
ಬೆಂಗಳೂರು(ಅ.26): ಬೆಂಗಳೂರಿಗೆ ಜಾಗತಿಕ ಮಟ್ಟದಲ್ಲಿ ಇರುವ ಖ್ಯಾತಿ ಹಾಗೂ ಬ್ರ್ಯಾಂಡ್ ಹೆಸರಿನಿಂದ ಸೃಷ್ಟಿಯಾಗಲಿರುವ ವಿಫುಲ ಅವಕಾಶಗಳನ್ನು ಬಳಸಿಕೊಂಡು ರಾಮನಗರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ‘ರಾಮನಗರ’ ಜಿಲ್ಲೆಯ ಹೆಸರನ್ನು ‘ಬೆಂಗಳೂರು ದಕ್ಷಿಣ’ ಎಂದು ಮರು ನಾಮಕರಣ ಮಾಡಲು ಪ್ರಸ್ತಾಪಿಸಿದ್ದಾರೆ. ತನ್ಮೂಲಕ ಕೆಂಪೇಗೌಡರು ಕಟ್ಟಿದ ಬೆಂಗಳೂರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ನೇಮ್‌ನಿಂದ ರಾಮನಗರ ಜಿಲ್ಲೆಯ ತಾಲೂಕುಗಳ ರೂಪುರೇಷೆ ಬದಲಿಸಲು ಮುಂದಡಿ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು ಎಂದಾಕ್ಷಣ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆದಾರರನ್ನು ಆಕರ್ಷಿಸಬಹುದು. ತನ್ಮೂಲಕ ಆರ್ಥಿಕ ಪ್ರಗತಿಗೆ ವೇಗ ನೀಡಿ ಪೂರಕವಾಗಿ ಎಲ್ಲ ಕ್ಷೇತ್ರಗಳಲ್ಲೂ ರಾಮನಗರ ಜಿಲ್ಲೆಯನ್ನು ಅಭಿವೃದ್ಧಿಪಡಿಸಬಹುದು. ಈ ನಿಟ್ಟಿನಲ್ಲಿ ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ಐದೂ ತಾಲೂಕುಗಳನ್ನು ಸೇರಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮಾಡಬೇಕು. ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲಾ ಕೇಂದ್ರವಾಗಿ ಮುಂದುವರೆಸಬೇಕು ಎಂದು ಡಿ.ಕೆ. ಶಿವಕುಮಾರ್ ಅವರು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ತಜ್ಞರು ಹಾಗೂ ಜನಸಾಮಾನ್ಯರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಡಿಕೆಶಿ ತಮ್ಮ ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಕನಕಪುರವನ್ನು ಬೆಂಗಳೂರಿಗೆ ಸೇರಿಸ್ತಾರೆ: ಎಚ್‌ಡಿಕೆ ಆರೋಪ
ಉದ್ದೇಶವೇನು?
ಸಿಟಿ ಆಫ್ ಮಿಲೇನಿಯಲ್ಸ್ ಎಂದೇ ಜನಪ್ರಿಯವಾಗಿರುವ ಬೆಂಗಳೂರು ನಗರಕ್ಕೆ ಇರುವ ವಿಫುಲ ಅವಕಾಶಗಳನ್ನು ರಾಮನಗರಕ್ಕೂ ವಿಸ್ತರಿಸುವುದೇ ಇದರ ಹಿಂದಿನ ಪ್ರಮುಖ ಉದ್ದೇಶ. ಸ್ಟಾರ್ಟ್ ಅಪ್, ಐಟಿ-ಬಿಟಿ, ಸೇವಾ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಹೂಡಿಕೆಗೆ ಬೆಂಗಳೂರು ಸ್ವರ್ಗ ಎಂಬ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಇವುಗಳ ಜತೆಗೆ ಆರ್ಥಿಕತೆ ವೃದ್ಧಿಸಿದಂತೆ ರಿಯಲ್ ಎಸ್ಟೇಟ್, ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳಿಗೆ ಹೂಡಿಕೆ ಹರಿದುಬರಲಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ.
