
ಬೆಂಗಳೂರು (ಆ.23): ಕರ್ನಾಟಕ ಮೂಲದ ಜಗದ್ವಿಖ್ಯಾತ ಗಣಿತ ಶಾಸ್ತ್ರಜ್ಞ ಹಾಗೂ ಸಂಖ್ಯಾಶಾಸ್ತ್ರ ಪಂಡಿತರೂ ಆಗಿದ್ದ ಸಿ.ಆರ್. ರಾವ್ ಅವರು ಬುಧವಾರ (ಆ.23) ನಿಧನರಾಗಿದ್ದಾರೆ.
ಭಾರತೀಯ ಅಮೆರಿಕನ್ ಸಿ.ಆರ್. ರಾವ್ ಎಂದೇ ಖ್ಯಾತರಾಗಿದ್ದ ಗಣಿತ ಮತ್ತು ಸಂಖ್ಯಾಶಾಸ್ತ್ರಜ್ಞರಾದ ಕಲ್ಯಂಪುಡಿ ರಾಧಾಕೃಷ್ಣ ರಾವ್ ಅವರಿಗೆ 102 ವರ್ಷ ವಯಸ್ಸಾಗಿತ್ತು. ಪ್ರಸ್ತುತ ಅವರು ಅಮೆರಿಕದಲ್ಲಿ ನೆಲೆಸಿದ್ದರು. ಭಾರತದ ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ ತೆಲುಗು ಕುಟುಂಬದಲ್ಲಿ 1920ರಲ್ಲಿ ಜನಿಸಿದ್ದರು. ತೆಲುಗು ಮೂಲದ ಕುಟುಂಬವಾದ್ದರಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಆಂಧ್ರಪ್ರದೇಶದಲ್ಲಿ ಪೂರ್ಣಗೊಳಿಸದ್ದರು. ಬಳಿಕ ಆಂಧ್ರ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ (ಗಣಿತಶಾಸ್ತ್ರ) ಮತ್ತು 1943ರಲ್ಲಿ ಕೋಲ್ಕತ್ತ ವಿಶ್ವವಿದ್ಯಾಲಯದಲ್ಲಿ ಸಂಖ್ಯಾಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದರು. 1948ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಿಂಗ್ ಕಾಲೇಜಿನಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು.
ಬೆಂಗಳೂರನ್ನು 73 ಕಿ.ಮೀ ಕಾಲ್ನಡಿಗೆಯಲ್ಲೇ ಸುತ್ತಿ ಭಾರತದ ಭೂಪಟ ಅರಳಿಸಿದ ರೂಪರೇಲಿಯಾ!
ಇವರ ಗಣಿತ ಜ್ಞಾನಕ್ಕೆ ರಾಷ್ಟ್ರೀಯ ಮತ್ತು ಅನೇಕ ಅಂತಾರಾಷ್ಟ್ರೀಯ ಪುರಸ್ಕಾರಗಳು ಕೂಡ ಸಂದಿವೆ. ಇವರಿಗೆ 1968ರಲ್ಲಿ ನಮ್ಮ ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಮತ್ತು 2001ರಲ್ಲಿ 'ಪದ್ಮವಿಭೂಷಣ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನು ರಾವ್ ಅವರ ಸಂಖ್ಯಾಶಾಸ್ತ್ರದ ಕೊಡುಗೆ ಸ್ಮರಣಾರ್ಥ 2023ನೇ ಸಾಲಿನ 'ಇಂಟನ್ಯಾಷನಲ್ ಪ್ರೈಜ್ ಆಫ್ ಸ್ಟಾಟಿಸ್ಟಿಕ್ಸ್ 2023' ಅಂತರರಾಷ್ಟ್ರೀಯ ಪ್ರಸ್ತಿಗೆ ಭಾಜನರಾಗಿದ್ದರು. ಜೊತೆಗೆ, 'ನ್ಯಾಷನಲ್ ಮೆಡಲ್ ಆಫ್ ಸೈನ್ಸ್' ಇನ್ನು ಮುಂತಾದ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಭಾರತದ ಕೀರ್ತಿ ಹೆಚ್ಚಿಸಿದ್ದರು.
ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಜಗದ್ವಿಖ್ಯಾತ ಗಣಿತ ಶಾಸ್ತ್ರಜ್ಞರು, ಕರ್ನಾಟಕ ಮೂಲದ ಸಂಖ್ಯಾಶಾಸ್ತ್ರ ಪರಿಣಿತರು ಆದ ಸಿ.ಆರ್ ರಾವ್ ಅವರ ನಿಧನದ ಸುದ್ದಿ ಕೇಳಿ ನೋವಾಯಿತು. ಇಂತಹ ಮೇರು ಸಾಧಕರ ನಿಧನ ನಾಡಿಗೆ ತುಂಬಿಬಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬವರ್ಗಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಸಂತಾಪ ಸೂಚಿಸಿದ್ದಾರೆ.
ಇವರು ಕ್ರೇಮರ್-ರಾವ್ ಬೌಂಡ್ (Cramér–Rao bound), ರಾವ್-ಬ್ಲಾಕ್ವೆಲ್ ಪ್ರಮೇಯ (Rao–Blackwell theorem), ಆರ್ಥೋಗೋನಲ್ ಸರಣಿಗಳು (Orthogonal arrays) ಹಾಗೂ ಸ್ಕೋರ್ ಪರೀಕ್ಷೆ (Score test) ಎಂಬ ಸಂಖ್ಯಾಶಾಸ್ತ್ರದ ಕೊಡುಗೆಗಳು ಜಾಗತಿಕವಾಗಿ ಪ್ರಸಿದ್ಧವಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