ಮಲೆನಾಡು ಜಿಲ್ಲೆಗಳು ಹಾಗೂ ಮಹಾರಾಷ್ಟ್ರದ ಪಶ್ಚಿಮಘಟ್ಟ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ.
ಬೆಂಗಳೂರು (ಜು.27): ಮಲೆನಾಡು ಜಿಲ್ಲೆಗಳು ಹಾಗೂ ಮಹಾರಾಷ್ಟ್ರದ ಪಶ್ಚಿಮಘಟ್ಟ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಇದರಿಂದಾಗಿ ಹಂಪಿಯ ಪುರಂದರದಾಸರ ಮಂಟಪ, ಶ್ರೀರಂಗಪಟ್ಟಣದ ನಿಮಿಷಾಂಭ, ರಂಗನಾಥಸ್ವಾಮಿ ದೇಗುಲ ಸೇರಿ ಹಲವು ದೇವಾಲಯಗಳು ಜಲಾವೃತಗೊಂಡಿವೆ. ಉತ್ತರ ಕರ್ನಾಟಕದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ನಾರಾಯಣಪುರ ಡ್ಯಾಂಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವ ಕಾರಣ ಕೃಷ್ಣಾನದಿಯಲ್ಲಿ ಸುಮಾರು 3 ಲಕ್ಷ ಕ್ಯುಸೆಕ್ ನೀರು ಹರಿಯುತ್ತಿದೆ.
ತುಂಗಭದ್ರಾ ಡ್ಯಾಂನಿಂದ ನದಿಗೆ 1 ಲಕ್ಷ ಕ್ಯುಸೆಕ್ ನೀರು, ಹೇಮಾವತಿ ಜಲಾಶಯದಿಂದ ನದಿಗೆ ಸುಮಾರು 65 ಸಾವಿರ ಕ್ಯುಸೆಕ್‌ನಷ್ಟು ನೀರು ಹರಿಸಲಾಗುತ್ತಿದೆ. ಹಾಸನದ ಗೊರೂರು ಅಣೆಕಟ್ಟೆಯಿಂದ ಹೇಮಾವತಿ ನದಿಗೆ 75 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರು ಬಿಟ್ಟಿರುವುದರಿಂದ ಹಾಸನದ ಹೊಳೆನರಸೀಪುರ ಪಟ್ಟಣದ 40ಕ್ಕೂ ಹೆಚ್ಚು ಮನೆಗಳು, ಅಗ್ನಿಶಾಮಕ ಠಾಣೆಗೂ ನೀರು ನುಗ್ಗಿದೆ. ಹೊಳೆನರಸೀಪುರ-ಚನ್ನರಾಯಪಟ್ಟಣ, ಅರಕಲಗೂಡು ರಸ್ತೆ, ಹೆದ್ದಾರಿ ಜಲಾವೃತಗೊಂಡು, ಸಂಚಾರ ಅಸ್ತವ್ಯಸ್ತಗೊಂಡಿದೆ.
