ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಾಗೂ ಗಣೇಶ್ ನಡುವಿನ ಗಲಾಟೆಗೆ ಕಾರಣವೇನು ಎನ್ನುವ ವಿಚಾರ ಬಹಿರಂಗವಾಗಿದೆ. ಆಪರೇಷನ್ ಸಂಕ್ರಾಂತಿಯ ರಹಸ್ಯ ವಿವರವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ತಿಳಿಸಿದ ಬಗ್ಗೆ ಆನಂದ್ ಸಿಂಗ್‌ರನ್ನು ಅತೃಪ್ತ ಶಾಸಕರಾದ ಭೀಮಾನಾಯ್ಕ್ ಹಾಗೂ ಗಣೇಶ್ ಪ್ರಶ್ನಿಸಿದ್ದೇ ಇಡೀ ಪ್ರಹಸನಕ್ಕೆ ಕಾರಣ ಎನ್ನಲಾಗಿದೆ.
ಬೆಂಗಳೂರು : ಆಪರೇಷನ್ ಸಂಕ್ರಾಂತಿಯ ರಹಸ್ಯ ವಿವರವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ತಿಳಿಸಿದ ಬಗ್ಗೆ ಆನಂದ್ ಸಿಂಗ್‌ರನ್ನು ಅತೃಪ್ತ ಶಾಸಕರಾದ ಭೀಮಾನಾಯ್ಕ್ ಹಾಗೂ ಗಣೇಶ್ ಪ್ರಶ್ನಿಸಿದ್ದೇ ಇಡೀ ಪ್ರಹಸನಕ್ಕೆ ಕಾರಣ ಎನ್ನಲಾಗಿದೆ. ರೆಸಾರ್ಟ್‌ನಲ್ಲಿ ನಡೆದ ತಡರಾತ್ರಿ ಔತಣಕೂಟದ ವೇಳೆ, ಬಿಜೆಪಿ ನಾಯಕರೊಂದಿಗೆ ನಮ್ಮ ಸಂಪರ್ಕ ಹಾಗೂ ನಾವಿದ್ದ ತಾಣದ ಮಾಹಿತಿಯನ್ನು ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರಿಗೆ ನೀವು ತಿಳಿಸಿದಿರಿ. ಇದರಿಂದ ಸಿದ್ದರಾಮಯ್ಯ ನಮ್ಮನ್ನು ಸಂಪರ್ಕಿಸಲು ಸಾಧ್ಯವಾಯಿತು.
ಹೀಗಾಗಿ ನಮ್ಮ ರಾಜಕೀಯ ಯೋಜನೆಗಳಿಗೆ ಮುಳುವಾದಿರಿ ಎಂದು ಈ ಇಬ್ಬರು ಶಾಸಕರು ಆನಂದ್ ಸಿಂಗ್ ಮೇಲೆ ಆರೋಪ ಮಾಡಿದರು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಆನಂದ್ ಸಿಂಗ್ ರೇಗಿದಾಗ ನಡೆದ ಈ ಘಟನೆಗೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್‌ನ ಎಲ್ಲಾ ಶಾಸಕರಿಗೂ ಈಗಲ್ಟನ್ ರೆಸಾರ್ಟ್‌ನ ಪಾರ್ಟಿ ಲಾಂಜ್‌ನಲ್ಲಿ ಶನಿವಾರ ರಾತ್ರಿ ಔತಣಕೂಟ ಏರ್ಪಡಿಸಲಾಗಿತ್ತು. ಈ ಔತಣಕೂಟದಲ್ಲಿ ಬಳ್ಳಾರಿಯ ಶಾಸಕರು ಪ್ರತ್ಯೇಕವಾಗಿ ಕುಳಿತು ಚರ್ಚೆ ನಡೆಸುತ್ತಿದ್ದರು.
ಆನಂದ್ ಸಿಂಗ್, ಭೀಮಾನಾಯ್ಕ್, ಗಣೇಶ್ ಮತ್ತು ಸಚಿವ ತುಕಾರಾಂ ಅವರು ಒಂದು ಟೇಬಲ್‌ನಲ್ಲಿ ಕುಳಿತು ಮಾತುಕತೆ ನಡೆಸುತ್ತಿದ್ದರು. ಚರ್ಚೆಯು ಕ್ರಮೇಣ ಆಪರೇಷನ್ ಸಂಕ್ರಾಂತಿ ವಿಚಾರಕ್ಕೆ ತಿರುಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಆನಂದ್ ಸಿಂಗ್ ಹಾಗೂ ಗಣೇಶ್ ನಡುವೆ ತೀವ್ರ ಗಲಾಟೆ ಆರಂಭವಾಗಿದೆ. ಒಂದು ಹಂತದಲ್ಲಿ ಆಪರೇಷನ್ ಸಂಕ್ರಾಂತಿಯ ಹಣಕಾಸಿನ ವ್ಯವಹಾರಗಳನ್ನೂ ಬಹಿರಂಗವಾಗಿ ಹೇಳಿಕೊಂಡು ಇಬ್ಬರೂ ಚೀರಾಡಿದರು.
