
ಬೆಂಗಳೂರು (ಜ.19): ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವದಿಂದಲೇ ಕೊರೋನಾ ಹೋಗಿಲ್ಲ. ಹೀಗಾಗಿ ಕೊರೋನಾ ಎರಡನೇ ಅಲೆ ಬರುವ ತನಕ ಕಾಯದೆ ಸಾಧ್ಯವಾದಷ್ಟುಬೇಗ ಲಸಿಕೆಯನ್ನು ಪಡೆಯಬೇಕು, ಮುಂದಿನ ಎರಡು ತಿಂಗಳ ಒಳಗಾಗಿ ದೇಶದ ಅರ್ಧದಷ್ಟುಜನರಿಗೆ ಕೊರೋನಾ ಲಸಿಕೆ ನೀಡಿದರೆ ಕೊರೋನಾ ವಿರುದ್ಧದ ಯುದ್ಧದಲ್ಲಿ ಗೆದ್ದಂತೆ’ ಎಂದು ಹೃದ್ರೋಗ ತಜ್ಞ ಡಾ.ದೇವಿಶೆಟ್ಟಿಹೇಳಿದ್ದಾರೆ.
ಸೋಮವಾರ ನಾರಾಯಣ ಹೆಲ್ತ್ ಸಿಟಿಯಲ್ಲಿ ಕೊರೋನಾ ಲಸಿಕೆ ಪಡೆದ ಅವರು, ‘ದೇಶದಲ್ಲಿ ಆದಷ್ಟುಬೇಗ ಹೆಚ್ಚು ಮಂದಿಗೆ ಕೊರೋನಾ ಲಸಿಕೆ ನೀಡಬೇಕು. ಲಸಿಕೆ ಪಡೆದವರು ವಿಜಯದ ಸಂಕೇತ (ವಿಕ್ಟರಿ ಸಿಂಬಲ್) ತೋರಿಸಿ ಎಲ್ಲರಿಗೂ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.
ಗುಡ್ ನ್ಯೂಸ್: ಜ.18ರಂದು ರಾಜ್ಯದಲ್ಲಿ ಅತೀ ಕಡಿಮೆ ಕೊರೋನಾ ಕೇಸ್ ಪತ್ತೆ .
ದೇಶದಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗಿದೆಯೇ ಹೊರತು ಕೊರೋನಾ ಹೋಗಿಲ್ಲ. ಈಗಾಗಲೇ ಯೂರೋಪ್, ಅಮೆರಿಕದಲ್ಲಿ ಎರಡನೇ ಅಲೆ ಕಂಡುಬಂದಿದ್ದು, ತೀವ್ರ ಕಾಟ ನೀಡುತ್ತಿದೆ. ದೇವರ ದಯೆಯಿಂದ ನಮಗೆ ಸ್ವಲ್ಪ ಕಾಲಾವಕಾಶ ದೊರೆತಿದೆ. ಹೀಗಾಗಿ ಈ ಕಾಲಾವಕಾಶದಲ್ಲಿ ನಿರ್ಲಕ್ಷ್ಯ ಮಾಡದೆ ಆದಷ್ಟುತ್ವರಿತವಾಗಿ ಲಸಿಕೆ ಪಡೆಯಬೇಕು. ಲಸಿಕೆ ಪಡೆದ ಮೇಲೆ 28ನೇ ದಿನ ಎರಡನೇ ಡೋಸ್ ಪಡೆಯಬೇಕು. ಮೊದಲ ಡೋಸ್ ಪಡೆದ 45 ದಿನ ಕಳೆದ ಬಳಿಕವಷ್ಟೇ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಹೀಗಾಗಿ ಕೊರೋನಾ ಎರಡನೇ ಅಲೆ ಬಂದಾಗ ಲಸಿಕೆ ಪಡೆಯುತ್ತೇನೆ ಎಂಬ ಸಾಹಸ ಬೇಡ ಎಂದು ಎಚ್ಚರಿಸಿದರು.
ಇಡೀ ವಿಶ್ವದ ಯಾವುದೇ ದೇಶದಲ್ಲಿ ಇಲ್ಲದಷ್ಟುಸೌಲಭ್ಯ ನಮ್ಮ ದೇಶದಲ್ಲಿವೆ. ಒಂದು ದಶಲಕ್ಷ ವೈದ್ಯರು ಹಾಗೂ ಶುಶ್ರೂಷಕರು ದೇಶದಲ್ಲಿದ್ದಾರೆ. ಲಸಿಕೆ ಲಭ್ಯವಿದ್ದರೆ ಎರಡು ತಿಂಗಳಲ್ಲಿ 50 ಕೋಟಿ ಮಂದಿಗೆ ಲಸಿಕೆ ನೀಡುವ ಸಾಮರ್ಥ್ಯ ನಮ್ಮಲ್ಲಿದೆ. ಇದಕ್ಕೆ ಶುಶ್ರೂಷಕರು ನಾಲ್ಕು ಗಂಟೆ ಹೆಚ್ಚುವರಿ ಅವಧಿ ಕೆಲಸ ಮಾಡಿದರೆ ಸಾಕು ಎಂದರು.
ಇದೇ ವೇಳೆ ನಾರಾಯಣ ಹೆಲ್ತ್ ಸಿಟಿಯಲ್ಲಿನ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ಲಸಿಕೆ ಪಡೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