ರೈಲ್ವೆ ಪೊಲೀಸರು ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಹೆರಿಗೆಯಾಗಲು ಸಹಾಯ ಮಾಡುವ ಮೂಲಕ ರೈಲ್ವೆ ಪೊಲೀಸ್ ಮಹಿಳಾ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರು: ರೈಲ್ವೆ ಪೊಲೀಸರು ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಹೆರಿಗೆಯಾಗಲು ಸಹಾಯ ಮಾಡುವ ಮೂಲಕ ರೈಲ್ವೆ ಪೊಲೀಸ್ ಮಹಿಳಾ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರಿನಿಂದ ಚಂಡಿಘಡಕ್ಕೆ ತೆರಳಬೇಕಾಗಿದ್ದ ಮಹಿಳೆಗೆ ಫ್ಲಾಟ್‌ಫಾರ್ಮ್ ಒಂದರಲ್ಲಿ ನಿಂತಿದ್ದಾಗ ಜೋರಾಗಿ ಹೆರಿಗೆ ನೋವು ಕಾಣಿಸಿಕೊಂಡದ್ದು, ಮಹಿಳೆ ಫ್ಲಾಟ್‌ಫಾರ್ಮ್‌ನಲ್ಲೇ ನೋವಿನಿಂದ ಹೊರಳಾಡಲು ಶುರು ಮಾಡಿದ್ದಾಳೆ. ಇದನ್ನು ಗಮನಿಸಿದ ರೈಲ್ವೆ ಪೊಲೀಸ್ ಪಡೆಯ ಮಹಿಳಾ ಸಿಬ್ಬಂದಿ ಮೀನಾ ಮಹಿಳೆಯ ನೆರವಿಗೆ ಬಂದಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಆರ್‌ಪಿಎಫ್ ಸಿಬ್ಬಂದಿ ಮೀನಾ ಉಳಿದ ಪ್ರಯಾಣಿಕರ ಸಹಾಯದೊಂದಿಗೆ ಮಹಿಳೆಗೆ ಅಲ್ಲೇ ಪ್ರಥಮ ಚಿಕಿತ್ಸೆ ನೀಡಿ ಅಲ್ಲೇ ಹೆರಿಗೆ ಮಾಡಿಸಿದ್ದಾರೆ. ನಂತರ ತಾಯಿ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ತಕ್ಷಣವೇ ಸ್ಪಂದಿಸಿದ ತಾಯಿ ಮಗುವಿನ ಜೀವ ಉಳಿಸುವಲ್ಲಿ ನೆರವಾದ ಆರ್‌ಪಿಎಫ್ ಸಿಬ್ಬಂದಿ ಮೀನಾ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ರೈಲ್ವೆ ಹಿರಿಯ ಅಧಿಕಾರಿಗಳು ಕೂಡ ಮೀನಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ತುಂಬು ಗರ್ಭಿಣಿಯೊಬ್ಬರು ಚಲಿಸುತ್ತಿರುವ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಸೂರತ್‌ನಿಂದ ಮುಜಾಫರ್‌ಪುರಗೆ ತೆರಳುತ್ತಿದ್ದ ಅಹ್ಮದಾಬಾದ್-ಬರುನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು. ಆ ಮಹಿಳೆಗೆ ಹೆರಿಗೆಯಾಗಲು ರೈಲ್ವೆ ಪೊಲೀಸ್ ಪೋರ್ಸ್‌ನ ಮಹಿಳಾ ಸಿಬ್ಬಂದಿ ನೆರವಾಗಿದ್ದರು. ಮಹಿಳೆ ಅಹ್ಮದಾಬಾದ್ ಬರುನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮುಜಾಫರ್‌ಪುರಕ್ಕೆ ತೆರಳುತ್ತಿದ್ದರು. ಸೂರತ್‌ನಿಂದ ಮುಜಾಫರ್‌ಪುರಕ್ಕೆ ತೆರಳುವಾಗ ಮಾರ್ಗಮಧ್ಯೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಹಿಳೆ ಪತಿ ಈ ಬಗ್ಗೆ ಟಿಕೇಟ್ ಪರಿವೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಆರ್‌ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಬಂದು ಇಡೀ ರೈಲು ಬೋಗಿಯನ್ನು ಬಟ್ಟೆಗಳಿಂದ ಮುಚ್ಚಿ ಸುಲಭವಾಗಿ ಹೆರಿಗೆ ಮಾಡಲು ಸಹಾಯ ಮಾಡಿದ್ದಾರೆ. ನಂತರ ರೈಲು ಮುಜಾಫರ್ ಪುರ ಜಂಕ್ಷನ್ ತಲುಪಿದ ನಂತರ ತಾಯಿ ಹಾಗೂ ಮಗು ಇಬ್ಬರನ್ನು ಮುಜಾಫರ್‌ಪುರದ ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಿಮಾನದ ಶೌಚಾಲಯದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ಮೇ ತಿಂಗಳಲ್ಲಿ ನಡೆದಿತ್ತು. ಮೇ 17 ರಂದು ಫ್ಲೋರಿಡಾಕ್ಕೆ ತೆರಳುತ್ತಿದ್ದ ಫ್ರಾಂಟಿಯರ್ ಏರ್‌ಲೈನ್ಸ್‌ಗೆ ಸೇರಿದ ವಿಮಾನದಲ್ಲಿ ಈ ಘಟನೆ ನಡೆದಿತ್ತು. ಅಮೆರಿಕಾ ಮೂಲದ ಏರ್‌ಲೈನ್ಸ್ ಆಗಿರುವ ಫ್ರಾಂಟಿಯರ್ ಏರ್‌ಲೈನ್ಸ್ ಈ ವಿಚಾರವನ್ನು ತನ್ನ ಅಧಿಕೃತ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿತ್ತು. ಮಧ್ಯ ಆಗಸದಲ್ಲಿ ವಿಮಾನದ ಶೌಚಾಲಯದಲ್ಲಿ ಮಹಿಳೆಯೊಬ್ಬರು ಆರೋಗ್ಯಯುತ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅದು ತಿಳಿಸಿತ್ತು.
ವಿಮಾನದ ಅಂಟೆಂಡೆಂಟ್ ಡಿಯಾನಾ ಗೆರಾಲ್ದೊ (Diana Geraldo) ಅವರು ಈ ಮಹಿಳಾ ಪ್ಯಾಸೆಂಜರ್‌ಗೆ ಹೆರಿಗೆ ಸಮಯದಲ್ಲಿ ಸಹಾಯ ಮಾಡಿದರು ಎಂದು ತಿಳಿದು ಬಂದಿದೆ. ಶಕೆರಿಯಾ ಮಾರ್ಟಿನ್ (Shakeria Martin) ಎಂಬುವರೇ ಫ್ಲೈಟ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ. ಡೆನೆವರ್‌ದಿಂದ (Denver) ಒರ್ಲಾಂಡೊಗೆ (Orlando)ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಅನಿರೀಕ್ಷಿತ ಹಾಗೂ ಅವಧಿಪೂರ್ವವೇ ಹೆರಿಗೆ ನೋವು ಕಾಣಿಸಿಕೊಂಡಿದೆ. ವಿಮಾನ ಹತ್ತಿದ ಪ್ರಾರಂಭದಲ್ಲಿ ಶಕೆರಿಯಾ ಮಾರ್ಟಿನ್ ಆರೋಗ್ಯವಾಗಿಯೇ ಇದ್ದರು. ಅಲ್ಲದೇ ವಿಮಾನದಲ್ಲಿ ಸಣ್ಣ ನಿದ್ದೆಗೂ ಜಾರಿದ್ದರು. ಆದರೆ ಸ್ವಲ್ಪಹೊತ್ತಿನಲ್ಲೇ ತಡೆಯಲಾಗದ ಹೊಟ್ಟೆನೋವು ಕಾಣಿಸಿಕೊಂಡಿದ್ದು, ವಿಮಾನದಲ್ಲಿ ಹೀಗಾಗುವುದು ಎಂಬ ನಿರೀಕ್ಷೆ ಅವರಿಗೆ ಇರಲಿಲ್ಲವಂತೆ.