ಶಿಕ್ಷಕರ ವರ್ಗಾವಣೆಯಲ್ಲಿ ಪ್ರಭಾವಿಗಳ ಕೈವಾಡ ನಿಜ: ಸುರೇಶ್‌ ಕುಮಾರ್

By Kannadaprabha News  |  First Published Feb 6, 2020, 7:57 AM IST

ಶಿಕ್ಷಕರ ವರ್ಗಾವಣೆಯಲ್ಲಿ ಪ್ರಭಾವಿಗಳ ಕೈವಾಡ ನಿಜ: ಸುರೇಶ್‌| ಶಿಕ್ಷಣ ಇಲಾಖೆಯಲ್ಲಿ ದಂಧೆ ನಡೆಯುತ್ತಿರುವುದನ್ನು ಒಪ್ಪಿಕೊಂಡ ಶಿಕ್ಷಣ ಸಚಿವ


ಕೋಲಾರ[ಫೆ.06]: ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿರುವುದು ಸತ್ಯ ಎಂದು ಸ್ವತಃ ಶಿಕ್ಷಣ ಸಚಿವರಾದ ಎಸ್‌.ಸುರೇಶ್‌ ಕುಮಾರ್‌ ಒಪ್ಪಿಕೊಂಡಿದ್ದು, ಶಿಕ್ಷಕರ ವರ್ಗಾವಣೆಯಲ್ಲಿ ಪ್ರಭಾವಿಗಳು ಕೈವಾಡ ಇರೋದು ಕೂಡ ಸತ್ಯ. ವರ್ಗಾವಣೆಯ ಸ್ಥಳವನ್ನ ಪ್ರಭಾವಿಗಳು ಬ್ಲಾಕ್‌ ಮಾಡ್ತಾರೆ. ಧ್ವನಿ ಇಲ್ಲದವರಿಗೆ ತೊಂದರೆ ಆಗುತ್ತಿರೋದು ನೂರಕ್ಕೆ ನೂರು ಸತ್ಯ ಎಂದಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನಡೆಯುವ ವರ್ಗಾವಣೆ ಪಾರದರ್ಶಕವಾಗಿ ನಡೆಯೋದಕ್ಕೆ ಪ್ರಯತ್ನ ಪಡುತ್ತೇನೆ. ವರ್ಷವಿಡೀ ವರ್ಗಾವಣೆ ಮಾಡುವುದಿಲ್ಲ. ರಾಜ್ಯದಲ್ಲಿ ಶಿಕ್ಷಕ ಸ್ನೇಹಿ ವರ್ಗಾವಣೆ ಕಾಯ್ದೆ ಜಾರಿಗೆ ತರಲು ಚಿಂತನೆ ನಡೆಸಲಾಗಿದ್ದು, ಮುಂದಿನ ಅಧಿವೇಶನದಲ್ಲಿ ಅನುಮೋದನೆ ಪಡೆಯಲಾಗುವುದು. ಜೂನ್‌ ಒಳಗೆ ವರ್ಗಾವಣೆ ಪ್ರಕ್ರಿಯೆ ಮುಗಿಸಿ ಶಾಲೆಗಳನ್ನು ಆರಂಭಿಸುತ್ತೇವೆ. ಎಲ್ಲಾ ಶಿಕ್ಷಕರು ಜೂನ್‌ನಿಂದಲೇ ಶಾಲೆಗಳಿಗೆ ಹೋಗಬೇಕು ಎಂದರು.

Tap to resize

Latest Videos

undefined

ನಿವೃತ್ತಿಯ ಎರಡು ವರ್ಷ ಮುಂಚೆ ವರ್ಗಾವಣೆ ಮಾಡಲ್ಲ. ವಲಯ ಹಂತದ ವರ್ಗಾವಣೆ ಬಿಟ್ಟು, ಜಿಲ್ಲೆ, ತಾಲೂಕು ವ್ಯಾಪ್ತಿ ವರ್ಗಾವಣೆ ಆಗಬೇಕು. ಪ್ರೌಢಶಾಲಾ ಶಿಕ್ಷಕರಿಗೆ ಜಿಲ್ಲಾ ಮಟ್ಟದಲ್ಲಿ ಪ್ರಾಥಮಿಕ ಶಿಕ್ಷಕರಿಗೆ ತಾಲೂಕು ಮಟ್ಟದಲ್ಲಿಯೇ ವರ್ಗಾವಣೆಗಳನ್ನು ಮಾಡಲಾಗುವುದು. ಶಾಲೆಗೆ ಹೋಗದೆ ಇರುವ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಶಿಕ್ಷಕರ ವರ್ಗಾವಣೆ ಜಟಿಲವಾಗಿದ್ದು, ಕಡ್ಡಾಯ ವರ್ಗಾವಣೆ ಹೆಸರಿನಲ್ಲಿ ಶಿಕ್ಷಕರನ್ನು ಶಿಕ್ಷೆಗೆ ಒಳಪಡಿಸಲಾಗುತ್ತಿದೆ. ಶಿಕ್ಷಕರು ಒತ್ತಾಯ ಪೂರ್ವಕ ವರ್ಗಾವಣೆಗಳಿಂದ ಕಷ್ಟಪಟ್ಟು ಶಾಲೆಗಳಿಗೆ ಹೋಗುವುದು ಬೇಡ ಇಷ್ಟಪಟ್ಟು ಹೋಗಬೇಕು, ಇಷ್ಟಪಟ್ಟು ಶಾಲೆಗೆ ಹೋದರೆ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯ ಎಂದು ತಿಳಿಸಿದರು.

ನೆರವು ನೀಡಲು ಆ್ಯಪ್‌:

ಸರ್ಕಾರಿ ಶಾಲೆಗೆ ನೆರವು ನೀಡುವವರು ಇಲಾಖೆಯನ್ನು ಸಂಪರ್ಕಿಸಲು ಆ್ಯಪ್‌ ರಚನೆ ಮಾಡಲಾಗುವುದು. ಸರ್ಕಾರಿ ಶಾಲೆಗಳಿಗೆ ಕೊಠಡಿ, ಗ್ರಂಥಾಲಯ, ಲ್ಯಾಬೊರೇಟರಿಗಳ ನಿರ್ಮಾಣ ಮತ್ತು ಇತರೆ ಸಹಾಯಗಳನ್ನು ಮಾಡುವವರಿಗೆ ವಿಶೇಷ ಆ್ಯಪ್‌ ಮೂಲಕ ಸಹಾಯ ಮಾಡುವ ವ್ಯವಸ್ಥೆಯನ್ನು ಮಾ.31ರ ಒಳಗಾಗಿ ಜಾರಿಗೊಳಿಸಲಾಗುವುದು ಎಂದರು

click me!