
ತುಮಕೂರು ಜಿಲ್ಲೆಯಲ್ಲಿ ಸರ್ಕಾರಿ ಉದ್ಯೋಗ ನೀಡುವುದಾಗಿ ನಂಬಿಸಿ ನಕಲಿ ನೇಮಕಾತಿ ಆದೇಶ ಪತ್ರಗಳನ್ನು ತಯಾರಿಸಿ ವಂಚನೆ ಮಾಡುತ್ತಿದ್ದ ದೊಡ್ಡ ಜಾಲವನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಅರಣ್ಯ ಇಲಾಖೆಯ ವಿವಿಧ ಹುದ್ದೆಗಳಿಗೆ ನಕಲಿ ನೇಮಕಾತಿ ಆದೇಶಗಳನ್ನು ನೀಡಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ದೋಚುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಈ ವಂಚನೆ ಜಾಲವು ತುಮಕೂರು ತಾಲೂಕಿನ ವಡ್ಡರಹಳ್ಳಿ ಗ್ರಾಮದ ಸಮೀಪದ ತೋಟದ ಶೆಡ್‌ನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಶೆಡ್ ತುಮಕೂರು ಮೂಲ್ ಒಬ್ಬ ಪ್ರಭಾವಿ ರಾಜಕಾರಣಿಯ ಪರಮಾಪ್ತನಾದ ವಾಲೆ ಚಂದ್ರು ಒಡೆತನದಲ್ಲಿದೆ ಎನ್ನಲಾಗಿದ್ದು, ಅವನೇ ಈ ಜಾಲದ ಪ್ರಮುಖ ಸೂತ್ರಧಾರನಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ವಂಚಕರು ಪರಿಸರ ಮತ್ತು ಅರಣ್ಯ ಇಲಾಖೆಯ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ ಪತ್ರಗಳನ್ನು ಸೃಷ್ಟಿಸಿ, ಅದರಲ್ಲಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ನೇಗಿ ಅವರ ನಕಲಿ ಸಹಿಯನ್ನು ಬಳಸಿಕೊಂಡಿದ್ದರು. ಈ ನಕಲಿ ದಾಖಲೆಗಳನ್ನು ನಂಬಿದ ನೂರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ವಂಚನೆಗೆ ಒಳಗಾಗಿರುವ ಸಾಧ್ಯತೆ ಇದೆ.
ಪ್ರತಿ ಅಭ್ಯರ್ಥಿಯಿಂದ ₹3 ಲಕ್ಷದಿಂದ ₹5 ಲಕ್ಷವರೆಗೆ ಹಣ ವಸೂಲಿ ಮಾಡಲಾಗಿದ್ದು, ತರಬೇತಿ ನೀಡುವುದಾಗಿ ನಂಬಿಸಿ ಅವರನ್ನು ತೋಟದ ಶೆಡ್‌ಗೆ ಕರೆಸಿಕೊಳ್ಳಲಾಗುತ್ತಿತ್ತು. ಅಲ್ಲದೇ, ತರಬೇತಿ ಮುಗಿದ ಬಳಿಕ ಇನ್ನಷ್ಟು ಹಣ ಪಡೆಯುವ ಉದ್ದೇಶದಿಂದ ಮತ್ತಷ್ಟು ನಾಟಕವನ್ನೂ ರೂಪಿಸಲಾಗಿತ್ತು.
