
ಬಳ್ಳಾರಿ (ಜೂ.11): ನನ್ನ ಮನೆಯಿಂದ ಒಂದು ತುಂಡನ್ನೂ ಸಹ ಸೀಜ್ ಮಾಡಿಲ್ಲ. ಎಲ್ಲ ಆರೋಪಗಳು ಸುಳ್ಳು ಎಂದು ಶಾಸಕ ಭರತ್ ರೆಡ್ಡಿ ತಿಳಿಸಿದರು
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ತಳ್ಳಿಹಾಕಿದರು. ಇಡಿ ದಾಳಿಯಲ್ಲಿ ಯಾವುದೇ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಮನೆಯಿಂದ ಒಂದು ತುಂಡನ್ನೂ ಸೀಜ್ ಮಾಡಿಲ್ಲ. ಇಡಿ ಅಧಿಕಾರಿಗಳು ಹಲವು ಪ್ರಶ್ನೆಗಳನ್ನು ಕೇಳಿದರು, ನಾನು ಪೂರ್ಣ ಸಹಕಾರ ನೀಡಿದ್ದೇನೆ. ಪಂಚನಾಮೆ ಮಾಡಲಾಗಿದೆ, ಅದರಲ್ಲಿ ಏನನ್ನೂ ವಶಪಡಿಸಿಕೊಂಡಿಲ್ಲ ಎಂದು ಕ್ಲಿಯರ್ ಆಗಿ ತಿಳಿಸಲಾಗಿದೆ.
ರಾಜಕೀಯ ಷಡ್ಯಂತ್ರ: ಶಾಸಕ ಭರತ್ ರೆಡ್ಡಿ ಆರೋಪ:
ರಾಜಕೀಯ ಷಡ್ಯಂತ್ರದ ಭಾಗವಾಗಿ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿರುವ ಅವರು, ರಾಜಕೀಯವೆಂದರೆ ವಿರೋಧ ಪಕ್ಷಗಳು ಷಡ್ಯಂತ್ರ ಮಾಡುತ್ತವೆ. ಆದರೆ, ಯಾರು ಏನೇ ಮಾಡಿದರೂ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ಜನರ ಪ್ರೀತಿಯಿಂದ ನಾನು ಗೆದ್ದಿದ್ದೇನೆ. 40-50 ಕೋಟಿ ರೂಪಾಯಿ ಸೀಜ್ ಮಾಡಲಾಗಿದೆ ಎಂಬ ಊಹಾಪೋಹಗಳನ್ನು ಸುಳ್ಳು. ಇಂತಹ ಸುಳ್ಳು ಮಾಹಿತಿಗಳು ಹರಿದಾಡುತ್ತಿವೆ. ಇಡಿ ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೂ ನಾನು ಉತ್ತರ ನೀಡಿದ್ದೇನೆ. ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಹೋರಾಟಕ್ಕೆ ಸಿದ್ಧ:
ಮುಂದಿನ ವಿಚಾರಣೆಗೆ ಸಂಬಂಧಿಸಿದಂತೆ ಯಾವುದೇ ನೋಟೀಸ್ ಬಂದಿಲ್ಲ ಎಂದು ತಿಳಿಸಿರುವ ಭರತ್ ರೆಡ್ಡಿ, ನಮ್ಮ ವ್ಯಾಪಾರ ಮತ್ತು ವಾಲ್ಮೀಕಿ ನಿಗಮಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಅಧಿಕಾರಿಗಳು ಯಾವುದೇ ದಾಖಲಾತಿ ಕೇಳಿದರೆ, ಅದಕ್ಕೂ ಉತ್ತರ ನೀಡುವೆ. ನಾನು ಎಲ್ಲವನ್ನೂ ಪಾರದರ್ಶಕವಾಗಿ ನಡೆಸಿದ್ದೇನೆ. ಜನರ ಬೆಂಬಲ ನನ್ನೊಂದಿಗಿದೆ. ರಾಜಕೀಯ ದ್ವೇಷದಿಂದ ಮಾಡಲಾದ ಈ ದಾಳಿಗಳಿಂದ ನಮ್ಮ ಧೈರ್ಯ ಕುಗ್ಗುವುದಿಲ್ಲ ಎಂದರು.
ಈ ಘಟನೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್-ಬಿಜೆಪಿ ಆರೋಗ್ಯ ಪ್ರತ್ಯಾರೋಪಗಳು ತಾರಕಕ್ಕೇರಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