ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕೇ ಹೊರತು ಕೇಂದ್ರ ಸರ್ಕಾರದ ಪ್ರತಿನಿಧಿಗಳ ರೀತಿಯಲ್ಲಿ ಕೆಲಸ ಮಾಡಬಾರದು' ಎಂದು ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು(ಆ.21): ರಾಜಕಾರಣಿಗಳ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ನೀಡುವ ಸಂಬಂಧ ರಾಜ್ಯಪಾಲರು ತಾರತಮ್ಯ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ನಡೆಸಿದ ಅಕ್ರಮ ಪ್ರಕರಣದಲ್ಲಿ ಒಂದು ವರ್ಷವಾದರೂ ಪ್ರಾಸಿಕ್ಯೂಷನ್ ನೀಡದ ರಾಜ್ಯಪಾಲರು ನನ್ನ ವಿರುದ್ಧದ ಮನವಿ ನೀಡಿದ ದಿನವೆ ಶೋಕಾಸ್ ನೀಡಿದ್ದಾರೆ. ಈ ತಾರತಮ್ಯವೇಕೆ?” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕೇ ಹೊರತು ಕೇಂದ್ರ ಸರ್ಕಾರದ ಪ್ರತಿನಿಧಿಗಳ ರೀತಿಯಲ್ಲಿ ಕೆಲಸ ಮಾಡಬಾರದು' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಮೊರೆ ಹೋದ ಎಸ್‌ಐಟಿ!
'ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಈಗ ಕೇಂದ್ರ ಸಚಿವ ಆಗಿರುವ ಕುಮಾರಸ್ವಾಮಿ ಅವರ ವಿರುದ್ಧ ತನಿಖೆಗೆ ಅನುಮತಿಸುವಂತೆ ಲೋಕಾಯುಕ್ತ ಪೊಲೀಸರು 2023ರ ನವೆಂಬರ್‌ನಲ್ಲಿಯೇ ರಾಜ್ಯಪಾಲರಲ್ಲಿ ಮನವಿ ಮಾಡಿದ್ದರು ಆದರೆ, ಅದಕ್ಕೆ ರಾಜ್ಯಪಾಲರು ಅನುಮತಿಸಿಲ್ಲ. ಅದೇ ಟಿ.ಜೆ. ಅಬ್ರಹಾಂ ಅವರು ನನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ ದಿನವೇ ರಾಜ್ಯಪಾಲರು ನನಗೆ ಶೋಕಾಸ್ ನೋಟಿಸ್ ನೀಡಿದ್ದರು. ಇಂತಹ ತಾರತಮ್ಯವೇಕೆ' ಎಂದು ಪ್ರಶ್ನಿಸಿದರು.