ವಿಭೂತಿಗಳಲ್ಲೇ ಐಕ್ಯರಾದ ಭಾರತದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ! ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

Published : Dec 15, 2025, 06:44 PM ISTUpdated : Dec 15, 2025, 08:07 PM IST
Shamanuru Shivashankarappa

ಸಾರಾಂಶ

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯು ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಶಿಷ್ಟವಾಗಿ ನೆರವೇರಿತು. ದಾವಣಗೆರೆಯನ್ನು ವಾಣಿಜ್ಯ ಹಾಗೂ ಶೈಕ್ಷಣಿಕ ನಗರಿಯಾಗಿದೆ.

ಭಾನುವಾರ ನಿಧನರಾದ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವರೂ ಆಗಿದ್ದ ದೇಶದ ಅತ್ಯಂತ ಹಿರಿಯ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ದಾವಣಗೆರೆಯ ಕಲ್ಲೇಶ್ವರ ರೈಸ್‌ ಮಿಲ್‌ ಆವರಣದಲ್ಲಿ ನಡೆಯಿತು. ಪಂಚಪೀಠ ಜಗದ್ಗುರುಗಳ ಸಮ್ಮುಖದಲ್ಲಿ ವಿಧಿವಿಧಾನ ನೆರವೇರಿಸಲಾಯ್ತು. ಕ್ರಿಯಾ ಸಮಾಧಿಯ ವಿಧಿ ವಿಧಾನದ ಮೂಲಕ ಮಣ್ಣು ಹಾಕದೆ ಕೇವಲ ವಿಭೂತಿಯನ್ನಷ್ಟೇ ಬಳಸಿ ಸಮಾಧಿ ಮಾಡಲಾಯ್ತ.

ಇನ್ನು ಲಿಂಗೈಕ್ಯರಾದ ಶಾಮನೂರು ಶಿವಶಂಕರಪ್ಪನವರ ಕೈಲಾಸ ಶಿವ ಗಣರಾಧನೆಯ ದಿನಾಂಕವನ್ನು ಕುಟುಂಬಸ್ಥರು ಪ್ರಕಟಿಸಿದ್ದಾರೆ. ಡಿಸೆಂಬರ್ 26 ರಂದು ಕೈಲಾಸ ಶಿವಗಣರಾಧನೆ ನಡೆಯಲಿದೆ. ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಮಧ್ಯಾಹ್ನ 12:30 ಕ್ಕೆ ಶಿವಗಣರಾಧನೆ ನಡೆಯಲಿದ್ದು, ಶಾಮನೂರು ಪುತ್ರರಾದ ಬಕ್ಕೇಶ್, ಗಣೇಶ್ ಮತ್ತು ಮಲ್ಲಿಕಾರ್ಜುನ್ ಕುಟುಂಬಸ್ಥರಿಂದ ಆಹ್ವಾನ ಮಾಡಲಾಗಿದೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಾಮನೂರು ಶಿವಶಂಕರಪ್ಪ, ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ಕಳೆದ ಅ.23 ರಂದು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಒಂದೂವರೆ ತಿಂಗಳಿನಿಂದ ಅಲ್ಲಿಯೇ ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ 6.20ಕ್ಕೆ ಅವರು ಕೊನೆಯುಸಿರೆಳೆದರು.

ದಾವಣಗೆರೆ ರಾಜಕಾರಣದ ಮೇಲೆ ತಮ್ಮದೇ ಆದ ಪ್ರಭಾವ ಹೊಂದಿದ್ದ ಅವರು, ಕಾಂಗ್ರೆಸ್‌ ಹಿರಿಯ ತಲೆಗಲ್ಲೊಬ್ಬರಾಗಿದ್ದರು. ಶಾಮನೂರು ಅವರು ಗಣಿಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಸೇರಿ ಮೂವರು ಗಂಡು ಮಕ್ಕಳು ಸೇರಿ ಒಟ್ಟು ಏಳು ಮಕ್ಕಳನ್ನು ಅಗಲಿದ್ದಾರೆ. ಇವರ ಸೊಸೆ ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯ ಸಂಸದೆಯಾಗಿದ್ದಾರೆ.

