Live-in Relationship Laws: ಲಿವ್‌ಇನ್ನಲ್ಲಿ ಜನಿಸಿದ ಮಗುಗೆ ಜೀವನಾಂಶ ಕೊಡಿಸಿದ ಕೋರ್ಟ್‌!

Kannadaprabha News   | Kannada Prabha
Published : Jul 14, 2025, 06:34 AM ISTUpdated : Jul 14, 2025, 10:03 AM IST
karnataka highcourt

ಸಾರಾಂಶ

ಮದುವೆಯಾಗುವ ಭರವಸೆ ನೀಡಿ ಯುವತಿಯೊಂದಿಗೆ ಸಹಜೀವನ ನಡೆಸಿ ಮಗುವಿಗೆ ಜನ್ಮ ನೀಡಿದ ಮಾಜಿ ಮುಖ್ಯ ಶಿಕ್ಷಕನಿಗೆ ಮಗುವಿನ ಜೀವನಾಂಶ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಡಿಎನ್‌ಎ ಪರೀಕ್ಷೆಯಲ್ಲಿ ಮಗು ತನ್ನದೇ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ವೆಂಕಟೇಶ್‌ ಕಲಿಪಿ

ಬೆಂಗಳೂರು (ಜುಲೈ.14): ಮದುವೆಯಾಗುವ ಭರವಸೆ ನೀಡಿ ಯುವತಿಯೊಂದಿಗೆ ಸಹ ಜೀವನ ನಡೆಸಿದ್ದರಿಂದ ಹುಟ್ಟಿದ ಮಗನಿಗೆ ಜೀವನಾಂಶ ಪಾವತಿಸುವುದಿಲ್ಲ ಎಂದು ಹಠ ಹಿಡಿದಿದ್ದ ಮಾಜಿ ಮುಖ್ಯ ಶಿಕ್ಷಕನಿಗೆ ಕಿವಿ ಹಿಂಡಿರುವ ಹೈಕೋರ್ಟ್‌, ಮಗನಿಗೆ ಮಾಸಿಕ ₹3 ಸಾವಿರ ಜೀವನಾಂಶ ಪಾವತಿಸುವಂತೆ ತಾಕೀತು ಮಾಡಿದೆ.

ಮಗನಿಗೆ ಜೀವನಾಂಶ ಪಾವತಿಸಲು ಒಪ್ಪದೆ ಮೊಂಡುವಾದ ಮಾಡಿದ್ದ ತುಮಕೂರು ಜಿಲ್ಲೆಯ ರಮೇಶ್‌ (48) ಎಂಬುವವರಿಗೆ ಹೈಕೋರ್ಟ್‌ ಈ ಆದೇಶ ಮಾಡಿದೆ.

ಮಗ ರಕ್ಷಿತ್‌ಗೆ ಮಾಸಿಕ ಮೂರು ಸಾವಿರ ರು. ಜೀವನಾಂಶ ಪಾವತಿಸುವಂತೆ 2018ರಲ್ಲಿ ನಿರ್ದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ಹೈಕೋರ್ಟ್‌ಗೆ ರಮೇಶ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್‌, ಡಿಎನ್‌ಎ ಪರೀಕ್ಷೆಯಲ್ಲಿ ರಕ್ಷಿತ್‌, ರಮೇಶ್‌ ಪುತ್ರ ಎಂಬುದು ಸಾಬೀತಾಗಿದೆ. ಹಾಗಾಗಿ, ಮಗನ ಜೀವನ ನಿರ್ವಹಣೆ ಮಾಡುವುದು ತಂದೆಯ ಜವಾಬ್ದಾರಿಯಾಗಿದೆ. ಎಲ್ಲ ಅಂಶ ಪರಿಗಣಿಸಿಯೇ ಮಗನಿಗೆ ಮಾಸಿಕ ಮೂರು ಸಾವಿರ ರು. ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯದ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸಲು ಸಕಾರಣವಿಲ್ಲ ಎಂದು ಆದೇಶಿಸಿದೆ.

ಇದನ್ನೂ ಓದಿ: High Court ಉಚಿತ ವಿದ್ಯುತ್‌ ಕೊಡಿ ಅಂತ ಯಾರು ಕೇಳಿದ್ರು?: ಹೈಕೋರ್ಟ್‌

ಅಲ್ಲದೆ, ರಕ್ಷಿತ್‌ ತಾಯಿ ಮೀನಾಕ್ಷಿ (ಎಲ್ಲ ಹೆಸರು ಬದಲಿಸಲಾಗಿದೆ) ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣದಲ್ಲಿ ಖುಲಾಸೆ ಆಗಿರುವುದರಿಂದ ರಕ್ಷಿತ್‌ಗೆ ಜೀವನಾಂಶ ಪಾವತಿಸುವ ಅಗತ್ಯವಿಲ್ಲ ಎಂದು ರಮೇಶ್‌ ಮಂಡಿಸಿದ್ದ ವಾದವನ್ನು ಇದೇ ವೇಳೆ ಹೈಕೋರ್ಟ್‌ ಸಾರಾಸಗಟಾಗಿ ತಿರಸ್ಕರಿಸಿದೆ.

