ಜಲ ಸಂಪನ್ಮೂಲ ವಿವಿ ಆಗಲಿದೆಯೇ ವಾಲ್ಮೀ?

Kannadaprabha News   | Kannada Prabha
Published : Mar 23, 2026, 06:53 AM IST
Walmi

ಸಾರಾಂಶ

ಭವಿಷ್ಯದಲ್ಲಿ ನೀರಿಗಾಗಿ ತೀವ್ರ ಬಿಕ್ಕಟ್ಟು ಉಂಟಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಇದಕ್ಕೆ ಸಮಗ್ರ ಮತ್ತು ಸುಸ್ಥಿರ ಪರಿಹಾರಗಳನ್ನು ಒದಗಿಸಲು ನೀರಿನ ನಿರ್ವಹಣೆಯ ಮೇಲೆ ಕೇಂದ್ರೀಕರಿಸಿದ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸುವಂತೆ ಜಲತಜ್ಞರಿಂದ ಆಗ್ರಹ ಕೇಳಿ ಬಂದಿದೆ.

ಬಸವರಾಜ ಹಿರೇಮಠ

ಧಾರವಾಡ : ಭವಿಷ್ಯದಲ್ಲಿ ನೀರಿಗಾಗಿ ತೀವ್ರ ಬಿಕ್ಕಟ್ಟು ಉಂಟಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಇದಕ್ಕೆ ಸಮಗ್ರ ಮತ್ತು ಸುಸ್ಥಿರ ಪರಿಹಾರಗಳನ್ನು ಒದಗಿಸಲು ನೀರಿನ ನಿರ್ವಹಣೆಯ ಮೇಲೆ ಕೇಂದ್ರೀಕರಿಸಿದ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸುವಂತೆ ಜಲತಜ್ಞರಿಂದ ಆಗ್ರಹ ಕೇಳಿ ಬಂದಿದೆ.

ಪೂರಕವಾಗಿ ಈಗಾಗಲೇ ಧಾರವಾಡದಲ್ಲಿ ನೀರು ಮತ್ತು ಭೂ ನಿರ್ವಹಣಾ ಸಂಸ್ಥೆ (ವಾಲ್ಮಿ) ಇದ್ದು, ಈ ಸಂಸ್ಥೆಯನ್ನೇ ಜಲ ಸಂಪನ್ಮೂಲ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೆ ಏರಿಸಬೇಕೆಂಬ ಬೇಡಿಕೆ ಹಲವು ದಿನಗಳಿಂದ ಇದ್ದು, ಇದೀಗ ಜಲತಜ್ಞರು ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ವಾಲ್ಮೀಯೇ ಸೂಕ್ತ:

ಸಾಮಾನ್ಯವಾಗಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಈಗಿನ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ವಾಲ್ಮಿ ಸಂಸ್ಥೆಯನ್ನೇ ಮೇಲ್ದರ್ಜೆಗೇರಿಸುವುದು ಸೂಕ್ತ ಎಂಬ ಚಿಂತನೆ ಹುಟ್ಟಿಕೊಂಡಿದೆ. ವಾಲ್ಮಿ ಸಂಸ್ಥೆಯನ್ನು 1986ರಲ್ಲಿ ಧಾರವಾಡದಲ್ಲಿ ಸ್ಥಾಪಿಸಲಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಇದನ್ನು ನೀರಿನ ನಿರ್ವಹಣೆಯಲ್ಲಿ ಶ್ರೇಷ್ಠತೆಯ ಕೇಂದ್ರವೆಂದು ಘೋಷಿಸಿದೆ. ಶೈಕ್ಷಣಿಕ ಮತ್ತು ಪ್ರಾಯೋಗಿಕ ತರಬೇತಿ ಬೆಂಬಲಿಸಲು ಸಂಸ್ಥೆಯು ಈಗಾಗಲೇ ಅಗತ್ಯವಾದ ಮೂಲಸೌಕರ್ಯ ಹೊಂದಿದೆ. ಇದು ವಿಶ್ವವಿದ್ಯಾಲಯದ ಸ್ಥಾನಮಾನಕ್ಕೆ ಏರಲು ಸೂಕ್ತವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಸಂಸ್ಥೆಯು 75 ಎಕರೆ ಕೃಷಿ ಪ್ರದೇಶವನ್ನು ಒಳಗೊಂಡಂತೆ 137 ಎಕರೆ ಭೂಮಿಯನ್ನು ಹೊಂದಿದೆ. ಜತೆಗೆ, ಆಡಳಿತಾತ್ಮಕ ಬ್ಲಾಕ್, ಶೈಕ್ಷಣಿಕ ಕಟ್ಟಡಗಳು, ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ಅತಿಥಿಗೃಹ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಹೊಂದಿದೆ. ಮೂಲಸೌಕರ್ಯ ಈಗಾಗಲೇ ಜಾರಿಯಲ್ಲಿರುವುದರಿಂದ ಸರ್ಕಾರ ನೂತನ ವಿವಿಗೆ ಹೆಚ್ಚುವರಿ ವೆಚ್ಚ ಭರಿಸಬೇಕಾಗಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ಸಿಎಂಗೆ ಪ್ರಸ್ತಾವನೆ:

