‘ಮನೆ-ಮನೆಗೆ ಗಂಗೆ’ ಯೋಜನೆಯಡಿ ಪ್ರತಿ ಗ್ರಾಮೀಣ ವ್ಯಕ್ತಿಗೆ ನಿತ್ಯ ಕನಿಷ್ಠ 55 ಲೀಟರ್ ನೀರು ಪೂರೈಕೆ: ಸಚಿವ ಕೆ.ಎಸ್.ಈಶ್ವರಪ್ಪ | ಎಲ್ಲ ಪಂಚಾಯಿತಿ ಕಟ್ಟಡಗಳಿಗೆ .4 ಲಕ್ಷ ವೆಚ್ಚದಡಿ ಸೋಲಾರ್ ಅಳವಡಿಕೆ | 6000 ಪಂಚಾಯಿತಿಗಳಿಗೆ .300 ಕೋಟಿ ವೆಚ್ಚ: ಅತೀಕ್
ಬೆಂಗಳೂರು(ಜ.09): ಪ್ರತಿ ವ್ಯಕ್ತಿಗೆ ಶುದ್ಧ ಕುಡಿಯುವ ನೀರು ಒದಗಿಸುವ ‘ಮನೆ-ಮನೆಗೆ ಗಂಗೆ’ ಯೋಜನೆಯಡಿ ಈ ವರ್ಷ ರಾಜ್ಯದ ಗ್ರಾಮೀಣ ಪ್ರದೇಶದ 23.57 ಲಕ್ಷ ಕುಟುಂಬಗಳಿಗೆ ನಳ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶುಕ್ರವಾರ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ‘ಜಲ ಜೀವನ ಮಿಷನ್’ ಯೋಜನೆಯನ್ನು ರಾಜ್ಯದಲ್ಲಿ ‘ಮನೆ-ಮನೆಗೆ ಗಂಗೆ’ ಹೆಸರಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ ಶುದ್ಧ ಕುಡಿಯುವ ನೀರು ಒದಗಿಸುವುದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ ಎಂದರು.
ಈ ನಿಟ್ಟಿನಲ್ಲಿ ರಾಜ್ಯದ ಗ್ರಾಮೀಣ ಭಾಗದ 91.19 ಲಕ್ಷ ಕುಟುಂಬಗಳಿಗೆ ನಳ ಸಂಪರ್ಕಿಸಲು ಯೋಜನೆ ರೂಪಿಸಲಾಗಿದ್ದು, ಈ ವರೆಗೆ 24.72 ಲಕ್ಷ ಕುಟುಂಬಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಉಳಿದ 66.47 ಲಕ್ಷ ಕುಟುಂಬಗಳಿಗೆ 2023ರೊಳಗೆ ನಳ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಗಡುವು ನೀಡಿದೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ 23.57 ಲಕ್ಷ ಕುಟುಂಬಗಳಿಗೆ ನಳ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. ಆದ್ಯತೆ ಮೇರೆಗೆ ನದಿ ಮೂಲಗಳು ಹಾಗೂ ಅಂತರ್ಜಲ ಉತ್ತಮವಾಗಿರುವ ಪ್ರದೇಶಗಳಲ್ಲಿ ನಳ ಸಂಪರ್ಕ ಕಲ್ಪಿಸುವುದಾಗಿ ಹೇಳಿದರು.
'ಹಕ್ಕಿ ಜ್ವರದಿಂದ ಕಾಗೆ, ವಲಸೆ ಹಕ್ಕಿಗಳು ಸತ್ತಿಲ್ಲ'
ಈ 23.57 ಲಕ್ಷ ಕುಟುಂಬಗಳಿಗೆ ನಳ ಸಂಪರ್ಕ ಕಲ್ಪಿಸುವ ಸಂಬಂಧ 10,470 ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಈ ಪೈಕಿ 8 ಸಾವಿರ ಕಾಮಗಾರಿಗಳಿಗೆ ಸಮಗ್ರ ಯೋಜನೆ ವರದಿ ಸಿದ್ಧಪಡಿಸಲಾಗಿದೆ. ಈ ಪೈಕಿ 5,500 ಟೆಂಡರ್ ಪ್ರಕ್ರಿಯೆ ಮುಗಿದಿದೆ. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ವಿಳಂಬವಾಗಿದ್ದ ಈ ಎಲ್ಲ ಕಾಮಗಾರಿಗಳಿಗೆ ಇದೀಗ ಚಾಲನೆ ನೀಡಲಾಗುವುದು. ಪ್ರತಿ ತಿಂಗಳು ಕನಿಷ್ಠ 5 ಲಕ್ಷ ಕುಟುಂಬಗಳಿಗೆ ನಳ ಸಂಪರ್ಕ ಕಲ್ಪಿಸುವ ಗುರಿ ಹಾಕಿಕೊಂಡಿದ್ದೇವೆ. ಕಾಲ ಮಿತಿಯೊಳಗೆ ಯೋಜನೆ ಅನುಷ್ಠಾನ ಹಾಗೂ ಗುರಿ ಸಾಧಿಸಲು ಜಿಲ್ಲಾವಾರು ಖಾಸಗಿ ಏಜೆನ್ಸಿಗಳ ನೆರವು ಪಡೆಯಲಾಗುತ್ತಿದೆ ಎಂದರು.
‘ಸ್ವಾಮಿತ್ವ’ದಡಿ ತೆರಿಗೆ ವ್ಯಾಪ್ತಿಗೆ:
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಾಕಷ್ಟುಕಟ್ಟಡಗಳು ತೆರಿಗೆ ವ್ಯಾಪ್ತಿಯಿಂದ ಹೊರಗಿವೆ. ಪ್ರಭಾವಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ವಂಚಿಸಿದ್ದು, ಇದಕ್ಕೆ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಈ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಇನ್ನು ಆರು ತಿಂಗಳಲ್ಲಿ ಈ ಸಮೀಕ್ಷೆ ಕಾರ್ಯ ಮುಗಿಯುವ ನಿರೀಕ್ಷೆಯಿದೆ. ಇದಕ್ಕಾಗಿಯೇ ರೂಪಿಸಲಾಗಿರುವ ‘ಸ್ವಾಮಿತ್ವ’ ಯೋಜನೆಯಡಿ ಈ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸುವುದಾಗಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಗ್ರಾ.ಪಂ. ಕಟ್ಟಡಗಳಿಗೆ ಸೋಲಾರ್:
ಪ್ರತಿ ಗ್ರಾಮ ಪಂಚಾಯಿತಿಗಳನ್ನು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿಸಲು ಹಾಗೂ ಆದಾಯ ಗಳಿಸುವಂತೆ ಮಾಡಲು ಸೋಲಾರ್ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ಒಂದು ಪಂಚಾಯಿತಿ ಕಟ್ಟಡಕ್ಕೆ ಸೋಲಾರ್ ಅಳವಡಿಸಲು ಸುಮಾರು 3-4 ಲಕ್ಷ ರು. ವೆಚ್ಚವಾಗಲಿದೆ. ಆರು ಸಾವಿರ ಪಂಚಾಯಿತಿಗಳಿಗೆ ಈ ಸೋಲಾರ್ ಅಳವಡಿಕೆಗೆ ಸುಮಾರು 300 ಕೋಟಿ ರು. ವೆಚ್ಚವಾಗಲಿದೆ ಎಂದು ಆರ್‌ಡಿಪಿಆರ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಹೇಳಿದರು.
ಗ್ರಾಪಂ ಸದಸ್ಯರಿಗೆ 5 ದಿನ ತರಬೇತಿ:
ರಾಜ್ಯದ 5,762 ಗ್ರಾಮ ಪಂಚಾಯಿತಿಗೆ ಚುನಾಯಿತರಾದ 92,121 ನೂತನ ಸದಸ್ಯರಿಗೆ ಇಲಾಖೆಯಿಂದ 27.16 ಕೋಟಿ ರು. ವೆಚ್ಚದಲ್ಲಿ ಐದು ದಿನಗಳ ಕಾಲ ತರಬೇತಿ ನೀಡಲಾಗುವುದು. ರಾಜ್ಯದ 176 ತಾಲೂಕುಗಳ 285 ತರಬೇತಿ ಕೇಂದ್ರಗಳಲ್ಲಿ ಜ.19ರಿಂದ ಮಾಚ್‌ರ್ 26ರವರೆಗೆ ತರಬೇತಿ ನಡೆಯಲಿದೆ. ತರಬೇತಿಗೆ 900 ಮಂದಿ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ಈ ತರಬೇತಿ ವೇಳೆ ಗ್ರಾಮ ಪಂಚಾಯಿತಿ ವ್ಯವಸ್ಥೆ, ಪಂಚಾಯಿತಿ ರಚನೆ, ಸದಸ್ಯರ ಜವಾಬ್ದಾರಿಗಳು, ಕರ್ತವ್ಯಗಳು, ಗ್ರಾಮಸಭೆ ಆಯೋಜನೆ ಸೇರಿದಂತೆ ಸ್ಥಳೀಯ ಆಡಳಿತದ ಬಗ್ಗೆ ಅರಿವು ಮೂಡಿಸುವುದಾಗಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.