ದೇಗುಲದ 1200 ಕೇಜಿ ಚಿನ್ನ ಬ್ಯಾಂಕಲ್ಲಿ ಠೇವಣಿ!

By Kannadaprabha NewsFirst Published Jun 10, 2020, 7:58 AM IST
Highlights

ಕೇರಳ ದೇಗುಲದ 1200 ಕೇಜಿ ಚಿನ್ನ ಆರ್‌ಬಿಐನಲ್ಲಿ ಠೇವಣಿ!| ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧಾರ| ಈ ರೀತಿ ಠೇವಣಿ ಇಟ್ಟರೆ ಶೇ.2 ಬಡ್ಡಿ| ನಿತ್ಯ ಅಲಂಕಾರದ ಚಿನ್ನವು ಠೇವಣಿ ಇಲ್ಲ| ಕಾಣಿಕೆಯಾಗಿ ಬಂದ ಬಂಗಾರ ಮಾತ್ರ ಠೇವಣಿ

ತಿರುವನಂತಪುರಂ: ಕೇರಳದ ದೇಗುಲಗಳ ವ್ಯವಹಾರ ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ), ತನ್ನ ಅದೀನದಲ್ಲಿರುವ ದೇವಾಲಯಗಳಿಗೆ ಕಾಣಿಕೆಯಾಗಿ ಬಂದಿರುವ ಚಿನ್ನವನ್ನು ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ)ನಲ್ಲಿ ಠೇವಣಿ ಇಡಲು ತೀರ್ಮಾನಿಸಿದೆ. ದೇವಸ್ವಂ ಮಂಡಳಿ ಬಳಿ ಅಂದಾಜು 1200 ಕೇಜಿ ಚಿನ್ನ ಇದೆ ಎಂದು ಅಂದಾಜಿಸಲಾಗಿದೆ. ಚಿನ್ನದ ನಿಖರ ಮೌಲ್ಯಮಾಪನವನ್ನು ತಿಂಗಳ ಅಂತ್ಯಕ್ಕೆ ಪೂರ್ಣಗೊಳಿಸಲು ತಾತ್ವಿಕವಾಗಿ ನಿರ್ಧರಿಸಲಾಗಿದ್ದು, ಬಳಿಕ ಆರ್‌ಬಿಐನಲ್ಲಿ ಠೇವಣಿ ಇರಿಸಲಾಗುತ್ತದೆ.

ದೇವರಿಗೆ ನಿತ್ಯ ಅಲಂಕಾರಕ್ಕೆ ಬಳಸಲಾಗುವ ಆಭರಣಗಳನ್ನು ಹಾಗೂ ಪ್ರಾಚೀನ ಇತಿಹಾಸ ಹೊಂದಿರುವ ಆಭರಣಗಳನ್ನು ಠೇವಣಿ ಇರುಸುವುದಿಲ್ಲ. ಬದಲಾಗಿ ಕಾಣಿಕೆಯಾಗಿ ಬಂದ ಆಭರಣಗಳನ್ನು ಮಾತ್ರ ಠೇವಣಿ ಇರಿಸಲಾಗುತ್ತದೆ. ಆ ಚಿನ್ನವನ್ನು ಕರಗಿಸಿ ಠೇವಣಿಗೆ ಕೊಡಲಾಗುತ್ತದೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಎನ್‌. ವಾಸು ಹೇಳಿದ್ದಾರೆ. ಚಿನ್ನ ಠೇವಣಿ ಇರಿಸಿದರೆ ಅದಕ್ಕೆ ಆರ್‌ಬಿಐ ಶೇ.2ರ ಬಡ್ಡಿ ನೀಡುತ್ತದೆ. ಈಗಾಗಲೇ ಗುರುವಾಯೂರು ಹಾಗೂ ತಿರುಪತಿ ದೇಗುಲಗಳು ಆರ್‌ಬಿಐನಲ್ಲಿ ಚಿನ್ನ ಠೇವಣಿ ಇರಿಸಿವೆ. ಗುರುವಾಯೂರು ದೇಗುಲಕ್ಕೆ 10.5 ಕೋಟಿ ರು. ಬಡ್ಡಿ ಬರುತ್ತದೆ. ಇದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

click me!