'ರೈತರು ದಾಖಲೆ ನೀಡಿದ 24 ಗಂಟೆಯಲ್ಲಿ ಸಾಲಮನ್ನಾ'

By Kannadaprabha NewsFirst Published Mar 8, 2020, 7:59 AM IST
Highlights

ರೈತರು ದಾಖಲೆ ನೀಡಿದ 24 ಗಂಟೆಯಲ್ಲಿ ಸಾಲಮನ್ನಾ: ಸಿಎಂ| ಎಚ್‌ಡಿಕೆ ಸರ್ಕಾರದ ಸಾಲ ಮನ್ನಾ ರದ್ದಾಗಿಲ್ಲ

ಹಾವೇರಿ[ಮಾ.08]: ಹಿಂದಿನ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರದ ಸಾಲ ಮನ್ನಾ ಯೋಜನೆ ಮುಂದುವರಿಸುವ ಕುರಿತ ಗೊಂದಲಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಂತ್ಯ ಹಾಡಿದ್ದಾರೆ. ಸಾಲ ಮನ್ನಾಕ್ಕೆ ಸಂಬಂಧಿಸಿ ಅರ್ಹತಾ ಪತ್ರಗಳನ್ನು ಪರಿಶೀಲಿಸಲಾಗುತ್ತಿದೆ. ಅರ್ಹ ರೈತರು ದಾಖಲೆಗಳನ್ನು ನೀಡಿದರೆ 24 ಗಂಟೆಗಳಲ್ಲಿ ಸಾಲ ಮನ್ನಾ ಯೋಜನೆಯ ಹಣ ತಲುಪಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಜಿಲ್ಲೆಯ ಹಿರೇಕೆರೂರ ತಾಲೂಕಿನ ದೂದೀಹಳ್ಳಿಯಲ್ಲಿ ಸರ್ವಜ್ಞ ಏತನೀರಾವರಿ ಯೋಜನೆ ಸೇರಿದಂತೆ .286 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಸಾಲ ಮನ್ನಾ ಮಾಡಲು ಅರ್ಹ ರೈತರ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ದಾಖಲೆಗಳು ಸರಿಯಿಲ್ಲದ ಕಾರಣ ಕೆಲ ರೈತರಿಗೆ ಯೋಜನೆ ಪ್ರಯೋಜನ ಸಿಕ್ಕಿಲ್ಲ. ದಾಖಲೆ ಕೊಟ್ಟರೆ ಈ ಯೋಜನೆಯಡಿ ಸಾಲ ಮನ್ನಾ ಆಗಲಿದೆ. ಈ ಬಗ್ಗೆ ಯಾರೂ ಅನುಮಾನಪಡುವ ಅಗತ್ಯವಿಲ್ಲ ಎಂದರು.

ನೀರಾವರಿ ಯೋಜನೆ ಪೂರ್ಣ:

ರೈತರ ಹೊಲಕ್ಕೆ ನೀರು, ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಟ್ಟಾಗ ಮಾತ್ರ ರೈತ ನೆಮ್ಮದಿ ಹಾಗೂ ಸ್ವಾಭಿಮಾನದಿಂದ ಬದುಕಲು ಸಾಧ್ಯ ಎಂಬ ಅರಿವಿದೆ. ಹಣಕಾಸಿನ ಇತಿಮಿತಿಯಲ್ಲೇ ಬಜೆಟ್‌ನಲ್ಲಿ ರಾಜ್ಯದ ರೈತರಿಗೆ ಕೊಡುಗೆ ನೀಡಿದ್ದೇನೆ. .5 ಸಾವಿರ ಕೋಟಿ ಏತ ನೀರಾವರಿ ಯೋಜನೆಗೆ ತೆಗೆದಿಟ್ಟಿದ್ದೇವೆ. ಆ ಮೂಲಕ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣ ಮಾಡಬೇಕೆಂಬ ಸಂಕಲ್ಪದೊಂದಿಗೆ ಹೆಜ್ಜೆ ಇಟ್ಟು ಮುಂದೆ ಸಾಗುತ್ತಿದ್ದೇವೆ. ನಾಡಿನ ರೈತ ಸಮುದಾಯ ಇಂದಿಗೂ ಅನೇಕ ಸಂಕಷ್ಟದಲ್ಲಿ ಸಿಲುಕಿದೆ. ಹೇಗಾದರೂ ಮಾಡಿ ರೈತ ನೆಮ್ಮದಿಯಿಂದ ಬದುಕಬೇಕೆಂಬುದು ನಮ್ಮ ಸಂಕಲ್ಪ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಮಾರ್ಚ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!