ದಾವಣಗೆರೆ ವಾಣಿಜ್ಯ ನಗರಿ ಮಾಡಿದ ಎಸ್‌ಎಸ್‌ ಕುಟುಂಬ

ಮಧ್ಯ ಕರ್ನಾಟಕದ ವಾಣಿಜ್ಯ, ಶೈಕ್ಷಣಿಕ ನಗರಿಯಾಗಿ ದಾವಣಗೆರೆ ರೂಪುಗೊಳ್ಳುವಲ್ಲಿ ಡಾ.ಶಾಮನೂರು ಶಿವಶಂಕರಪ್ಪ ಮಹತ್ವದ ಪಾತ್ರ ವಹಿಸಿದ್ದಾರೆ. ಜವಳಿ ಮಿಲ್‌ಗಳು, ಎಣ್ಣೆ ಮಿಲ್‌ಗಳು, ಹತ್ತಿ ಗಿರಣಿಗಳು, ಅಕ್ಕಿ ಗಿರಣಿಗಳಿಗೆ ರಾಜ್ಯ, ರಾಷ್ಟ್ರ ಮಾತ್ರವಲ್ಲದೇ ವಿದೇಶಗಳಲ್ಲೂ ಹೆಸರಾಗಿದ್ದ ಊರಿದು. ಆದರೆ, 90ರ ದಶಕದಲ್ಲಿ ಬರಸಿಡಿಲು ಬಂದು ಅಪ್ಪಳಿಸಿದಂತೆ ಇಲ್ಲಿನ ಒಂದೊಂದೇ ಕೈಗಾರಿಕೆಗಳೂ ಇತಿಹಾಸದ ಪುಟ ಸೇರಿದವು.

ಮಿಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಕಾರ್ಮಿಕರು ಕುಟುಂಬ ಸಮೇತ ಬೀದಿಪಾಲಾದರು. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ದಾವಣಗೆರೆಯನ್ನು ಕಟ್ಟಿ, ಬೆಳೆಸುವಲ್ಲಿ ಡಾ.ಶಾಮನೂರು ಪ್ರಯತ್ನ ಮಹತ್ವದ್ದು ಎಂಬುದನ್ನು ಬೆಂಬಲಿಗರಷ್ಟೇ ಏಕೆ, ಎದುರಾಳಿಗಳೂ ಒಪ್ಪುತ್ತಾರೆ. ಹತ್ತಾರು ಮಿಲ್ ಮುಚ್ಚಿದಾಗ ಸಾವಿರಾರು ಕಾರ್ಮಿಕರು, ಕಾರ್ಮಿಕ ಕುಟುಂಬಗಳು ಬೀದಿಪಾಲಾಗುವ ದುಸ್ಥಿತಿ ನಿರ್ಮಾಣವಾಗಿತ್ತು. ಅದೆಷ್ಟೋ ಮಂದಿ ಬೀದಿಬದಿ ಸಣ್ಣಪುಟ್ಟ ಅಂಗಡಿ ಇಟ್ಟುಕೊಂಡರೆ, ಕೆಲವರು ವಾಚ್‌ಮನ್‌ಗಳಾಗಿ, ಕೂಲಿ ಕಾರ್ಮಿಕರಾಗಿ ಜೀವನ ಕಂಡುಕೊಳ್ಳಬೇಕಾದ ಸ್ಥಿತಿ ಬಂದಿತ್ತು. ರಾಜ್ಯದ ಕೈಗಾರಿಕಾ ಕ್ಷೇತ್ರದ ಮಿನುಗುತಾರೆಯಂತೆ ಕಂಗೊಳಿಸಿದ್ದ ದಾವಣಗೆರೆಗೆ ಮಂಕು ಬಡಿದ ಕಾಲ ಅದಾಗಿತ್ತು.

ಸಂಕಷ್ಟ ಸಮಯದಲ್ಲೇ ಸಂಕ್ರಮಣ ಕಾಲವೂ ಬಂದಿತ್ತು. ಡಾ.ಶಾಮನೂರು ಶಿವಶಂಕರಪ್ಪ ಮತ್ತು ಮಕ್ಕಳು ಕೃಷಿ ಆಧರಿತ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿದರು. ಅಷ್ಟೇ ಅಲ್ಲ, ತಮ್ಮದೇ ನೇತೃತ್ವದ ಬಾಪೂಜಿ ವಿದ್ಯಾಸಂಸ್ಥೆಯಲ್ಲೂ ಸಾಕಷ್ಟು ಜನರಿಗೆ ಉದ್ಯೋಗ ನೀಡಿದರೆ, ಕಾರ್ಮಿಕರ ಮಕ್ಕಳಿಗೆ ಮಾನವೀಯತೆ ದೃಷ್ಟಿಯಿಂದ ಶಿಕ್ಷಣಕ್ಕೂ ಅನುವು ಮಾಡಿಕೊಟ್ಟರು.

