ಬೇರೆಯವರ ಅನುಕರಣೆಯಿಂದ ಬ್ರಾಹ್ಮಣರು ತಮ್ಮತನ ಕಳೆದುಕೊಳ್ಳುತ್ತಿದ್ದಾರೆ: ಸ್ವರ್ಣವಲ್ಲಿ ಶ್ರೀಗಳು ಕಳವಳ

By Kannadaprabha NewsFirst Published Jan 30, 2024, 9:12 AM IST
Highlights

ಸಂಸ್ಕಾರ, ಪರಂಪರೆ, ಮೌಲ್ಯಗಳನ್ನು ತೊರೆದು, ಬೇರೆಯವರ ಅನುಕರಣೆಗೆ ಮುಂದಾಗಿ ನಾವು ನಮ್ಮತನ ಕಳೆದುಕೊಳ್ಳುತ್ತಿದ್ದೇವೆ. ಜಗತ್ತೇ ಬ್ರಾಹ್ಮಣರ ನಡೆ-ನುಡಿಗಳನ್ನು ಗಮನಿಸುತ್ತಿರುತ್ತದೆ. ಆದ್ದರಿಂದ ನಾವು ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳು ನುಡಿದರು.

ಯಲ್ಲಾಪುರ (ಜ.30) ಉಚ್ಚ ಸಂಸ್ಕಾರ, ಪರಂಪರೆ, ಮೌಲ್ಯಗಳನ್ನು ತೊರೆದು, ಬೇರೆಯವರ ಅನುಕರಣೆಗೆ ಮುಂದಾಗಿ ನಾವು ನಮ್ಮತನ ಕಳೆದುಕೊಳ್ಳುತ್ತಿದ್ದೇವೆ. ಜಗತ್ತೇ ಬ್ರಾಹ್ಮಣರ ನಡೆ-ನುಡಿಗಳನ್ನು ಗಮನಿಸುತ್ತಿರುತ್ತದೆ. ಆದ್ದರಿಂದ ನಾವು ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳು ನುಡಿದರು.

ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಿಪ್ರ ಸಮಾವೇಶದ ಸಾನ್ನಿಧ್ಯ ವಹಿಸಿ, ಸಾಧಕರನ್ನು ಸನ್ಮಾನಿಸಿ, ಅವರು ಆಶೀರ್ವಚನ ನೀಡಿದರು. ಶ್ರದ್ಧಾವಂತರು ಧರ್ಮಮಾರ್ಗದಲ್ಲಿ ಮುನ್ನಡೆಯಬೇಕು. ಆಧುನಿಕತೆಯ ಪ್ರಭಾವಕ್ಕೆ ಸಂಪೂರ್ಣ ಬಲಿಯಾಗದೇ ನಮ್ಮ ಸನಾತನ ಧರ್ಮ, ಸಂಸ್ಕೃತಿ, ಮೌಲ್ಯಗಳನ್ನು ಉಳಿಸಿಕೊಂಡು ಆಧುನಿಕ ವಿಜ್ಞಾನದ ಶೋಧನೆಗಳನ್ನೂ ನಮ್ಮ ಜತೆಗಿರಿಸಿಕೊಂಡು ನಾವು ಮುನ್ನಡೆಯಬೇಕು. ಆಧುನಿಕತೆಯ ರಭಸಕ್ಕೆ ನಮ್ಮ ಪರಂಪರೆ ತೀವೃಗತಿಯಲ್ಲಿ ಕುಸಿಯುತ್ತಿದ್ದು, ಮಠಮಾನ್ಯಗಳಲ್ಲಿ ಮಾತ್ರ ಉಳಿದುಕೊಂಡಿದೆ. ಆಧುನಿಕ ವಿಜ್ಞಾನಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದ್ದು, ಋಷಿ ವಾಕ್ಯವನ್ನು ನಿರ್ಲಕ್ಷಿಸಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರ ಮನ-ಮನೆಗಳಲ್ಲಿ ನಮ್ಮ ಸತ್ಸಂಪ್ರದಾಯವನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಬ್ರಾಹ್ಮಣರಿಗಿರುವ ವಿಶೇಷ ಶಕ್ತಿಯನ್ನು ಬಳಸಿಕೊಂಡು ಸಮಾಜದ ಎಲ್ಲ ವರ್ಗದವರನ್ನು ಜೋಡಿಸಿಕೊಂಡು ಹೋಗಬೇಕು ಎಂದರು.