ಬೆಂಗಳೂರು ನಗರ ವಿಸ್ತಾರಗೊಳ್ಳುವ ಜತೆಗೆ ಯೋಜನಾ ಬದ್ಧವಾಗಿ ನಗರ ನಿರ್ಮಾಣವಾಗಲಿದೆ. ಜತೆಗೆ ಬೆಂಗಳೂರು ನಗರದಲ್ಲಿರುವ ಮೂಲಭೂತ ಸೌಕರ್ಯಗಳು ಕನಕಪುರ, ರಾಮನಗರ, ಚನ್ನಪಟ್ಟಣ ಹಾಗೂ ಮಾಗಡಿ ತಾಲೂಕುಗಳಿಗೂ ವಿಸ್ತರಣೆಯಾಗಲಿದೆ ಎಂಬುದು ಪ್ರಸ್ತಾವನೆಯ ಪ್ರಮುಖ ಉದ್ದೇಶ.
ಕನಕಪುರ ಪಟ್ಟಣ ಪುನಃ ಬೆಂಗಳೂರಿಗೆ ಸೇರ್ಪಡೆ: ಸುಳಿವು ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್
ಬ್ರ್ಯಾಂಡ್ ಬೆಂಗಳೂರು ಅಭಿಪ್ರಾಯ ಸಂಗ್ರಹಣೆಯಲ್ಲೂ ಸಾಕಷ್ಟು ಮಂದಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವಂತೆ ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಡಿ.ಕೆ. ಶಿವಕುಮಾರ್ ಉದ್ದೇಶಿಸಿದ್ದಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.
ಏನೇನು ಯೋಜನೆಗಳು?
* ರಾಮನಗರ ಜಿಲ್ಲೆಯ 5 ತಾಲೂಕು ಸೇರಿ ಬೆಂಗಳೂರು ದಕ್ಷಿಣ ಜಿಲ್ಲೆ ರಚನೆ
* ರಾಮನಗರ ಜಿಲ್ಲಾ ಕೇಂದ್ರವಾಗಿ ಮುಂದುವರಿಕೆ
* ಬೆಂಗಳೂರು ಎಂಬ ಬ್ರ್ಯಾಂಡ್ ಗೆ ಜಾಗತಿಕ ಮಟ್ಟದಲ್ಲಿರುವ ಖ್ಯಾತಿ ಸದ್ಬಳಕೆಗೆ ಪ್ರಸ್ತಾವನೆ
* ಬೆಂಗಳೂರು ಬ್ರ್ಯಾಂಡ್ ನಿಂದ ಹೂಡಿಕೆ ಹರಿದು ಬರುವ ನಿರೀಕ್ಷೆ
* ಐಟಿ-ಬಿಟಿ, ಸೇವಾಕ್ಷೇತ್ರ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಳ
* ಉದ್ಯಮಗಳಿಂದ ಉದ್ಯೋಗವಕಾಶ ಸೃಷ್ಟಿಯಾಗಲು ಅವಕಾಶ
* ಬೆಂಗಳೂರಿನ ಮೆಟ್ರೋ, ಸಬ್ ಅರ್ಬನ್, ಹೈಡೆನ್ಸಿಟಿ ಕಾರಿಡಾರ್ ಗಳ ವಿಸ್ತರಣೆ
* ಬೆಂಗಳೂರು ದಕ್ಷಿಣ ಜಿಲ್ಲೆ ತಾಲೂಕುಗಳನ್ನು ಬೆಂಗಳೂರು ಉಪನಗರಗಳಾಗಿ ಅಭಿವೃದ್ಧಿಪಡಿಸಲು ಅವಕಾಶ
* ಬೆಂಗಳೂರನ್ನು ವಿಸ್ತಾರ ಹಾಗೂ ಯೋಜಿತವಾಗಿ ಬೆಳೆಸಲು ಅನುಕೂಲ.
* ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಬೆಂಗಳೂರು ವೇಗದಲ್ಲೇ ರಾಮನಗರವೂ ಅಭಿವೃದ್ಧಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