Bengaluru Chinnaswamy stampede: ಆರ್‌ಸಿಬಿ ಫ್ಯಾನ್ಸ್ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ ಇದೇ ಕಾರಣ!

Ravi Janekal   | Kannada Prabha
Published : Jun 05, 2025, 07:16 AM ISTUpdated : Jun 05, 2025, 09:30 AM IST
Bengaluru Chinnaswamy stampede

ಸಾರಾಂಶ

ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಅಭಿಮಾನಿಗಳ ನಡುವೆ ಕಾಲ್ತುಳಿತ ಉಂಟಾಗಿ ಹಲವರು ಗಾಯಗೊಂಡಿದ್ದಾರೆ. ಕ್ರೀಡಾಂಗಣದ ಬಳಿ ಅಪಾರ ಜನಸಂದಣಿ ನೆರೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಬೆಂಗಳೂರು (ಜೂ.5) : ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಅಪಾರ ಪ್ರಮಾಣದ ಪ್ರೇಕ್ಷಕರು ಮಧ್ಯಾಹ್ನ ವೇಳೆಗೇ ಕ್ರೀಡಾಂಗಣದ ಬಳಿ ಜಮಾಯಿಸಿದ್ದರು. ವಾಹನಗಳಿಗೆ ಸಮೀಪದ ರಸ್ತೆಗಳಲ್ಲಿ ಪ್ರವೇಶ ನಿರಾಕರಿಸಿದ್ದರಿಂದ ಸಾವಿರಾರು ಮಂದಿ ಮೆಟ್ರೋ ಮೂಲಕ ಕ್ರೀಡಾಂಗಣದ ಬಳಿ ಬಂದಿದ್ದರು. ಇದರಿಂದ ಮೆಟ್ರೋ ಕೂಡಾ ತುಂಬಿ ತುಳುಕುತ್ತಿತ್ತು. ಸಂಜೆ 4 ಗಂಟೆ ತನಕ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಆ ಬಳಿಕ ಕೈಮೀರಿತು.

ಸಂಜೆ 5ರ ವೇಳೆಗೆ ಆಟಗಾರರು ವಿಧಾನಸೌಧ ಬಳಿ ಆಗಮಿಸಿದರು. ಅಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ವಿಧಾನಸೌಧ ಮಾತ್ರವಲ್ಲದೇ ಕ್ರೀಡಾಂಗಣದ ಗೇಟ್‌ಗಳ ಬಳಿಯೂ ಅಪಾರ ಪ್ರಮಾಣದ ಪ್ರೇಕ್ಷಕರು ಜಮಾಯಿಸಿದ್ದರು. ಎಲ್ಲರೂ ಕ್ರೀಡಾಂಗಣಕ್ಕೆ ಒಂದೇ ಬಾರಿಗೆ ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತ ಸಂಭವಿಸಿತು. 5.15ರ ವೇಳೆಗೆ ಮಳೆ ಸುರಿದ ಕಾರಣ ಪ್ರೇಕ್ಷಕರು ಓಡಲು ಶುರು ಮಾಡಿದ್ದರಿಂದ ಮತ್ತಷ್ಟು ಅನಾಹುತ ಘಟಿಸಿತು. ಆಟಗಾರರು ವಿಧಾನಸೌಧದಿಂದ ಕ್ರೀಡಾಂಗಣ ಬಳಿ ಬರುವಾಗ ಮತ್ತಷ್ಟು ಪ್ರೇಕ್ಷಕರು ಗೇಟ್‌ಗಳ ಬಳಿ ಜಮಾಯಿಸಿದರು. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್‌ ಮಾಡಬೇಕಾಯಿತು. ಮಕ್ಕಳು, ಮಹಿಳೆಯರು ಕೂಡಾ ಜನಸಂದಣಿ ನಡುವೆ ಸಿಲುಕಿ ತೊಂದರೆ ಅನುಭವಿಸಿದರು.

ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕಾಲ್ನಡಿಗೆಯಲ್ಲಿ 10 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಆದರೆ 1 ಗಂಟೆಯಾದರೂ, ಕ್ರೀಡಾಂಗಣ ತಲುಪಲು ಸಾಧ್ಯವಾಗಲಿಲ್ಲ. ಕ್ರೀಡಾಂಗಣದ ಹಲವು ಭಾಗಗಳಲ್ಲಿ 12 ಅಡಿ ಎತ್ತರದ, ಮುಳ್ಳು ತಂತಿಗಳನ್ನು ಹಾಕಿರುವ ಗೋಡೆಗಳನ್ನು ಹಾರಿ ಜನರ ಕ್ರೀಡಾಂಗಣದ ಒಳಗೆ ಜಿಗಿಯುತ್ತಿದ್ದ ದೃಶ್ಯಗಳು ಕಂಡುಬಂದವು.

