ನಿರಂತರ ಹೋರಾಟದ ಮೂಲಕ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ಪಡೆದ ಜಯ ಮೃತ್ಯುಂಜಯ ಸ್ವಾಮೀಜಿಗೆ ಕೊಲೆ ಬೆದರಿಕೆ ಬಂದಿದೆ.
ಬೆಂಗಳೂರು (ಏ.03): ರಾಜ್ಯದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ ಸರ್ಕಾರದಿಂದ 2ಡಿ ಮೀಸಲಾತಿ ಕಲ್ಪಿಸಿದ ಹಿನ್ನೆಲೆಯಲ್ಲಿ ಕೂಡಲಸಂಗಮ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗೆ ಕೊಲೆ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಗೆ ಭದ್ರತೆ ನಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ನೀಡಿದ್ದಾರೆ.
ಜಯ ಮೃತ್ಯುಂಜಯ ಸ್ವಾಮೀಜಿ ಅವರು ರಾಜ್ಯದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿದ್ದರ ಫಲವಾಗಿ ಇತ್ತೀಚೆಗೆ ರಾಜ್ಯ ಸರ್ಕಾರ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ಸೃಷ್ಟಿಸಿದೆ. ಆದರೆ, ಇದರಿಂದ ಬಿಜೆಪಿಗೆ ಕ್ರೆಡಿಟ್ ಹೋಗಿದ್ದು, ಕಾಂಗ್ರೆಸ್‌ಗೆ ಬರಬೇಕಿದ್ದ ಎಲ್ಲ ಪಂಚಮಸಾಲಿ ಮತ್ತು ಲಿಂಗಾಯತ ಮತಗಳು ಬಿಜೆಪಿಗೆ ಹೋಗಲಿವೆ. ಇದರಿಂದ ಕುಪಿತಗೊಂಡ ಕೆಲವು ಜನಪ್ರತಿನಿಧಿಗಳು ಸ್ವಾಮೀಜಿ ರಾತ್ರಿ ವೇಳೆ ಕುಡಿದು ಕರೆ ಮಾಡಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಯ ಮೃತ್ತುಂಜಯ ಸ್ವಾಮೀಜಿಗೆ ಸೂಕ್ತ ಭದ್ರತೆಯನ್ನು ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.
ಪಂಚಮಸಾಲಿ ಲಿಂಗಾಯತರು ವಿಜಯೋತ್ಸವದ ಹಬ್ಬ ಆಚರಿಸಿ: ಜಯಮೃತ್ಯುಂಜಯ ಸ್ವಾಮೀಜಿ ಕರೆ
ಭದ್ರತೆಗಾಗಿ ಶಾಸಕರಿಂದ ಮನವಿ: ಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಶಾಸಕ ಅವರವಿಂದ ಬೆಲ್ಲದ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಸ್ವಾಮೀಜಿಗೆ ಭದ್ರತೆ ಕೊಡಲು ಮನವಿ ಮಾಡಿದ ಈ ಹಿನ್ನೆಲೆಯಲ್ಲಿ ಕೂಡಲೇ ಜಯಮೃತ್ಯುಂಜಯ ಸ್ವಾಮೀಜಿಗೆ ಭದ್ರತೆಯನ್ನು ಕೊಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ನಾಯಕರಿಂದ ಸ್ವಾಮೀಜಿಗೆ ಕಿರುಕುಳ: ಈ ಕುರಿತುಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ ಶಾಸಕ ಅರವಿಂದ್ ಬೆಲ್ಲದ್ ಅವರು, ಪಂಚಾಯತಿ ಮೀಸಲಾತಿ ಹೋರಾಟ ಮುಕ್ತಾಯ ಆಗಿದೆ. ಸಮುದಾಯಕ್ಕೆ ನ್ಯಾಯ ಸಿಕ್ಕಿದೆ. ಆದರೆ ಕಾಂಗ್ರೆಸ್ ಕೆಲ ನಾಯಕರು ರಾತ್ರಿ ಕುಡಿದು ಸ್ವಾಮಿಜಿಗಳಿಗೆ ಕಾಲ್ ಮಾಡ್ತಾ ಇದ್ದಾರೆ. ಸ್ವಾಮಿಜಿಗಳು ಮಾನಸಿಕವಾಗಿ ನೊಂದಿದ್ದಾರೆ. ಇದು ಸಮುದಾಯಕ್ಕೂ ಗೊತ್ತಾಗಿದೆ. ಸ್ವಾಮಿಜಿಗಳು ಯಾವುದೇ ಪಲಾಪೇಕ್ಷೆ ಇಲ್ಲದೇ ಹೋರಾಟ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಕೆಲ ನಾಯಕರು ರಾತ್ರಿ ಕುಡಿದು ಸ್ವಾಮಿಜಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಮೀಸಲಾತಿ ನೀಡಿದ್ದರಿಂದ ಕಾಂಗ್ರೆಸ್‌ಗೆ ಗರ ಬಡಿದಿದೆ: ರಾಜ್ಯದಲ್ಲಿ ಮೀಸಲಾತಿ ಘೋಷಣೆ ಆಗಹುತ್ತಿದ್ದಂತೆ ಕಾಂಗ್ರೆಸ್‌ಗೆ ಗರ ಬಡಿದಂತೆ ಆಗಿದೆ. ಹೀಗಾಗಿ ಅವರು ವಿರೋಧ ಸ್ವಾಮೀಜಿಯನ್ನು ವಿರೋಧ ಮಾಡುತ್ತಿದ್ದಾರೆ. ಈ ಬಾರಿ ನಾನು ನೂರಕ್ಕೆ ನೂರು ಚುನಾವಣೆಯಲ್ಲಿ ಗೆಲ್ಲುತ್ತೇನೆ. ಮೋಹನ್ ಲಿಂಬಿಕಾಯಿ ಪಾರ್ಟಿಯಲ್ಲಿ ಇದ್ದು, ಸ್ಥಾನ ಮಾನಕ್ಕೆ ಪ್ರಯತ್ನ ಮಾಡುತ್ತಿದ್ದರು. ಈಗ ಅವರು ಕಾಂಗ್ರೆಸ್ ಗೆ ಹೋಗಿದ್ದಾರೆ. ಇನ್ನು ಬಹುತೇಕ ಎಲ್ಲ ಶಾಸಕರಿಗೂ ಟಿಕೆಟ್ ಸಿಗಲಿದೆ. ಇನ್ನು ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡುವ ವಿಚಾರವಾಗಿ ನಾನು ಮಾತನಾಡುವುದಿಲ್ಲ. ದೊಡ್ಡವರ ಬಗ್ಗೆ ನಾನು ಮಾತನಾಡಲ್ಲ ಎಮದು ಹೇಳಿದರು.
ಮೀಸಲಾತಿ ಒಪ್ಪುವಂತೆ ಶ್ರೀಗಳಿಗೆ ಸರ್ಕಾರದ ಬೆದರಿಕೆ: ಡಿ.ಕೆ.ಶಿವಕುಮಾರ್
ವಿಜಯೋತ್ಸವಕ್ಕೆ ಕರೆ ನೀಡಿದ್ದ ಸ್ವಾಮೀಜಿ: ಕಳೆದ ಮಾ.30ರಂದು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ನೀಡಿದ್ದ ಆದೇಶ ಪತ್ರವನ್ನು ಪಡೆದುಕೊಂಡಿದ್ದ ಜಯಮೃತ್ಯುಂಜಯ ಸ್ವಾಮೀಜಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಜೊತೆಗೆ, ನಮ್ಮ ಸಮುದಾಯದ ಎಲ್ಲರೂ ಕೂಡ ವಿಜಯೋತ್ಸವ ಆಚರಣೆ ಮಾಡಬೇಕು ಎಂದು ಕರೆ ನೀಡಿದ್ದರು. ಜೊತೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವು ಮುಸ್ಲಿಂ ಮೀಸಲಾತಿಯನ್ನು ಕಿತ್ತುಕೊಂಡಿದ್ದರನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿದ್ದರು. ಕಾಂಗ್ರೆಸ್ ನಾಯಕರು ಯಾವುದೇ ಕಾರಣಕ್ಕೂ ಇಂತಹ ಹೇಳಿಕೆ ನೀಡಬಾರದು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡಿದ್ದರು. ಇದೇ ಆಕ್ರೋಶದ ಬೆನ್ನಲ್ಲೇ ಕಾಂಗ್ರೆಸ್‌ನ ಕೆಲವು ಮುಖಂಡರು ಸ್ವಾಮೀಜಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.