ಹರಪನಹಳ್ಳಿ ತಾಲೂಕು ದುಗ್ಗಾವತಿಯಲ್ಲಿ ಶಾಮನೂರು ಹಿರಿಯ ಪುತ್ರ, ಕೈಗಾರಿಕೋದ್ಯಮಿ ಎಸ್.ಎಸ್. ಬಕ್ಕೇಶ್ ಒಡೆತನದ ಶಾಮನೂರು ಶುಗರ್ಸ್‌ ಲಿಮಿಟೆಡ್, ಇಂಡಸ್ಟ್ರಿಯಲ್ ಏರಿಯಾದಲ್ಲಿ ಅಕ್ಕಿ ಗಿರಣಿ, ರಫ್ತು ಮತ್ತು ಆಮದು ಸಂಸ್ಥೆ ಸ್ಥಾಪಿಸಿದರು. ದ್ವಿತೀಯ ಪುತ್ರ ಎಸ್‌.ಎಸ್‌. ಗಣೇಶ ಕುಕ್ಕವಾಡದ ದಿ ದಾವಣಗೆರೆ ಶುಗರ್ ಕಂಪನಿ ಲಿ., ದಾವಣಗೆರೆಯಲ್ಲಿ ಲಕ್ಷ್ಮಿ ಫ್ಲೋರ್‌ ಮಿಲ್‌ ನೇತೃತ್ವ ವಹಿಸಿಕೊಂಡರು.

ಮಕ್ಕಳಿಂದ ಮುಂದುವರಿಕೆ

ತೃತೀಯ ಪುತ್ರ ಎಸ್‌.ಎಸ್‌. ಮಲ್ಲಿಕಾರ್ಜುನ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕರಾಗಿ, ತಮ್ಮ ತಂದೆ ನಿರ್ವಹಿಸಿದ್ದ ತೋಟಗಾರಿಕೆ ಖಾತೆ ಜೊತೆಗೆ ಇದೀಗ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮುಧೋಳದಲ್ಲಿ ಸಕ್ಕರೆ ಕಾರ್ಖಾನೆ, ದಾವಣಗೆರೆಯಲ್ಲಿ ಅತ್ಯಾಧುನಿಕ ಅಕ್ಕಿ ಗಿರಣಿ ಸ್ಥಾಪಿಸಿದ್ದಾರೆ. ಶಾಮನೂರು ಗ್ರೂಪ್ ಆಫ್ ಇಂಡಸ್ಟ್ರೀಸ್ ಅಧ್ಯಕ್ಷರಾಗಿದ್ದ ಡಾ.ಶಾಮನೂರು ಶಿವಶಂಕರಪ್ಪ ಒಡೆತನದಲ್ಲಿ ಹಲವಾರು ಕೈಗಾರಿಕೆ ಸ್ಥಾಪಿಸಿ, ಸಾವಿರಾರು ಕುಟುಂಬಗಳಿಗೂ, ಲಕ್ಷಾಂತರ ಜನರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಆಸರೆಯಾಗಿದ್ದಾರೆ.

ಸಣ್ಣ ದಿನಸಿ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಆರಂಭಿಸಿದ್ದ ಶಿವಶಂಕರಪ್ಪ ತಮ್ಮ ಪರಿಶ್ರಮದಿಂದಲೇ ಹಲವಾರು ಬೃಹತ್ ಕೈಗಾರಿಕೋದಮ್ಯಗಳ ಒಡೆಯನಾಗಿ ತುಂಬು ಮನೆಯ ಯಜಮಾನನಾಗಿ ಜೀವನವನ್ನು ಅರ್ಥಪೂರ್ಣವಾಗಿ ಬಾಳಿದ್ದಾರೆ. ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ದಶಕಗಳ ಕಾರ್ಯನಿರ್ವಹಿಸಿದ್ದ ಶಿವಶಂಕರಪ್ಪ ದಾವಣಗೆರೆ ದಕ್ಷಿಣ ಶಾಸಕರಾಗಿ ಯುವಕರೂ ನಾಚುವಂತೆ ಚುರುಕಾಗಿ ಕಾರ್ಯನಿರ್ವಹಿಸಿದ್ದವರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಕಲಾಪ ಮುಂದಕ್ಕೆ ಇದೇ ಮೊದಲು
Online Engagement: ವರನಿಗೆ ರಜೆ ಸಿಗದ ಕಾರಣ ವಿಡಿಯೋ ಮೂಲಕ ಅದ್ಧೂರಿ ನಿಶ್ಚಿತಾರ್ಥ! ಫೋಟೋ ಇಲ್ಲಿವೆ ನೋಡಿ