ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿದ ರಾಜ್ಯ ಸರ್ಕಾರಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಎಲ್ಲ ಸಚಿವರು, ಶಾಸಕರುಗಳಿಗೆ ಅಭಿನಂದನೆ ತಿಳಿಸಿದ ಕರ್ನಾಟಕ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ
ಬೆಂಗಳೂರು(ಫೆ.16): ದಶಕಗಳ ಕನ್ನಡಿಗರ ಕನಸು ನನಸಾಗಿದೆ. ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯಗೊಳಿಸುವ ಕನ್ನಡ ವಿಧೇಯಕಕ್ಕೆ ರಾಜ್ಯದ ವಿಧಾನಸಭೆ ಅಂಗೀಕಾರ ನೀಡಿದ್ದು ಕನ್ನಡಿಗರ ಧ್ವನಿಗೆ ಶಕ್ತಿ ಬಂದಿದೆ ಎಂದು ಕರ್ನಾಟಕ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸಂತಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಈ ಕುರಿತು ಹೇಳಿಕೆ ನೀಡಿರುವ ಅವರು, ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿದ ರಾಜ್ಯ ಸರ್ಕಾರಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಎಲ್ಲ ಸಚಿವರು, ಶಾಸಕರುಗಳಿಗೆ ಅಭಿನಂದನೆ ತಿಳಿಸಿದ್ದಾರೆ.
ನಾಮಫಲಕಗಳಲ್ಲಿ 60% ಕನ್ನಡ ಕಡ್ಡಾಯಕ್ಕೆ ಮಸೂದೆ ಮಂಡನೆ
ದಶಕಗಳ ಕನ್ನಡಿಗರ ಹಕ್ಕೊತ್ತಾಯ ಈಡೇರಿಕೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಡಿ.27ರಂದು ಬೆಂಗಳೂರಿನಲ್ಲಿ ಐತಿಹಾಸಿಕ ಚಳವಳಿ ಸಂಘಟಿಸಿ, ಸಾವಿರಾರು ಅನ್ಯಭಾಷೆಗಳ ನಾಮಫಲಕಗಳನ್ನು ತೆರವುಗೊಳಿಸಿತ್ತು. ಕರ್ನಾಟಕದ ಇತಿಹಾಸದಲ್ಲಿ ಇದೊಂದು ಅಪರೂಪದ ದಿನವಾಗಿತ್ತು.
ಕರವೇ ಚಳವಳಿಯಿಂದಾಗಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿ, ನಾಮಫಲಕಗಳಲ್ಲಿ ಕನ್ನಡ ಅನುಷ್ಠಾನವನ್ನು ಮಾಡುವುದಾಗಿ ಘೋಷಿಸಿತ್ತು. ಆದರೆ ವಿಧಾನಮಂಡಲದಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆಯಲು ರಾಜ್ಯಪಾಲರು ಸೂಚಿಸಿದ್ದರಿಂದಾಗಿ ಸುಗ್ರೀವಾಜ್ಞೆ ಜಾರಿಯಾಗಿರಲಿಲ್ಲ. ಈಗ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಡಿ.27ರ ನಮ್ಮ ಚಳವಳಿಯ ಹಿನ್ನೆಲೆಯಲ್ಲಿ ನನ್ನ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ ಮೇಲೆ ಸರ್ಕಾರ ಹಲವಾರು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿಕೊಂಡು ನಮ್ಮನ್ನು ಜೈಲಿಗೆ ಕಳುಹಿಸಿತು. ಏನೇ ಕಷ್ಟ ಅನುಭವಿಸಿದರೂ ನಮ್ಮ ಹೋರಾಟ ಗುರಿ ಮುಟ್ಟಿದೆಯೆಂಬ ಸಂತಸ ನನ್ನದು. ಶುಕ್ರವಾರ ನಡೆದ ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಸರ್ಕಾರ, ಪೊಲೀಸ್ ಇಲಾಖೆ ನಮ್ಮನ್ನು ನಡೆಸಿಕೊಂಡ ರೀತಿಯ ಕುರಿತು ಮಾತನಾಡಿದ್ದಾರೆ. ಅವರಿಗೆ ವಿಶೇಷ ಕೃತಜ್ಞತೆಗಳನ್ನು ತಿಳಿಸುತ್ತೇನೆ. ಕನ್ನಡಕ್ಕಾಗಿ ಎಷ್ಟು ಬೇಕಾದರೂ ಮೊಕದ್ದಮೆಗಳನ್ನು ಎದುರಿಸಲು ನಾವು ತಯಾರಾಗಿದ್ದೇವೆ. ಅದರಲ್ಲಿ ಯಾವ ಹಿಂಜರಿಕೆಯೂ ನಮಗಿಲ್ಲ ಎಂದಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದಂತೆ ಫೆ.28ರೊಳಗೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯಗೊಳಿಸುವ ವಿಧೇಯಕವನ್ನು ಸಂಪೂರ್ಣ ಜಾರಿಗೆ ತರಬೇಕು. ಜೊತೆಗೆ ವಿಧೇಯಕದಲ್ಲಿ ಹೇಳಲಾದ ಎಲ್ಲ ಅಂಶಗಳನ್ನೂ ಜಾರಿಗೊಳಿಸಬೇಕು. ಯಾರ, ಯಾವ ರೀತಿಯ ಒತ್ತಡಕ್ಕೂ ಮಣಿಯಕೂಡದು ಎಂದು ಆಗ್ರಹಿಸಿದ್ದಾರೆ.