
ಸದಾನಂದ ಮಜತಿ
ಬೆಳಗಾವಿ (ನ.21) : ಬೆಳಗಾವಿ ಎಂದರೆ ಎಲ್ಲರಿಗೂ ನೆನಪಾಗುವುದು ಕನ್ನಡ-ಮರಾಠಿಗರ ನಡುವಿನ ಭಾಷಾ ವಿವಾದ. ಆದರೆ, ಅದನ್ನೂ ಮೀರಿ ಇಲ್ಲಿನ ಕನ್ನಡ-ಮರಾಠಿ ಭಾಷಿಕರ ಮಧ್ಯೆ ಭಾವೈಕ್ಯತೆ, ಸಾಂಸ್ಕೃತಿಕ, ಸಾಹಿತ್ಯ ಬಾಂಧವ್ಯ ಇರುವುದು ಅಷ್ಟಾಗಿ ಬೆಳಕಿಗೆ ಬರುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಗಾಯಕರೂ ಹಾಗೂ ಸಂಗೀತ ಶಿಕ್ಷಕರೂ ಆದ ವಿನಾಯಕ ಮೋರೆ.
ಮಾತೃಭಾಷೆ ಮರಾಠಿಯಾದರೂ ಕನ್ನಡದ ನಾಡು, ನುಡಿಯ ಗೀತೆಗಳನ್ನು ಹಾಡುವುದು ಎಂದರೆ ಬಲು ಪ್ರೀತಿ, ಹೆಮ್ಮೆ. ಇವರು ಅತ್ಯಂತ ಸುಶ್ರಾವ್ಯವಾಗಿ, ರಾಗಬದ್ಧವಾಗಿ ಕನ್ನಡದ ಗೀತೆಗಳನ್ನು ಹಾಡುತ್ತಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೂ ಕಲಿಸಿ ಕೊಡುತ್ತಾರೆ. ‘ಕನ್ನಡ ನಾಡಗೀತೆ ಸ್ಪೆಷಲಿಸ್ಟ್’ ಎಂದೇ ಇವರು ಖ್ಯಾತಿಯಾಗಿದ್ದಾರೆ. ಮರಾಠಿ ನನ್ನ ತಾಯಿ ಮತ್ತು ಕನ್ನಡ ನನ್ನ ಪ್ರೀತಿಯ ಚಿಕ್ಕಮ್ಮ. ನಾನು ಇಬ್ಬರನ್ನೂ ಸಮಾನವಾಗಿ ಪ್ರೀತಿಸುತ್ತೇನೆ ಎಂದು ಮೋರೆ ಹೆಮ್ಮೆಯಿಂದ ಹೇಳುತ್ತಾರೆ.
ಜಿಲ್ಲೆಯಲ್ಲಿ ನಡೆಯುವ ಪ್ರಮುಖ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಕ್ಷಕ ವಿನಾಯಕ ಮೋರೆ ಅವರ ಸಂಗೀತದ ಯೋಗದಾನವಿದೆ. ವಿಶ್ವಕನ್ನಡ ಸಮ್ಮೇಳನದಲ್ಲಿ ಅವರು ಕಲಿಸಿ ಹಾಡಿಸಿದ ನಾಡ ಗೀತೆ ಇಂದಿಗೂ ಎಲ್ಲರ ನೆನಪಿನಂಗಳದಲ್ಲಿದೆ. 2022 ಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಡಿಯಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಶಾಲಾ ಮತ್ತು ಕಾಲೇಜುಗಳ 5000 ವಿದ್ಯಾರ್ಥಿಗಳಿಗೆ ಮೋರೆ ಕಲಿಸಿದ 5 ಕನ್ನಡ ಗೀತೆಗಳನ್ನು ಸುವರ್ಣ ಸೌಧದ ಭವ್ಯ ಆವರಣದಲ್ಲಿ ಅದ್ಭುತವಾಗಿ ಸಾದರಪಡಿಸಿದ್ದು ಮರೆಲಾಗದ ಘಟನೆ.
ಬೆಳಗಾವಿಯಲ್ಲಿ ಜನಿಸಿದ ವಿನಾಯಕ ಮೋರೆ ಬಿ.ಕಾಂ ಪದವಿ ಮುಗಿಸಿದ್ದಾರೆ. ಬೆಳಗಾವಿಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ 27 ವರ್ಷಗಳಿಂದ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಸದ್ಯ ಬೆಳಗಾವಿಯ ಲವ್‌ಡೆಲ್ ಸಿಬಿಎಸ್‌ಇ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸ್ವರಾಂಜಲಿ ಸಂಗೀತ ವಿದ್ಯಾಲಯದ ನಿರ್ದೇಶಕರಾಗಿ ಅನೇಕ ಮಕ್ಕಳಿಗೆ ಸಂಗೀತ ಶಿಕ್ಷಣ ಹೇಳಿಕೊಡುತ್ತಿದ್ದಾರೆ. ಪ್ರತಿಷ್ಠಿತ ಭಾರತ ವಿಕಾಸ ಪರಿಷತ್ ಬೆಳಗಾವಿ ಶಾಖೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರು ಶ್ರೇಷ್ಠ ಸಂಗೀತ ವಿದ್ವಾನ್ ಪಂ.ನಂದನ್ ಹೆರ್ಲೆಕರ ಅವರ ಆತ್ಮೀಯ ಶಿಷ್ಯರು. ಬೆಳಗಾವಿ ಜೊತೆಗೆ ಮುಂಬೈ, ಪುಣೆ, ಬೆಂಗಳೂರು, ಕಾಸರಗೋಡ, ಹುಬ್ಬಳ್ಳಿ, ಧಾರವಾಡ, ಉಜ್ಜಯಿನ, ಭುವನೇಶ್ವರ, ಗೋವಾ, ದೇವಗಢ, ಕೊಲ್ಲಾಪುರ, ಸಾಂಗಲಿ, ಇಂಚಲಕರಂಜಿ, ಜಯಸಿಂಗಪುರ ಮುಂತಾದ ಕಡೆಗಳಲ್ಲಿ ಗಾಯನ ಕಾರ್ಯಕ್ರಮ ನಡೆಸಿದ್ದಾರೆ. ಶಾಲೆ ಮತ್ತು ಕಾಲೇಜಿನಲ್ಲಿದ್ದಾಗ ಅವರು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪಾರಿತೋಷಕ ತಮ್ಮದಾಗಿಸಿಕೊಂಡಿದ್ದಾರೆ. ಇವರ ಸಂಗೀತ ಗರಡಿಯಲ್ಲಿ ಪಳಗಿದ ಅನೇಕ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ.
