ ಕಲಾವಿದರಾದ ಬಿ.ರಾಜಣ್ಣ ಮತ್ತು ಮೂಡಲಪಾಯ ಯಕ್ಷಗಾನದ ಸ್ತ್ರೀ ವೇಷಧಾರಿ ಎ.ಜಿ. ಅಶ್ವತ್ಥನಾರಾಯಣ ಅವರು ಭಾಜನರಾಗಿದ್ದಾರೆ. ಪ್ರಶಸ್ತಿಯು ತಲಾ 25 ಸಾವಿರ ರು., ಪ್ರಮಾಣ ಪತ್ರ ಒಳಗೊಂಡಿದೆ.

‘ಪುಸ್ತಕ ಬಹುಮಾನ’:

ಈ ವಿಭಾಗದಲ್ಲಿ ಹೊಸ್ತೋಟ ಮಂಜುನಾಥ ಭಾಗವತ (ಯಕ್ಷಗಾನ ವೀರಾಂಜನೇಯ ವೈಭವ-ಸಮಗ್ರ ಹನುಮಾಯನ), ಕೃಷ್ಣ ಪ್ರಕಾಶ ಉಳಿತ್ತಾಯ (ಅಗರಿ ಮಾರ್ಗ) ಮತ್ತು ಡಾ.ಚಿಕ್ಕಣ್ಣ ಯಣ್ಣೆಕಟ್ಟೆ(ಮೂಡಲಪಾಯ ಯಕ್ಷಗಾನ ಬಯಲಾಟ- ಒಂದು ಅಧ್ಯಯನ (ಸಂಶೋಧನೆ) ಇವರಿಗೆ ಪ್ರಶಸ್ತಿ ಸಂದಿದೆ. ಪ್ರಶಸ್ತಿಯು ತಲಾ 25 ಸಾವಿರ, ಪ್ರಮಾಣ ಪತ್ರ ಒಳಗೊಂಡಿದೆ.

ಕೋವಿಡ್‌ 19 ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಪ್ರಶಸ್ತಿ ಸಮಾರಂಭವನ್ನು ಅಕ್ಟೋಬರ್‌ ತಿಂಗಳಿನಲ್ಲಿ ನಡೆಸಲಾಗುವುದು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ತಿಳಿಸಿದ್ದಾರೆ.

 

click me!