ವಾಲ್ಮಿಯನ್ನು ಜಲಸಂಪನ್ಮೂಲ ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ತುಸು ಆಸಕ್ತಿ ತೋರಿದರೆ, ನಮ್ಮ ತಜ್ಞರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಸಿದ್ಧರಿದ್ದಾರೆ ಎಂದು ಹೇಳುವ ವಾಲ್ಮಿ ಮಾಜಿ ನಿರ್ದೇಶಕರು ಹಾಗೂ ಜಲತಜ್ಞರಾದ ಡಾ। ರಾಜೇಂದ್ರ ಪೋದ್ದಾರ, ಭಾರತದಲ್ಲಿ ಪ್ರಸ್ತುತ ಅಂತಹ ಯಾವುದೇ ವಿಶೇಷ ವಿಶ್ವವಿದ್ಯಾಲಯವಿಲ್ಲ ಮತ್ತು ಕರ್ನಾಟಕ ಜಲಸಂಪನ್ಮೂಲ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಮೂಲಕ ಇತರ ರಾಜ್ಯಗಳಿಗೆ ಮಾದರಿಯಾಗಬಹುದು ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ದೊಡ್ಡ ಪ್ರಮಾಣದ ಜಲ ಸಂಪನ್ಮೂಲ ಅಭಿವೃದ್ಧಿ ಯೋಜನೆಗಳಿಗೆ ಸಾಕ್ಷಿಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಮಳೆಯಾಗುತ್ತಿದ್ದರೂ ಅದನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ನೀರಿನ ಬೇಡಿಕೆ ಹೆಚ್ಚುತ್ತಲೇ ಇದೆ. ಇದು ಅನೇಕ ಪ್ರದೇಶಗಳಲ್ಲಿ ನೀರಿನ ಕೊರತೆಗೆ ಕಾರಣವಾಗುತ್ತಿದೆ. ನೀರಿನ ನಿರ್ವಹಣೆ ಹೆಚ್ಚು ಸವಾಲಿನದ್ದಾಗುತ್ತಿದ್ದು, ತಜ್ಞರು 2030ರ ವೇಳೆಗೆ ತೀವ್ರ ನೀರಿನ ಬಿಕ್ಕಟ್ಟು ಉಂಟಾಗಲಿದೆ ಎಂದು ಊಹಿಸಿದ್ದಾರೆ. ಇದು ಹೆಚ್ಚಾಗಿ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಉಂಟಾಗುತ್ತಿದೆ ಎಂದು ಪೋದ್ದಾರ ತಿಳಿಸಿದರು.

ಜಲಸಂಪನ್ಮೂಲ ನಿರ್ವಹಣೆಗೆ ಮೀಸಲಾಗಿರುವ ಸಮಗ್ರ ಸಂಸ್ಥೆಯ ಅಗತ್ಯವಿದೆ. ನಮ್ಮಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ನೀರಿದ್ದರೂ ಅದನ್ನು ಸರಿಯಾಗಿ ಬಳಸುತ್ತಿಲ್ಲ. ಜತೆಗೆ ಬರುವ ದಿನಗಳಲ್ಲಿ ನೀರು ಮತ್ತು ಭೂಮಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ಎದುರಾಗುವ ನಿರೀಕ್ಷೆಯಿದೆ. ಅವುಗಳನ್ನು ನಿವಾರಿಸಲು ಪ್ರತ್ಯೇಕ ವಿಶ್ವವಿದ್ಯಾಲಯ ಅಗತ್ಯವಾಗಿದೆ ಎಂದು ಭಾರತ ಏಕತಾ ಆಂದೋಲನದ ಅಧ್ಯಕ್ಷ ಮಹಾದೇವ ಹೊರಟ್ಟಿ ಸಹ ಈ ಪ್ರಸ್ತಾವನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಿರ್ಣಯ ಸರ್ಕಾರಕ್ಕೆ

ಪ್ರತಿ ವರ್ಷ ರಾಜ್ಯದಲ್ಲಿ ನೀರಿನ ಬೇಡಿಕೆ ಹಾಗೂ ಪೂರೈಕೆ ಹೆಚ್ಚುತ್ತಿದೆ. ಇದು ಆಗಾಗ್ಗೆ ರಾಜ್ಯ-ಹೊರ ರಾಜ್ಯದಲ್ಲಿ ನೀರಿನ ಹಂಚಿಕೆಯ ವಿವಾದಗಳಿಗೆ ಕಾರಣವಾಗುತ್ತದೆ. ಮೀಸಲಾದ ವಿಶ್ವವಿದ್ಯಾಲಯ ರಾಜ್ಯಾದ್ಯಂತ ಹೊಸದಾಗಿ ಸೃಷ್ಟಿಯಾಗುವ ಸಮಸ್ಯೆಗಳಿಗೆ ಪರಿಹಾರ ಮತ್ತು ನೀರು ನಿರ್ವಹಣಾ ಪದ್ಧತಿಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಜಲತಜ್ಞರು, ಕೃಷಿತಜ್ಞರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದು, ನಿರ್ಣಯ ಸರ್ಕಾರಕ್ಕೆ ಬಿಟ್ಟಿದ್ದು.

-ಡಾ। ರಾಜೇಂದ್ರ ಪೋದ್ದಾರ, ವಾಲ್ಮೀ ಮಾಜಿ ನಿರ್ದೇಶಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka: ರಾಜ್ಯದಲ್ಲಿ ಬ್ಲ್ಯಾಕ್‌ ಸಂಡೇ : ಪ್ರತ್ಯೇಕ ಅವಘಡಗಳಿಗೆ 10 ಜನರು ಸಾವು
ಅಪಘಾತದಲ್ಲಿ ತಪ್ಪಿಲ್ಲದೆ ಸತ್ತರೆ ಪರಿಹಾರಕ್ಕೆ ಅರ್ಹ