ನಮ್ಮ ಶಿಕ್ಷಣ ವ್ಯವಸ್ಥೆಯೇ ಸರಿಯಿಲ್ಲ, ಇದು ಪ್ರಜ್ಞಾಹೀನ ವ್ಯವಸ್ಥೆ: ನಿರ್ಭಯಾನಂದ ಸರಸ್ವತಿ ಸ್ವಾಮೀಜಿ

ಎ.ಕೆ.ಬಿ.ಎಂ.ಎಸ್. ರಾಜ್ಯಾಧ್ಯಕ್ಷ ಅಶೋಕ ಹಾರ‍್ನಳ್ಳಿ ಮಾತನಾಡಿ, ಭಾರತೀಯ ಪರಂಪರೆ ರಾಮನ ಆದರ್ಶವನ್ನು ಹೊಂದಿದೆ. ಅಂತೆಯೇ, ಆದಿಶಂಕರರೂ ಭಾರತವನ್ನು ಸಂಚರಿಸಿ, ನಮ್ಮ ಸನಾತನ ಧರ್ಮವನ್ನು ಪುನರುತ್ಥಾನ ಮಾಡಿದ್ದಾರೆ. ನಮ್ಮ ಮಠಮಾನ್ಯಗಳೂ ಇಂತಹ ಮೌಲ್ಯಗಳನ್ನು ಸಂರಕ್ಷಿಸಲು ಬೆನ್ನೆಲುಬಾಗಿ ನಿಂತಿವೆ. ಭವಿಷ್ಯತ್ತಿನ ದೃಷ್ಟಿಯಿಂದ ಬ್ರಾಹ್ಮಣರ ಸಂಘಟನೆ ಇಂದಿನ ತುರ್ತು ಅವಶ್ವಕತೆಯಾಗಿದೆ ಎಂದರು.

ಎ.ಕೆ.ಬಿ.ಎಂ.ಎಸ್. ರಾಜ್ಯ ಮಹಿಳಾ ಸಂಚಾಲಕಿ ಡಾ. ಶುಭಮಂಗಳಾ ಮಾತನಾಡಿ, ಬ್ರಾಹ್ಮಣ ಮಹಿಳೆಯರು ತಮಗಿರುವ ಶಕ್ತಿಯನ್ನು ಸಮಾಜಕ್ಕೆ ತೋರಿಸಬೇಕಾಗಿದೆ. ಸನಾತನ ಧರ್ಮದಲ್ಲಿ ಮಾತೆಯರ ಶಕ್ತಿ ಅಗಾಧವಾಗಿದೆ. ಹಾಗಾಗಿಯೇ ಭಾರತ ಮಾತೆ ಎನ್ನುತ್ತಾರೆ. ಆ ದೃಷ್ಟಿಯಿಂದಲೇ ಬೆಂಗಳೂರಿನಲ್ಲಿ ಮಾತೆಯರ ಸಮಾವೇಶ ನಡೆಸಿ ಸಮಾಜಕ್ಕೆ ಮಹತ್ವದ ಸಂದೇಶ ನೀಡಿದ್ದೇವೆ. ಮಾತೆಯರು ತಮ್ಮತನ ಉಳಿಸಿಕೊಂಡು ಸಂಸ್ಕಾರದತ್ತ ಮುನ್ನಡೆಸಬೇಕು ಎಂದರು. 

ರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಳಿ ಅಧ್ಯಕ್ಷ ಮೋಹನ ಹೆಗಡೆ ಮಾತನಾಡಿ, ನಾವು ಯಾವುದೇ ಬೇಡಿಕೆ ಸಲ್ಲಿಸಿ ಹುಟ್ಟಿಲ್ಲ. ನಮ್ಮ ಆಚಾರ-ವಿಚಾರಗಳಿಂದ ಬ್ರಾಹ್ಮಣರಾಗಿದ್ದೇವೆ. ಕೆಲವರಿಗೆ ಅಧಿಕಾರ ಸಿಕ್ಕಾಗ ಬ್ರಾಹ್ಮಣರನ್ನು ನಿಂದಿಸುವುದು, ಟೀಕಿಸುವುದೇ ಕಾಯಕವಾಗಿದೆ. ಆದ್ದರಿಂದ ಎಲ್ಲ ಬ್ರಾಹ್ಮಣರು ಸಂಘಟಿತರಾದರೆ ಮಾತ್ರ ಅಂತಹವರಿಗೆ ಉತ್ತರ ನೀಡಬಹುದಾಗಿದೆ ಎಂದರು. 

ನಾಡಿನ ವಿವಿಧ ಕ್ಷೇತ್ರದ ಶ್ರೇಷ್ಠ ಸಾಧಕರಾದ ವೈದ್ಯ ಶ್ರೀಧರ ದೇಸಾಯಿ ಗುಂದ, ಕಲಾಕಾರ ಜೆ.ಡಿ. ಭಟ್ಟ ಕೆಕ್ಕಾರ, ನ್ಯಾಯವಾದಿ ಎಂ.ಪಿ. ಭಟ್ಟ ಅಂಕೋಲಾ, ಬಾನ್ಸುರಿ ತಯಾರಕ ಮಂಜುನಾಥ ಹೆಗಡೆ ಸಿದ್ದಾಪುರ, ಹಿರಿಯ ಸಹಕಾರಿ ಶಂಭುಲಿಂಗ ಹೆಗಡೆ ಶಿರಸಿ, ಪಂ. ಗಣಪತಿ ಭಟ್ಟ ಹಾಸಣಗಿ ಯಲ್ಲಾಪುರ ಇವರನ್ನು ಶ್ರೀಗಳು ಸನ್ಮಾನಿಸಿದರು. ಸನ್ಮಾನಿತರ ಪರವಾಗಿ ಗಣಪತಿ ಭಟ್ಟ ಮಾತನಾಡಿದರು.ಮುಕ್ತಾ ಶಂಕರ, ಕುಸುಮಾ ಹೆಗಡೆ, ಸುಜಾತಾ ಹೆಗಡೆ, ಹೇಮಾ ಹೆಗಡೆ, ಅನುರಾಧಾ ಭಟ್ಟ, ಚಂದ್ರಕಲಾ ಭಟ್ಟ ಸನ್ಮಾನ ಪತ್ರ ವಾಚಿಸಿದರು. ಸಂಘಟಕರಲ್ಲೊಬ್ಬರಾದ ಪ್ರಸಾದ ಹೆಗಡೆ ಸ್ವಾಗತಿಸಿದರು. ಡಾ. ರವಿ ಭಟ್ಟ ನಿರ್ವಹಿಸಿದರು. ಜಿಲ್ಲಾ ಸಂಚಾಲಕಿ ನಿರ್ಮಲಾ ಹೆಗಡೆ ವಂದಿಸಿದರು.

Swarnavalli Mutt: ಹಣದಿಂದ ದೊರೆಯುವ ಸುಖ ಶಾಶ್ವತವಲ್ಲ: ಸ್ವರ್ಣವಲ್ಲಿ ಶ್ರೀ

ಎ.ಕೆ.ಬಿ.ಎಂ.ಎಸ್. ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಆರ್. ಗಣೇಶ, ಹಿರಿಯ ವಿದ್ವಾಂಸ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಸ್ವರ್ಣವಲ್ಲಿ ಮಠದ ಅಧ್ಯಕ್ಷ ವಿ.ಎಂ. ಹೆಗಡೆ ಬೊಮ್ಮನಳ್ಳಿ, ನೆಲೆಮಾವು ಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ಗನೂರು, ಸಾಮಾಜಿಕ ಕಾರ್ಯಕರ್ತ ವೆಂಕಟೇಶ ಹೆಗಡೆ ಹೊಸಬಾಳೆ, ಶಶಾಂಕ ಹೆಗಡೆ ಶೀಗೇಹಳ್ಳಿ ಶುಭಕೋರಿದರು.

click me!