
ಬೆಂಗಳೂರು(ಅ.10): ಬೆಳಗಾವಿ, ಕಲಬುರಗಿ ಜಿಲ್ಲೆಗಳಲ್ಲಿ ವಿದ್ಯಾಗಮ ಚಟುವಟಿಕೆಯಲ್ಲಿ ತೊಡಗಿದ್ದ ಅನೇಕ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದ ಪ್ರಕರಣಗಳು ವ್ಯಾಪಕವಾಗಿ ವರದಿಯಾಗುತ್ತಿವೆ. ಆದರೆ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಮಾತ್ರ ಈ ಬೆಳವಣಿಗೆಯನ್ನು ಅಲ್ಲಗಳೆದಿದ್ದಾರೆ. ‘ವಿದ್ಯಾಗಮ ವೇಳೆಯೇ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ ಎಂದು ವರದಿಯಾಗಿಲ್ಲ. ಈ ಯೋಜನೆ ಬಗ್ಗೆ ಅಪಪ್ರಚಾರ ಸಲ್ಲದು’ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದೇ ವೇಳೆ, ‘ಶಾಲೆಗಳನ್ನು ತೆರೆಯುವ ಧಾವಂತ ನಮ್ಮ ಸರ್ಕಾರಕ್ಕಾಗಲಿ ಅಥವಾ ಶಿಕ್ಷಣ ಇಲಾಖೆಗಾಗಲಿ ಖಂಡಿತ ಇಲ್ಲ. ಸರ್ಕಾರ ಶಾಲೆ ಆರಂಭಿಸುವ ನಿರ್ಧಾರ ಕೈಗೊಂಡೇ ಬಿಟ್ಟಿದೆ ಎನ್ನುವಂತೆ ಚರ್ಚೆ ನಡೆಯುತ್ತಿರುವುದು ದುರದೃಷ್ಟಕರ’ ಎಂದು ಹೇಳಿದ್ದಾರೆ.
ವಿದ್ಯಾಗಮದಿಂದ ಸೋಂಕಿಲ್ಲ:
ವಿದ್ಯಾಗಮ ಯೋಜನೆಯನ್ನು ಪತ್ರಿಕಾ ಹೇಳಿಕೆಯಲ್ಲಿ ಸಮರ್ಥಿಸಿಕೊಂಡಿರುವ ಸಚಿವರು, ‘ಈ ಯೋಜನೆಯಲ್ಲಿ ತೊಡಗಿಕೊಂಡ ಶಿಕ್ಷಕರಿಗೆ ಸೋಂಕು ತಗುಲಿದ ವರದಿಯಾಗಿಲ್ಲ. ರಾಜ್ಯಾದ್ಯಂತ ಒಟ್ಟು 49.34 ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಇದುವರೆಗೂ ವಿದ್ಯಾಗಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಕಾರಣಕ್ಕಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿರುವ ಬಗ್ಗೆ ವರದಿಯಾಗಿಲ್ಲ’ ಎಂದು ತಿಳಿಸಿದ್ದಾರೆ.
‘ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿರುವುದನ್ನು ವಿದ್ಯಾಗಮ ಯೋಜನೆಯ ವೈಫಲ್ಯವೆಂಬಂತೆ ಬಿಂಬಿಸಿರುವುದು ವಿಷಾದನೀಯ. ಇಲ್ಲಿನ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಿಗೆ ಒಂದು ತಿಂಗಳ ಹಿಂದೆ ಕೊರೋನಾ ಸೋಂಕು ತಗುಲಿದ್ದು, ಅವರು ಈಗ ಪೂರ್ಣ ಗುಣಮುಖರಾಗಿದ್ದಾರೆ’ ಎಂದಿದ್ದಾರೆ.
‘ಈ ಅವಧಿಯಲ್ಲಿ ಶಾಲೆಯ ಯಾವುದೇ ಶಿಕ್ಷಕರಿಗೆ ಸೋಂಕು ತಗುಲಿಲ್ಲ. ಸೆ. 22ರಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನಡೆಸಲಾದ ರಾರಯಂಡಮ್ ಪರೀಕ್ಷೆಯಲ್ಲಿ ಸುಮಾರು 203 ವಿದ್ಯಾರ್ಥಿಗಳ ಪೈಕಿ 4 ವಿದ್ಯಾರ್ಥಿಗಳಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಈ ಸೋಂಕು ತಗುಲಿಸಿಕೊಂಡಿರುವುದು ಸಾಧ್ಯವಿಲ್ಲ ಎಂಬ ಅಂಶಗಳನ್ನು ಸ್ಥಳೀಯ ಜಿಲ್ಲಾ ಉಪನಿರ್ದೇಶಕರು ದೃಢಪಡಿಸಿದ್ದಾರೆ. ಹೀಗಾಗಿ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ’ ಎಂದು ಹೇಳಿದ್ದಾರೆ.