ವಂಚಕರು ಉದ್ಯೋಗಾಕಾಂಕ್ಷಿಗಳಿಗೆ ಅನುಮಾನ ಬಾರದಂತೆ ವಿವಿಧ ಕಡೆಗಳಲ್ಲಿ ತರಬೇತಿ ನೀಡುತ್ತಿರುವಂತೆ ತೋರಿಸುತ್ತಿದ್ದರು. ದೇವರಾಯದುರ್ಗ ಬೆಟ್ಟ, ಚಿನಗಾ ಬೆಟ್ಟ ಸೇರಿದಂತೆ ಹಲವಾರು ಸ್ಥಳಗಳಲ್ಲಿ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿತ್ತು. ಕೆಲವೊಮ್ಮೆ ನಿವೃತ್ತ ಅರಣ್ಯಾಧಿಕಾರಿಗಳನ್ನು ಕೂಡ ಕರೆಸಿ ತರಬೇತಿ ನೀಡುತ್ತಿರುವಂತೆ ನಾಟಕ ಮಾಡಲಾಗುತ್ತಿತ್ತು.
ಒಂದು ವೇಳೆ ಸುಮಾರು 15 ಮಂದಿ ಅಭ್ಯರ್ಥಿಗಳನ್ನು ಶೆಡ್‌ಗೆ ಕರೆತಂದು ತರಬೇತಿ ನೀಡುತ್ತಿರುವ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ವೇಳೆ ಸ್ಥಳದಲ್ಲಿದ್ದ ಯುವಕರನ್ನು ರಕ್ಷಿಸಲಾಗಿದ್ದು, ವಂಚಕರ ತಂಡ ಸ್ಥಳದಿಂದ ಪರಾರಿಯಾಗಿದೆ.
ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅರಣ್ಯ ಇಲಾಖೆ ವಲಯ ಅಧಿಕಾರಿ ನಮಿತಾ ಅವರು ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ವಂಚಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಆದರೆ, ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವಾಲೆ ಚಂದ್ರು ಹೆಸರು ಎಫ್‌ಐಆರ್‌ನಲ್ಲಿ ಇಲ್ಲದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಪ್ರಭಾವಿ ವ್ಯಕ್ತಿಗಳಿಗೆ ಪೊಲೀಸರ ಶ್ರೀರಕ್ಷೆ ದೊರೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಈ ಕುರಿತು ತುಮಕೂರು ಡಿಎಫ್ಓ ಶಶಿಧರ್ ಪ್ರತಿಕ್ರಿಯೆ ನೀಡಿದ್ದು, “ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡವನ್ನು ರಚಿಸಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಅಲ್ಲಿ ಸುಮಾರು 15 ಮಂದಿ ಅಭ್ಯರ್ಥಿಗಳು ಇದ್ದರು. ವಿಚಾರಣೆ ವೇಳೆ ‘ನೇಚರ್ ಕ್ಯಾಂಪ್’ ಸಂಬಂಧಿತ ತರಬೇತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ಅವರ ಬಳಿ ನಕಲಿ ಪ್ರಮಾಣಪತ್ರಗಳು ಪತ್ತೆಯಾಗಿವೆ. ಹೆಚ್ಚಿನ ವಿಚಾರಣೆಗೆ ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ನಮ್ಮ ವಲಯ ಅಧಿಕಾರಿ ಎಫ್‌ಐಆರ್ ದಾಖಲಿಸಿದ್ದು, ತನಿಖೆ ಮುಂದುವರಿದಿದೆ” ಎಂದು ಹೇಳಿದ್ದಾರೆ.
ಈ ವಂಚನೆಗೆ ಒಳಗಾದ ಅನೇಕ ಯುವಕರು ತಮ್ಮ ಹಣ ಕಳೆದುಕೊಂಡಷ್ಟೇ ಅಲ್ಲದೆ, ಉದ್ಯೋಗದ ಆಶೆಯೂ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಸಾಲ ಮಾಡಿ ಹಣ ನೀಡಿದ್ದರಿಂದ ಇದೀಗ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಒಟ್ಟಾರೆ, ಪ್ರಭಾವಿ ವ್ಯಕ್ತಿಗಳ ನೆರಳಿನಲ್ಲಿ ನಡೆಯುತ್ತಿದ್ದ ಈ ವಂಚನೆ ಜಾಲ ರಾಜ್ಯದ ವಿವಿಧ ಭಾಗಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