ಬಾತ್ ರೂಮ್ ಗೆ ಹೋಗಿ ಬರುವದಾಗಿ ಹೇಳಿ ಬೇರೊಬ್ಬರ ಕೈಗೆ ನವಜಾತ ಹೆಣ್ಣು ಶಿಶು ಕೊಟ್ಟು ಮಹಿಳೆ ಪರಾರಿಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ ರೈಲು ನಿಲ್ದಾಣದಲ್ಲಿ ನಡೆದಿದೆ.
ಕಲಬುರಗಿ(ಮಾ.21): ಬಾತ್ ರೂಮ್ ಗೆ ಹೋಗಿ ಬರುವದಾಗಿ ಹೇಳಿ ಬೇರೊಬ್ಬರ ಕೈಗೆ ನವಜಾತ ಹೆಣ್ಣು ಶಿಶು ಕೊಟ್ಟು ಮಹಿಳೆ ಪರಾರಿಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ ರೈಲು ನಿಲ್ದಾಣದಲ್ಲಿ ನಡೆದಿದೆ.
ಮೂರು ದಿನಗಳ ನವಜಾತ ಹೆಣ್ಣು ಶಿಶುವನ್ನು ಎತ್ತಿಕೊಂಡು ರೈಲು ನಿಲ್ದಾಣದಲ್ಲಿ ಕುಳಿತಿದ್ದ ಮಹಿಳೆಯೊಬ್ಬಳು, ಬಾತ್ ರೂಂ ಹೋಗಿ ಬರೋದಾಗಿ ಹೇಳಿ ಪಕ್ಕದಲ್ಲಿ ಕುಳಿತಿದ್ದ ಮಹಿಳೆ ಕೈಗೆ ಮಗುವನ್ನು ಕೊಟ್ಟು ಹೋಗಿದ್ದಾಳೆ.
ಆದರೆ ಎರಡ್ಮೂರು ಗಂಟೆಯಾದರೂ ತಾಯಿ ವಾಪಸ್ಸು ಬಾರದೆ ಇದ್ದಾಗ ಗಾಬರಿಗೊಂಡ ಮಹಿಳೆ ಜನರಿಗೆ ತಿಳಿಸಿದ್ದಾರೆ. ಆಗ ಸಾರ್ವಜನಿಕರು ಚೈಲ್ಡ್ ಲೈನ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಮಾರ್ಗದರ್ಶಿ ಸಂಸ್ಥೆಯ ಚೈಲ್ಡ್ ಲೈನ್ ಸಿಬ್ಬಂದಿಗಳು ಮಗುವನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ.
ಬಳಿಕ ಅಂಬ್ಯುಲೆನ್ಸ್ ಮೂಲಕ ಕಲಬುರಗಿ ಜಿಲ್ಲಾಸ್ಪತ್ರೆಗೆ ಮಗು ಕರೆತಂದು ದಾಖಲಿಸಿದ್ದಾರೆ. ಆದರೆ ಬಿಟ್ಟು ಹೋದ ತಾಯಿ ಎಲ್ಲಿಯವಳು ಯಾರು? ಏಕೆ ಬಿಟ್ಟು ಹೋಗಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಶಹಾಬಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.