ವಾಲ್ಮೀಕಿ ಹಗರಣ: ಹೈದರಾಬಾದ್ ಗ್ಯಾಂಗ್ ಮಾಸ್ಟರ್ ಮೈಂಡ್ ಸತ್ಯನಾರಾಯಣ್ ವರ್ಮಾ ಖರೀದಿಸಿದ್ದ 10 ಕೆಜಿ ಚಿನ್ನ ಜಪ್ತಿ
ಹಂಪಿ ಸ್ಮಾರಕಗಳು ಮುಳುಗಡೆ: ತುಂಗಭದ್ರಾ ಜಲಾಶಯದಿಂದ ಶುಕ್ರವಾರ 1.7 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಬಿಟ್ಟಿದ್ದರಿಂದ ಹಿನ್ನೆಲೆಯಲ್ಲಿ ಹಂಪಿಯ ಪುರಂದರದಾಸರ ಮಂಟಪ ಮತ್ತಿತರ ಸ್ಮಾರಕಗಳು ಮುಳುಗಡೆಯಾದರೆ, ಚಕ್ರತೀರ್ಥ ಪ್ರದೇಶದ ಋಷಿ ಮಂಟಪ ಸೇರಿ ಮತ್ತಿತರ ಸ್ಮಾರಕಗಳು ಜಲಾವೃತವಾಗಿವೆ. ಇನ್ನು ಕೊಪ್ಪಳದಲ್ಲಿ ಗಂಗಾವತಿ-ಬಳ್ಳಾರಿ ಜಿಲ್ಲೆಯ ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ಆನೆಗೊಂದಿಯ ತಳವಾರ ಘಟ್ಟ, ನವವೃಂದಾವನ, ಶ್ರೀಕೃಷ್ಣದೇವರಾಯ ಸಮಾಧಿ ಕೂಡ ಮುಳುಗಡೆಯಾಗಿದೆ.
ಕೃಷ್ಣಾ, ಘಟಪ್ರಭಾ, ಹಿರಣ್ಯಕೇಶಿ ಸೇರಿ ಎಲ್ಲ ಪ್ರಮುಖ ನದಿಗಳ ನೀರಿನಮಟ್ಟ ಏರಿಕೆಯಾಗುತ್ತಿದ್ದು, ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಿಧಾನವಾಗಿ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ನದಿ ತಟದ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಬಾಗಲಕೋಟೆಯಲ್ಲೂ 5ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ. ಇನ್ನು ನಾರಾಯಣಪುರ ಡ್ಯಾಂನಿಂದ ಸುಮಾರು 3 ಲಕ್ಷ ಕ್ಯುಸೆಕ್ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಯಾದಗಿರಿ ಮತ್ತು ರಾಯಚೂರಿನ 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಆತಂಕ ಮನೆಮಾಡಿದೆ.
ಬ್ಲ್ಯಾಕ್ ಗೌನ್‌ನಲ್ಲಿ ಫಿಟ್ & ಹಾಟ್ ಆದ ನಮ್ರತಾ ಗೌಡ: ಚೆರಿ ಚೆರಿ ಲೇಡಿ ನಮ್ ನಮ್ಮು ಎಂದು ಹಾಡಿದ ಫ್ಯಾನ್ಸ್
ಕೆಆರ್‌ಎಸ್‌ನಿಂದ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ: ಕೃಷ್ಣರಾಜ ಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದಿಂದ ಕಾವೇರಿ ನದಿಗೆ 1ಲಕ್ಷಕ್ಕೂ ಹೆಚ್ಚಿನ ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಕಾವೇರಿ ನದಿ ದಂಡೆ ಪ್ರದೇಶಗಳಾದ ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯ ಸಮೀಪದ ಸ್ನಾನಘಟ್ಟಗಳು, ನಿಮಿಷಾಂಭ ದೇವಾಲಯದ ಮೆಟ್ಟಿಲುಗಳು ಮುಳುಗಡೆಯಾಗಿವೆ. ವೆಲ್ಲೇಸ್ಲಿ ಸೇತುವೆ ಮುಳುಗಡೆ ಭೀತಿ ಎದುರಾಗಿದ್ದು, ನದಿ ತಪ್ಪಲಿನ ಪ್ರದೇಶದ ನಿವಾಸಿಗಳು ಹಾಗೂ ರೈತರು ತಮ್ಮ ಆಸ್ತಿ ಪಾಸ್ತಿ ಜಾನುವಾರುಗಳ ರಕ್ಷಣೆಗೆ ಎಚ್ಚರ ವಹಿಸಿ ಸೂಕ್ತ ಮುಂಜಾಗ್ರತ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಧಿಕಾರಿ ಡಾ.ಕುಮಾರ ಮನವಿ ಮಾಡಿದ್ದಾರೆ.