ನಾನು ಬಿಜೆಪಿಗೆ ಸೇರಲು ಸಾಧ್ಯವಾಗದಿರುವುದು ಹಾಗೂ ನನ್ನ ಸಚಿವ ಸ್ಥಾನ ತಪ್ಪಲು ನೀನೇ ಕಾರಣ ಎಂದು ಗಣೇಶ್ ಅವರು ಆನಂದ್ ಸಿಂಗ್ ವಿರುದ್ಧ ನೇರ ಆರೋಪ ಮಾಡಿದರು. ಇದಕ್ಕೆ ಕುಪಿತಗೊಂಡ ಆನಂದ್ ಸಿಂಗ್, ನಿನ್ನನ್ನು ರಾಜಕೀಯಕ್ಕೆ ತಂದಿದ್ದೇ ನಾನು. ನಿನ್ನ ಅಪ್ಪನನ್ನು ಜಿ.ಪಂ. ಛೇರ್‌ಮನ್ ಮಾಡಿದೆ. ನನ್ನ ವಿರುದ್ಧವೇ ಮಾತನಾಡುವೆಯಾ ಎಂದು ಹಲ್ಲೆಗೆ ಮುಂದಾದರು ಎನ್ನಲಾಗಿದೆ. ಆಗ ಇಬ್ಬರೂ ಕೈ-ಕೈ ಮಿಲಾಯಿಸಲು ಮುಂದಾದಾಗ ಲಾಂಜ್ ಬಾರ್ ಸಿಬ್ಬಂದಿ ಜಗಳ ಬಿಡಿಸಿ ಕಳುಹಿಸಿದರು ಎಂದು ತಿಳಿದುಬಂದಿದೆ.
ಬಳಿಕ ರಾತ್ರಿ ಈ ಶಾಸಕರು 2. 30ರ ವೇಳೆ ಭೀಮಾ ನಾಯ್ಕ್ ರ ಕೊಠಡಿಗೆ ತೆರಳಿದರು. ಅಲ್ಲಿ ಮತ್ತೆ ಇದೇ ವಿಷಯಕ್ಕೆ ಜಗಳ ತೆಗೆದಿದ್ದಾರೆ. ಈ ವೇಳೆ ಕುಪಿತಗೊಂಡ ಗಣೇಶ್ ಕೊಠಡಿಯಲ್ಲಿದ್ದ ಟೀಪಾಯ್‌ಗೆ ಹೊಡೆದು ಬಾಟಲಿ ಒಡೆದಿದ್ದಾರೆ. ಬಳಿಕ ಆನಂದ್ ಸಿಂಗ್ ಅವರನ್ನು ತಳ್ಳಿದ್ದು, ರಭಸಕ್ಕೆ ಆನಂದ್ ಸಿಂಗ್ ಗಾಜಿನ ಚೂರುಗಳ ಮೇಲೆ ಬಿದ್ದಿದ್ದಾರೆ. ಈ ವೇಳೆ ಅವರ ಕಣ್ಣಿನ ಹುಬ್ಬು, ರೆಪ್ಪೆ ಭಾಗಕ್ಕೆ ಗಾಜು ಚುಚ್ಚಿ ಗಾಯವಾಗಿದೆ. ಈ ವೇಳೆ ನೋಡ ನೋಡುತ್ತಿದ್ದಂತೆ ಕಣ್ಣಿನಲ್ಲಿ ಊತ ಕಾಣಿಸಿಕೊಂಡಿದೆ. ಕೂಡಲೇ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.
ಮತ್ತೊಂದು ಮೂಲದ ಪ್ರಕಾರ, ಗಲಾಟೆ ನಡುವೆ ಮದ್ಯದ ನಶೆಯಲ್ಲಿ ಗಣೇಶ್ ಬಾಟಲಿ ಎತ್ತಿಕೊಂಡು ಆನಂದ್ ಸಿಂಗ್ ಬಲಭಾಗದ ಹಣೆ ಹಾಗೂ ಕಣ್ಣಿನ ಭಾಗಕ್ಕೆ ಹೊಡೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಬಲವಾದ ಏಟಿಗೆ ಪ್ರಜ್ಞೆ ತಪ್ಪಿದಂತಾಗಿ ಆನಂದ್ ಸಿಂಗ್ ಕುಸಿದು ಬಿದ್ದಿದ್ದಾರೆ. ಆಗ ಆನಂದ್ ಸಿಂಗ್‌ರ ಬಲಗಣ್ಣು ಊದಿಕೊಂಡಿದ್ದು, ಕಣ್ಣಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ಎಡ ಭಾಗದ ಪಕ್ಕೆಲುಬಿಗೂ ಏಟಾಗಿದ್ದು, ವೈದ್ಯರು ಅದರ ಸ್ಕ್ಯಾನಿಂಗ್ ವರದಿ ತರಿಸಿಕೊಂಡಿದ್ದಾರೆ ಎನ್ನಲಾಗಿದೆ.