ಬೆಂಗಳೂರು (ಆ.18): ತಮ್ಮ ಬಗ್ಗೆ ಸುಳ್ಳು ಆರೋಪ ಮಾಡುತ್ತಿರುವ ಕಾಂಗ್ರೆಸ್ ಮುಖಂಡರ ವಿರುದ್ಧ ಮಾನನಷ್ಟಮೊಕದ್ದಮೆ ಹೂಡುವ ಬಗ್ಗೆ ವಕೀಲರ ಜತೆ ಚರ್ಚೆ ನಡೆಸಿದ್ದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
‘ಪೊಲೀಸ್ ದಾಖಲೆಗಳನ್ನು ನಂಬದ ಕಾಂಗ್ರೆಸ್ ಮುಖಂಡರಿಗೆ ಈ ನೆಲದ ಕಾನೂನಿನ ಮೇಲೆ, ಪೊಲೀಸ್ ಇಲಾಖೆಯ ಮೇಲೆ ಎಳ್ಳಷ್ಟೂಗೌರವವಿಲ್ಲ. ಆರೋಪ ಮಾಡುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಧ್ರುವನಾರಾಯಣ್ ಮತ್ತು ವಕ್ತಾರ ಲಕ್ಷ್ಮಣ್ ಮತ್ತಿತರ ಕಾಂಗ್ರೆಸಿಗರು ನನ್ನ ಮೇಲೆ ತೇಜೋವಧೆ ಮಾಡುತ್ತಾ ಬಂದಿದ್ದಾರೆ. ಅವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟಮೊಕದ್ದಮೆ ಹೂಡುವ ಬಗ್ಗೆ ನನ್ನ ವಕೀಲರ ಜೊತೆ ಚರ್ಚೆ ನಡೆಸಿದ್ದೇನೆ’ ಎಂದು ರವಿ ಅವರು ಪ್ರಕಟಣೆ ಮೂಲಕ ಹೇಳಿದ್ದಾರೆ.
ಸಿಟಿ ರವಿ ಹುಕ್ಕಾ ಬಾರ್ ಹೇಳಿಕೆ ಹಿಂದಿನ ರಹಸ್ಯ ಬಿಚ್ಚಿಟ್ಟ ಶಿವಕುಮಾರ್!
‘ಸತ್ಯ ಹೊಸ್ತಿಲು ದಾಟುವುದರೊಳಗೆ ಸುಳ್ಳು ಊರೆಲ್ಲ ಸುತ್ತಿ ಬಂದಂತೆ ಎಂಬ ಗಾದೆ ಕೆಪಿಸಿಸಿ ನಾಯಕರಿಗೆ ಅನ್ವಯಿಸುತ್ತದೆ. ಸುಳ್ಳುಗಳನ್ನೇ ನೂರು ಬಾರಿ ಸತ್ಯ..ಸತ್ಯ..ಸತ್ಯ ಎಂದು ಹೇಳುತ್ತಲೇ ಸುಳ್ಳಿನ ಸರಮಾಲೆಗಳನ್ನು ಪೋಣಿಸುತ್ತ ಸುಳ್ಳುಗಳನ್ನು ಸಮಾಜದಲ್ಲಿ ಬಿತ್ತುತ್ತ ಅದನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ನಾನು ಮದ್ಯಪಾನ ಮಾಡಿ ಕಾರು ಓಡಿಸುತ್ತಿದ್ದೆ ಎಂದು ಆರೋಪ ಮಾಡಿ ಹಳೆಯ ಘಟನೆಗಳನ್ನು ಕೆದಕುವ ಕಾಂಗ್ರೆಸ್ ನಾಯಕರಿಗೆ ಕುಡಿತದ ಚಾಳಿ ಇದೆಯೇ? ಆದರೆ ನನಗಂತೂ ಇಲ್ಲ. ನಾನು ಎಂದೂ ಮದ್ಯಪಾನ ಮಾಡಿಲ್ಲ. ಮಾಡುವುದೂ ಇಲ್ಲ. ಈ ಸಂಬಂಧ ಮಾಧ್ಯಮಗಳಿಗೂ ನಾನು ಅನೇಕ ಬಾರಿ ಸ್ಪಷ್ಟನೆ ನೀಡಿದೇನೆ’ ಎಂದಿದ್ದಾರೆ.
‘ಇನ್ನು ನಾನು 1000 ಕೋಟಿ ಆಸ್ತಿ ಮಾಡಿದ್ದೇನೆ ಎಂದು ಸುದ್ದಿವಾಹಿನಿಗೆ ಮಾತನಾಡುವ ವೇಳೆ ಕೆಪಿಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಪುಂಖಾನು ಪುಂಖವಾಗಿ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಅವರ ಹೇಳಿಕೆಗೂ ಈ ವೇಳೆ ಸಷ್ಟನೆ ನೀಡುತ್ತಿದ್ದೇನೆ. ನನ್ನ ಬಳಿ ಬೇನಾಮಿ ಆಸ್ತಿ ಇದ್ದರೆ ಕಾಂಗ್ರೆಸ್ ನಾಯಕರು ದಾಖಲೆ ಸಹಿತ ಚರ್ಚೆಗೆ ಬರಲಿ. ಅದು ಸ್ಪಷ್ಟವಾಗಿದ್ದರೆ ಅದನ್ನು ಅವರಿಗೆ ದಾನ ಕೊಟ್ಟುಬಿಡುತ್ತೇನೆ. ಅವರ ಸುಳ್ಳು ಆರೋಪಕ್ಕೆ ಸಂಬಂಧಿಸಿದಂತೆ ಅವರ ಮೇಲೂ ಮಾನನಷ್ಟಮೊಕದ್ದಮೆಯನ್ನು ಹಾಕಲು ನನ್ನ ವಕೀಲರಲ್ಲಿ ಚರ್ಚಿಸಿದ್ದೇನೆ’ ಎಂದು ತಿಳಿಸಿದ್ದಾರೆ.