ಕ್ರಿಮಿನಲ್ ಪ್ರಕರಣದಲ್ಲಿ ಖುಲಾಸೆಗೊಂಡ ಮಾತ್ರಕ್ಕೆ ರಮೇಶ್‌ನಿಂದ (ತಂದೆ) ಜೀವನಾಂಶ ಪಡೆಯುವ ಅರ್ಹತೆಯನ್ನು ಪುತ್ರ ರಕ್ಷಿತ್‌ನಿಂದ ನ್ಯಾಯಾಲಯ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ. ಜೊತೆಗೆ, ಕೌಟುಂಬಿಕ ನ್ಯಾಯಾಲಯ ಆದೇಶದಂತೆ ಪುತ್ರ ರಕ್ಷಿತ್‌ಗೆ ಮಾಸಿಕ ಮೂರು ಸಾವಿರ ರು. ಜೀವನಾಂಶ ಪಾವತಿಸುವಂತೆ ರಮೇಶ್‌ಗೆ ನಿರ್ದೇಶಿಸಿದೆ.

ಪ್ರಕರಣದ ವಿವರ:

ರಮೇಶ್‌ 2012ರ ಅ.21ರಂದು ಪೋಷಕರ ಮನೆಯಲ್ಲಿ ಒಂಟಿಯಾಗಿದ್ದ ಮೀನಾಕ್ಷಿ ಮೇಲೆ ಬಲತ್ಕಾರ ನಡೆಸಿದ್ದರು. ಸಂತ್ರಸ್ತೆಯಿಂದ ಘಟನೆ ಮಾಹಿತಿ ಪಡೆದ ಪೋಷಕರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು. ಆಗ ಸಂತ್ರಸ್ತೆ ಸಂಬಂಧಿಕರು ಮತ್ತು ಗ್ರಾಮದ ಹಿರಿಯರು ರಾಜೀ ಪಂಚಾಯತಿ ನಡೆಸಿದ್ದರು. ಆಗ ದೂರು ದಾಖಲಿಸುವುದು ಬೇಡ. ಮೀನಾಕ್ಷಿಯನ್ನು ಮದುವೆಯಾಗುವುದಾಗಿ ರಮೇಶ್‌ ಒಪ್ಪಿಕೊಂಡಿದ್ದರು. ಇದರಿಂದ ಪೊಲೀಸರಿಗೆ ದೂರು ನೀಡುವ ನಿರ್ಧಾರದಿಂದ ಮೀನಾಕ್ಷಿ ಮತ್ತು ಪೋಷಕರು ಹಿಂದೆ ಸರಿದಿದ್ದರು.

ತದ ನಂತರ ಮದವೆಯಾಗದಿದ್ದರೂ ಕೆಲ ಸಮಯ ಮೀನಾಕ್ಷಿಯೊಂದಿಗೆ ರಮೇಶ್ ಸಹ ಜೀವನ ಮುಂದುವರಿಸಿದ್ದರು. ಮದುವೆಯಾಗಲು ಒತ್ತಡ ಹೆಚ್ಚು ಮಾಡಿದಾಗ ಮದುವೆಯಾಗಲು ನಿರಾಕರಿಸಿದ್ದರು. ಇದರಿಂದ 2013ರ ಆ.8ರಂದು ಮೀನಾಕ್ಷಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ಎಲ್ಲ ಆರೋಪಗಳಿಂದ ರಮೇಶ್‌ ಅವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತ್ತು.

ನಂತರ ರಮೇಶ್‌ ಬೆಳೆಸಿದ್ದ ಸಂಬಂಧದಿಂದ ಮೀನಾಕ್ಷಿಗೆ 2015ರಲ್ಲಿ ಗಂಡು ಮಗು ಜನಿಸಿತ್ತು. 2016ರಲ್ಲಿ ಮಗನಿಗೆ ಜೀವನಾಂಶ ನೀಡಲು ರಮೇಶ್‌ಗೆ ನಿರ್ದೇಶಿಸುವಂತೆ ಕೋರಿ ಮಗನ (ರಕ್ಷಿತ್‌) ಹೆಸರಿನಲ್ಲಿಯೇ ಮೀನಾಕ್ಷಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ರಮೇಶ್‌ ಮುಖ್ಯೋಪಾಧ್ಯಾಯರಾಗಿದ್ದು, ಮಾಸಿಕ ₹30 ಸಾವಿರ ವೇತನ ಪಡೆಯುತ್ತಿದ್ದಾರೆ. ಮಗನ ನಿರ್ವಹಣೆಗೆ ಹಣಕಾಸು ತೊಂದರೆ ಎದುರಾಗಿದೆ ಎಂದು ಕಷ್ಟ ಹೇಳಿಕೊಂಡಿದ್ದರು.

ರಕ್ಷಿತ್‌ ಅರ್ಜಿ ವಿಚಾರಣೆ ನಡೆಸಿದ್ದ ತುಮಕೂರು ಪ್ರಧಾನ ಕೌಟುಂಬಿಕ ನ್ಯಾಯಾಲಯ, ಮಗನಿಗೆ ಮಾಸಿಕ 3 ಸಾವಿರ (ಅರ್ಜಿ ದಾಖಲಿಸಿದ ದಿನದಿಂದ) ಜೀವನಾಂಶ ನೀಡುವಂತೆ ರಮೇಶ್‌ಗೆ 2018ರ ಡಿ.10ರಂದು ಆದೇಶಿಸಿತ್ತು. ಈ ಮಧ್ಯೆ ಸೇವೆಯಿಂದ ವಜಾಗೊಂಡಿದ್ದ ರಮೇಶ್‌ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!