ಗೇಟ್‌ ಬದಲಿಸಿದ್ದರಿಂದ ಗೊಂದಲ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 20ಕ್ಕೂ ಹೆಚ್ಚು ಗೇಟ್‌ಗಳು ಇದ್ದರೂ, ಆರಂಭದಲ್ಲಿ ಕೇವಲ 3 ಗೇಟ್‌ಗಳನ್ನಷ್ಟೇ ತೆರೆಯಲಾಗಿತ್ತು. ಕ್ರೀಡಾಂಗಣ ಪ್ರವೇಶಕ್ಕೆ ಆನ್‌ಲೈನ್‌ ಪಾಸ್‌ ಪಡೆಯಬೇಕು ಎಂದು ಆರ್‌ಸಿಬಿ ಸಾಮಾಜಿಕ ತಾಣಗಳಲ್ಲಿ ತಿಳಿಸುವ ಹೊತ್ತಿಗೆ ಕ್ರೀಡಾಂಗಣದ ಬಳಿ ಏನಿಲ್ಲವೆಂದರೂ 30,000-40,000 ಮಂದಿ ನೆರೆದಿದ್ದರು. ಇವರಲ್ಲೇ ಕ್ರೀಡಾಂಗಣದೊಳಕ್ಕೆ ಪ್ರವೇಶಿಸಲು ತಮ್ಮದೇ ದಾರಿಗಳನ್ನು ಹುಡುಕುತ್ತಿದ್ದರು.

ಆರಂಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಗೇಟ್‌ ನಂ.10ರಲ್ಲಿ ಪ್ರವೇಶವಿದೆ ಎಂದು ಹೇಳಲಾಗಿತ್ತು. ಆದರೆ ದಿಢೀರ್‌ ಗೇಟ್‌ ಸಂಖ್ಯೆ ಬದಲಿಸಿ 12 ಮತ್ತು 13ನೇ ಗೇಟ್‌ ಮೂಲಕ ಕ್ರೀಡಾಂಗಣಕ್ಕೆ ಪ್ರವೇಶಿಸಲು ಸೂಚಿಸಲಾಯಿತು. ಪ್ರೇಕ್ಷಕರಿಗೆ ಮುಖ್ಯ ಗೇಟ್‌ನ ಪಕ್ಕದಲ್ಲಿರುವ ಸಣ್ಣ ಗೇಟ್‌ಗಳ ಮೂಲಕ ಒಳ ಪ್ರವೇಶಿಸಲು ಸೂಚಿಸಲಾಗಿದ್ದರೂ, ಮುಖ್ಯ ಗೇಟ್‌ನಿಂದಲೂ ಒಳ ನುಗ್ಗಲು ಯತ್ನಿಸಿದರು. ಸಣ್ಣ ಪ್ರವೇಶ ದ್ವಾರದ ಮೂಲಕ ಏಕಕಾಲಕ್ಕೆ 300-400 ಜನ ನುಗ್ಗಲು ಯತ್ನಿಸಿದ್ದರಿಂದ ಕಾಲ್ತುಳಿತ ಸಂಭವಿಸಿತು. ಅನೇಕರು ಗೇಟ್‌ಗಳ ಮಧ್ಯೆ ಸಿಲುಕಿ ನೋವಿನಲ್ಲಿ ಒದ್ದಾಡಿದರು.

ಹೊರಗೆ ಜನರ ರೋಧನೆ, ಒಳಗೆ ಸಂಭ್ರಮಾಚರಣೆ!

ಸಂಜೆ 4ರಿಂದ 5 ಗಂಟೆ ವೇಳೆಗಾಗಲೇ ಕ್ರೀಡಾಂಗಣ ಬಳಿ ಕಾಲ್ತುಳಿತ ಸಂಭವಿಸಿ, ಹಲವರು ಸಾವನ್ನಪ್ಪಿದ್ದರು. ಹತ್ತಾರು ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ತಮ್ಮವರನ್ನು ಕಳೆದುಕೊಂಡ ಜನರು ರೋಧಿಸುತ್ತಿದ್ದರು. ಆದರೆ ಇದರ ಪರಿವೇ ಇಲ್ಲದೆ ಕ್ರೀಡಾಂಗಣದ ಒಳಗಡೆ ಸಂಭ್ರಮಾಚರಣೆ 6.30ರ ತನಕವೂ ಮುಂದುವರಿಯಿತು.

ಕ್ರೀಡಾಂಗಣದ ಸುತ್ತಮುತ್ತ ಆ್ಯಂಬುಲೆನ್ಸ್‌ಗಳದ್ದೇ ಸದ್ದು!

ಕಾಲ್ತುಳಿತ ಉಂಟಾಗಿದ್ದರಿಂದ ಕ್ರೀಡಾಂಗಣದ ಬಳಿ ಹಲವು ಆ್ಯಂಬುಲೆನ್ಸ್‌ಗಳು ಇದ್ದವು. ಒಂದೆಡೆ ಪ್ರೇಕ್ಷಕರು ಆರ್‌ಸಿಬಿ ಪರ ಜೈಕಾರ ಕೂಗುತ್ತಿದ್ದರೆ, ಮತ್ತೊಂದೆಡೆ ಕ್ರೀಡಾಂಗಣದ ಸುತ್ತಲೂ ಆ್ಯಂಬುಲೆನ್ಸ್‌ಗಳ ಸೈರನ್‌ ಕೇಳಿ ಬರುತ್ತಿದ್ದವು. ನೆರೆದಿದ್ದ ಜನಸಂದಣಿ ನಡುವೆ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೂ ಅಡ್ಡಿ ಉಂಟಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