
ಬೆಂಗಳೂರು (ಜು.04): ಲೋಕಾಯುಕ್ತ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬೆದರಿಸಿ ಹಣ ಸುಲಿಗೆ ಪ್ರಕರಣ ಸಂಬಂಧ ಆರೋಪಿತ ಐಪಿಎಸ್ ಅಧಿಕಾರಿ ಶ್ರೀನಾಥ್ ಮಹದೇವ ಜೋಶಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಲೋಕಾಯುಕ್ತರು ಪತ್ರ ಬರೆದಿದ್ದಾರೆ. ಲೋಕಾಯುಕ್ತ ಸಂಸ್ಥೆ ಹೆಸರು ದುರ್ಬಳಕೆ ಮಾಡಿಕೊಂಡು ಹಣ ಸುಲಿಗೆ ಬಗ್ಗೆ ಗೌಪ್ಯ ಮಾಹಿತಿ ಲೋಕಾಯುಕ್ತರವರಿಗೆ ತಿಳಿದ ತಕ್ಷಣ ಸಂಸ್ಥೆಯ ಪೊಲೀಸ್ ಅಧೀಕ್ಷಕರಿಗೆ ತನಿಖೆಗೆ ಆದೇಶಿಸಿದರು.
ಅದರನ್ವಯ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಪ್ರಕರಣದಲ್ಲಿ ನಿಂಗಪ್ಪ ಅಲಿಯಾಸ್ ನಿಂಗಪ್ಪ ಸಾವಂತನನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಕರಣದ ಸಂಬಂಧ ತನಿಖೆ ವೇಳೆ ನಿಂಗಪ್ಪ ಜತೆ ಲೋಕಾಯುಕ್ತ ಎಸ್ಪಿ ಶ್ರೀನಾಥ್ ನಂಟು ಬಯಲಾಗಿದೆ. ಸರ್ಕಾರಿ ಅಧಿಕಾರಿಗಳಿಗೆ ಬೆದರಿಸಿ ಹಣವನ್ನು ಕೋಡ್ ವರ್ಡ್ ‘kg’ ಮುಖಾಂತರ ವಸೂಲು ಮಾಡುತ್ತಿರುವುದು ತನಿಖೆಯಲ್ಲಿ ಗೊತ್ತಾಯಿತು.
ಅಲ್ಲದೆ, ಕ್ರಿಪ್ಟೊ ಕರೆನ್ಸಿಯಲ್ಲಿ ₹4.92 ಕೋಟಿಯನ್ನು ನಿಂಗಪ್ಪ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ ಎಂದಿದ್ದಾರೆ. ಎಸ್ಪಿ ಜೋಶಿ ಅವರ ಮನೆ ಶೋಧ ನಡೆಸಲಾಗಿದೆ. ಆದರೆ ಪ್ರಕರಣದ ತನಿಖೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ, ಅಕ್ರಮವಾಗಿ ಹಣ ವಸೂಲಿ ಮಾಡಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಜೋಶಿ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ಲೋಕಾಯುಕ್ತರು ಹೇಳಿದ್ದಾರೆ.
ದೂರು ನೀಡಿ, ಲೋಕಾಗೆ ಮನವಿ: ಲೋಕಾಯುಕ್ತ ಸಂಸ್ಥೆ ಹೆಸರು ಅಥವಾ ಸಂಸ್ಥೆ ಅಧಿಕಾರಿ-ನೌಕರರ ಹೆಸರು ಬಳಸಿ ಯಾವುದೇ ವಿಷಯಕ್ಕಾಗಲಿ ಹಣದ ಬೇಡಿಕೆ ಇಟ್ಟಲ್ಲಿ ಮಾಹಿತಿ ನೀಡುವಂತೆ ಲೋಕಾಯುಕ್ತರು ಮನವಿ ಮಾಡಿದ್ದಾರೆ. ಈ ಬಗ್ಗೆ ಕರ್ನಾಟಕ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಬಹುದು ಅಥವಾ ಈ ಕಚೇರಿಯ ಕೆಳಕಂಡ ದೂರವಾಣಿ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ. 080-22011205-kla-citysp-ka@nic.in, 080-22011273-kla.citysp2-ka@nic.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