Valmiki community protest: ಕುರುಬ ಎಸ್ಟಿ ಸೇರ್ಪಡೆಗೆ ವಾಲ್ಮೀಕಿ ಸಮುದಾಯ ವಿರೋಧ, ಸಿಎಂ ಮನೆಗೆ ಮುತ್ತಿಗೆ ಎಚ್ಚರಿಕೆ

Ravi Janekal   | Kannada Prabha
Published : Sep 26, 2025, 11:51 AM IST
Ballari valmki community protest

ಸಾರಾಂಶ

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಿಎಂ ಸಿದ್ದರಾಮಯ್ಯ ಅವರ ಹುನ್ನಾರದ ವಿರುದ್ಧ ಬಳ್ಳಾರಿಯಲ್ಲಿ ವಾಲ್ಮೀಕಿ ಸಮಾಜ ಬೃಹತ್ ಪ್ರತಿಭಟನೆ ನಡೆಸಿತು. ಇದು ಸಮುದಾಯವನ್ನು ರಾಜಕೀಯವಾಗಿ, ಶೈಕ್ಷಣಿಕವಾಗಿ ಹತ್ತಿಕ್ಕುವ ಯತ್ನ ಎಂದು ಆರೋಪಿಸಿರು. ಸಿಎಂ ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು.

ಬಳ್ಳಾರಿ(ಸೆ.26): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ಮೂಲಕ ವಾಲ್ಮೀಕಿ ಸಮಾಜವನ್ನು ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಹಾಗೂ ರಾಜಕೀಯವಾಗಿ ಹತ್ತಿಕ್ಕುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ವಾಲ್ಮೀಕಿ ಸಮಾಜದಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲ ವಲಯಗಳಲ್ಲಿ ಅಭಿವೃದ್ಧಿಗೊಂಡಿರುವ ಕುರುಬ ಸಮಾಜವನ್ನು ಎಸ್ಟಿಗೆ ಸೇರ್ಪಡೆಗೊಳಿಸುವುದು ಅತ್ಯಂತ ಅವೈಜ್ಞಾನಿಕ ಹಾಗೂ ಆತುರದ ನಿರ್ಧಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಅವಧಿಯೊಳಗೆ ಕುರುಬ ಸಮಾಜವನ್ನು ಎಸ್‌ಟಿಗೆ ಸೇರ್ಪಡೆಗೊಳಿಸುವ ನಿರ್ಧಾರ ಕೈಗೊಂಡಿದ್ದು, ಇದರಿಂದ ರಾಜ್ಯದಲ್ಲಿ ಎರಡು ಕೋಮುಗಳ ನಡುವಿನ ಸಂಘರ್ಷಕ್ಕೆ ನಾಂದಿ ಹಾಡುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ವಾಲ್ಮೀಕಿ ಸಮುದಾಯ ಆಕ್ರೋಶ:

ಪರಿಶಿಷ್ಟ ಪಂಗಡದ ಜನರು ಕಳೆದ ಒಂದು ದಶಕದಿಂದೀಚೆಗಷ್ಟೇ ರಾಜಕೀಯ, ಶೈಕ್ಷಣಿಕವಾಗಿ ಪ್ರಗತಿ ಕಂಡುಕೊಂಡುಕೊಳ್ಳುತ್ತಿದ್ದಾರೆ. ಇದನ್ನು ಸಹಿಸದ ಮುಖ್ಯಮಂತ್ರಿ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ, ಶೋಷಿತ ವಾಲ್ಮೀಕಿ ಸಮಾಜವನ್ನು ಸಂಪೂರ್ಣವಾಗಿ ದಮನ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ವಾಲ್ಮೀಕಿ-ಕುರುಬ ದಂಗೆ ಹೇಳಿಕೆ ಪ್ರಕರಣ: ಚಲವಾದಿ ನಾರಾಯಣಸ್ವಾಮಿಗೆ ಮಧ್ಯಂತರ ಜಾಮೀನು ಮಂಜೂರು

ಸಿಎಂ ಮನೆಗೆ ಮುತ್ತಿಗೆ ಎಚ್ಚರಿಕೆ:

ಇಲ್ಲಿನ ನಗರೂರು ನಾರಾಯಣರಾವ್ ಪಾರ್ಕ್‌ನಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಗಡಗಿ ಚನ್ನಪ್ಪ ವೃತ್ತದಲ್ಲಿ ಸಮಾವೇಶಗೊಂಡರು. ಇದೇ ವೇಳೆ ಮಾತನಾಡಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಾಲ್ಮೀಕಿ ಸಮಾಜದ ಯುವ ಮುಖಂಡ ಜೋಳದರಾಶಿ ತಿಮ್ಮಪ್ಪ ಅವರು, ವಾಲ್ಮೀಕಿ ಸಮಾಜದ ಅಸ್ವಿತ್ವ ನಾಶ ಮಾಡುವ ಹುನ್ನಾರ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೋರಾಟದ ಮೂಲಕವೇ ಉತ್ತರ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಇಡೀ ಕುರುಬ ಸಮಾಜ ಎಸ್ಟಿಗೆ ಸೇರ್ಪಡೆ ಮಾಡುವುದು ಎಷ್ಟು ಸರಿ?