ಸಮೂಹ ಗಾಯನದ ಮಾಸ್ಟರ್ ಎಂದೇ ಪ್ರಸಿದ್ಧರಾದ ವಿನಾಯಕ ಮೋರೆ ಇವರ ಸಂಕಲನ ಹಾಗೂ ಮಾರ್ಗದರ್ಶನದಲ್ಲಿ ಬೆಳಗಾವಿಯಲ್ಲಿ 2016ರ ಜನವರಿ 26ರಂದು ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ 15,800 ವಿದ್ಯಾರ್ಥಿಗಳು ಏಕಕಾಲಕ್ಕೆ ಏಕಸ್ವರದಲ್ಲಿ 5 ದೇಶಭಕ್ತಿಗೀತೆ ಹಾಡಿ 6 ವಿಶ್ವದಾಖಲೆ ಬರೆದಿದ್ದಾರೆ. 2006ರ ಜನವರಿ 26ರಂದು ಬೆಳಗಾವಿಯ ಯೂನಿಯನ್ ಜಿಮ್‌ಖಾನ್ ಮೈದಾನದಲ್ಲಿ ಬೆಳಗಾವಿಯ 28 ಶಾಲೆಗಳ 10,000 ವಿದ್ಯಾರ್ಥಿಗಳಿಗೆ ವಿವಿಧ ಭಾಷೆಯ 20 ದೇಶಭಕ್ತಿ ಗೀತೆಗಳನ್ನು ಕಲಿಸಿ ಸಮೂಹವಾಗಿ ಸುರಮಯಿ ಭಾರತ ಎಂಬ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಸಾಮಾಜಿಕ ಕಾರ್ಯಕ್ರಮ:
ವಿನಾಯಕ ಮೋರೆ ಅವರು ತಮ್ಮ ಸಂಗೀತವನ್ನು ಅನೇಕ ಸಾಮಾಜಿಕ ಕೆಲಸಗಳಲ್ಲೂ ಬಳಸಿಕೊಂಡಿದ್ದಾರೆ. 2012ರ ಜುಲೈ 7ರಂದು ಅವರು ಅನಾಥ, ವೃದ್ಧ, ಅಂಧ, ಮತಿಮಂದ, ಅಂಗವಿಕಲ, ಎಚ್.ಐ.ವಿ. ಪೀಡಿತ ಹಾಗೂ ಕ್ಯಾನ್ಸರ್ ಪೀಡಿತರಿಗೆ ವಿವಿಧ ಹಾಡುಗಳನ್ನು ಕಲಿಸಿ ಅವರೆಲ್ಲರನ್ನೂ ಒಂದೇ ವೇದಿಕೆಯ ಮೇಲೆ ಬರುವಂತೆ ಮಾಡಿ ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟರು. ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿಯ ಕೈದಿಗಳಿಗೆ ಸಹ ಮನಪರಿವರ್ತನ ಸಲವಾಗಿ ಮೋರೆಯವರು ಸಂಗೀತ ಪಾಠ ಹೇಳಿಕೊಟ್ಟಿದ್ದಾರೆ.
ಕನ್ನಡ ಹಾಡಿನ ಬಗ್ಗೆ ಹೆಮ್ಮೆ
ಕನ್ನಡ ಗೀತೆಗಳನ್ನು ಹಾಡುವುದೆಂದೆರೆ ನನಗೆ ಬಹಳ ಹೆಮ್ಮೆ ಎನಿಸುತ್ತದೆ. ಕನ್ನಡ ಸಾಹಿತ್ಯ ಸಂಗೀತ ಅತ್ಯಂತ ಪ್ರಭಾವಿಯಾಗಿದೆ. ನಾನು ಮರಾಠಿ ಭಾಷಿಕನಾದರೂ 4ನೇ ತರಗತಿಯಲ್ಲಿದ್ದಾಗಲೇ ನನ್ನ ಹಲವು ಸಹಪಾಠಿಗಳು ಕನ್ನಡ ಭಾಷಿಕರಾಗಿದ್ದರಿಂದ ಆಗಿನಿಂದಲೇ ಕನ್ನಡ ಸಂಗೀತದ ಬಗ್ಗೆ ಒಲುವು ಬೆಳೆಯಿತು. ದೇಶಭಕ್ತಿಗೀತೆ, ನಾಡಗೀತೆ ಹಾಡುವುದು ಅತ್ಯಂತ ಹೆಮ್ಮ ಭಾವನೆ ಮೂಡಿಸುತ್ತದೆ.
-ವಿನಾಯಕ ಮೋರೆ ಗಾಯಕ ಹಾಗೂ ಸಂಗೀತ ಶಿಕ್ಷಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