‘ನಿಗದಿತ ಕನಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ಸೂಚಿತ ಶಿಕ್ಷಕರ ಮಾಗದರ್ಶನದಡಿ ಎಲ್ಲ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಕಲಿಕೆಯಲ್ಲಿ ಮುಂದುವರೆದಿದ್ದು, ವಿದ್ಯಾಗಮದ ಕಾರಣ ಈ ಸೋಂಕು ತಗಲಿರುತ್ತದೆನ್ನುವುದು, ಶಿಕ್ಷಕರು ವಿದ್ಯಾಗಮದ ಕಾರಣವೇ ಸೋಂಕು ಹೊಂದಿರುವ ರೀತಿಯಲ್ಲಿ ಬಿಂಬಿಸುವುದು ನಾವು ವಿದ್ಯಾರ್ಥಿ ಸಮೂಹಕ್ಕೆ ಎಸೆಗುವ ಅನ್ಯಾಯ’ ಎನ್ನುತ್ತಾರೆ ಶಿಕ್ಷಣ ಸಚಿವರು.
ಶಾಲೆ ಆರಂಭಕ್ಕೆ ತರಾತುರಿ ಇಲ್ಲ:
ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸಚಿವರು ಶಾಲೆ ಆರಂಭ ವಿವಾದದ ಬಗ್ಗೆ ಪ್ರತ್ಯೇಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ಶಾಲೆಗಳನ್ನು ತೆರೆಯುವ ಧಾವಂತ ನಮ್ಮ ಸರ್ಕಾರಕ್ಕಾಗಲಿ ಅಥವಾ ಶಿಕ್ಷಣ ಇಲಾಖೆಗಾಗಲಿ ಇಲ್ಲ. ನಮಗೆ ನಮ್ಮ ಮಕ್ಕಳ ಆರೋಗ್ಯ, ಸುರಕ್ಷತೆ ಅತ್ಯಂತ ಮುಖ್ಯ. ಅವುಗಳನ್ನು ಬಲಿಕೊಟ್ಟು ಯಾರೂ ಯಾವ ಕಾರ್ಯವನ್ನೂ ಪ್ರತಿಷ್ಟೆಗಾಗಿ ಮಾಡಬಾರದು. ಮಾಡುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.
‘ಶಾಲೆಗಳನ್ನು ಆರಂಭಿಸುವ ಬಗ್ಗೆ ರಾಜ್ಯದ ಎಲ್ಲಾ ಶಾಸಕರ ಅಭಿಪ್ರಾಯವನ್ನು ಸುಮಾರು 9 ದಿವಸಗಳ ಹಿಂದೆ ನಾನು ಕೇಳಿದ್ದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹಿಡಿದು ಅನೇಕ ಸಚಿವ, ಶಾಸಕರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಅವರೂ ಈ ಕುರಿತು ಚರ್ಚೆ ನಡೆಸಿ ನನಗೆ ತಮ್ಮ ಅಭಿಪ್ರಾಯ ನೀಡುವುದಾಗಿ ತಿಳಿಸಿದ್ದಾರೆ. ಸಚಿವ ಡಾ. ಸುಧಾಕರ್ ರವರೂ ಪತ್ರದ ಮೂಲಕ ಅಭಿಪ್ರಾಯ ತಿಳಿಸಿದ್ದಾರೆ. ಆದರೆ ಅಭಿಪ್ರಾಯಗಳನ್ನು ಕೇಳಿದ ಮಾತ್ರಕ್ಕೆ ಸರ್ಕಾರ ಶಾಲೆಗಳನ್ನು ಆರಂಭ ಮಾಡುವ ನಿರ್ಧಾರವನ್ನು ಈಗಾಗಲೇ ಕೈಗೊಂಡೇ ಬಿಟ್ಟಿದೆ ಎನ್ನುವಂತೆ ವಿಪುಲ ಚರ್ಚೆ ನಡೆಯುತ್ತಿರುವುದು ದುರದೃಷ್ಟಕರ. ಮತ್ತೆ ಮತ್ತೆ ಇದು ಮರುಕಳಿಸುತ್ತಲೇ ಇದೆ. ನಾನು ಬಾರಿ ಬಾರಿ ಸ್ಪಷ್ಟೀಕರಣ ಕೊಡುತ್ತಲೇ ಇದ್ದೇನೆ’.
‘ಶಿಕ್ಷಣ ಇಲಾಖೆಯ ಮುಂದಿನ ತೀರ್ಮಾನವನ್ನು ಮಕ್ಕಳ ಹಿತವನ್ನು ಆದ್ಯತೆಯಲ್ಲಿಟ್ಟುಕೊಂಡು ಎಲ್ಲರೊಡನೆ ಸಮಾಲೋಚನೆಯ ನಂತರ ಕೈಗೊಳ್ಳಲಾಗುತ್ತದೆಯೇ ಹೊರತು ಯಾವುದನ್ನು ಧಿಡೀರನೆ ಘೋಷಿಸುವುದಿಲ್ಲ. ಯಾವುದೇ ಪೋಷಕರ ಮನಸ್ಸಿನಲ್ಲಿ ಈ ಕುರಿತು ಕಿಂಚಿತ್ತೂ ಗೊಂದಲ ಬೇಡ ಎಂದು ಕಳಕಳಿಯಿಂದ ತಿಳಿಸುತ್ತಿದ್ದೇನೆ. ನಾನು ಈ ರಾಜ್ಯದ ಶಿಕ್ಷಣ ಸಚಿವ ಮಾತ್ರವಲ್ಲ. ಸುಮಾರು 1 ಕೋಟಿ ಮಕ್ಕಳ ಪೋಷಕ ಎಂಬುದರ ಅರಿವು ನನಗಿದೆ’ ಎಂದು ಹೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