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಾಡುಕುರುಬರು ಹಾಗೂ ಜೇನು ಕುರುಬರಿದ್ದಾರೆ. ಈಗಾಗಲೇ ಅವರು ಎಸ್‌ಟಿಗೆ ಸೇರ್ಪಡೆಗೊಂಡಿದ್ದಾರೆ. ಅವರ ಸೇರ್ಪಡೆಗೆ ನಮ್ಮ ವಿರೋಧವಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ಕುರುಬ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮುಂದಿನ ದಿನಗಳಲ್ಲಿ ಹೋರಾಟ:

ಕುರುಬರನ್ನು ಎಸ್‌ಟಿಗೆ ಯಾಕೆ ಸೇರಿಸಬಾರದು ಎಂಬುದನ್ನು ಸಮರ್ಥಿಸಲು ಕೇಂದ್ರೀಯ ಕುಲಶಾಸ್ತ್ರ ಅಧ್ಯಯನ ಸಮಿತಿಗೆ ಪೂರಕ ದಾಖಲೆಗಳನ್ನು ನೀಡಲಾಗುವುದು. ವಾಲ್ಮೀಕಿ ಸಮಾಜವನ್ನು ಹತ್ತಿಕ್ಕಲು ಮುಂದಾಗಿರುವ ಸಿದ್ದರಾಮಯ್ಯ ನಡೆಯ ವಿರುದ್ಧ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿವಿಧ ಹಂತದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ವಾಲ್ಮೀಕಿ ಪೀಠದ ಶ್ರೀಗಳ ಸಲಹೆಯಂತೆಯೇ ಹೋರಾಟ ರೂಪಿಸಿಕೊಂಡಿದ್ದು, ಸಿದ್ದರಾಮಯ್ಯ ಅವರ ನಡೆ ವಿರೋಧಿಸುವ ಇತರ ಸಮುದಾಯಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು. ಸಾಮಾಜಿಕ ನ್ಯಾಯಕ್ಕಾಗಿ ನಡೆಯುವ ಚಳವಳಿಯಲ್ಲಿ ಪಾಲ್ಗೊಂಡು ನಮ್ಮ ಶಕ್ತಿ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಗಡಗಿ ಚನ್ನಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಕಳುಹಿಸಿದರು. ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಮನವಿ ಸ್ವೀಕರಿಸಿದರು.

ಇದನ್ನೂ ಓದಿ: ರಾಜ್ಯ ಸರ್ಕಾರದ ಜಾತಿ ಸಮೀಕ್ಷೆಗೆ ಯಾವುದೇ ಮಾನ್ಯತೆಯಿಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ವಾಲ್ಮೀಕಿ ಸಮಾಜದ ಜಿಲ್ಲಾ ಪ್ರಮುಖರಾದ ಮುದಿ ಮಲ್ಲಯ್ಯ ಮೋಕಾ, ಜನಾರ್ದನ ನಾಯಕ, ಎನ್. ಸತ್ಯನಾರಾಯಣ, ವಕೀಲ ಜಯರಾಮ್, ರುದ್ರಪ್ಪ, ರೂಪನಗುಡಿ ಗೋವಿಂದಪ್ಪ, ಕಾಯಿಪಲ್ಯೆ ಬಸವರಾಜ್, ಪುಷ್ಪಲತಾ, ದುರುಗಪ್ಪ ನಾಯಕ, ಜಾನಕಮ್ಮ, ಮೆಡಿಕಲ್ ಮಲ್ಲಿಕಾರ್ಜುನ, ಬಿ. ಮಲ್ಲಿಕಾರ್ಜುನ, ಜೋಳದರಾಶಿ ಚಂದ್ರಶೇಖರ, ಯರಗುಡಿ ರಮೇಶ್, ಯರಗುಡಿ ಚಂದ್ರಶೇಖರ, ರೂಪನಗುಡಿ ನಾಗರಾಜ್, ವೆಂಕಟೇಶ್, ನಾರಾಯಣಸ್ವಾಮಿ, ದೇಗಲಪಾಡು ಸುಂಕಣ್ಣ, ಪರಂಧಾಮ, ಮಾರೆಣ್ಣ, ಅದ್ದಿಗೇರಿ ರಾಮಣ್ಣ, ರಾಜ, ಹೇಮಣ್ಣ ಭಾಗವಹಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!