ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆ ಜೂನ್ 30ರೊಳಗೆ ಮುಗಿಸಿ: ಸುಪ್ರೀಂ ಕೋರ್ಟ್ ಖಡಕ್ ಆದೇಶ!

Published : Jan 12, 2026, 01:07 PM IST
GBA Election

ಸಾರಾಂಶ

ಸುಪ್ರೀಂ ಕೋರ್ಟ್, 'ಗ್ರೇಟರ್ ಬೆಂಗಳೂರು ಪ್ರಾಧಿಕಾರ'ದ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಕಟ್ಟುನಿಟ್ಟಿನ ಗಡುವು ನೀಡಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚುನಾವಣೆಗೆ ಕೋರ್ಟ್ ಆದೇಶ ಚಾಲನೆ ನೀಡಿದೆ.

ನವದೆಹಲಿ/ಬೆಂಗಳೂರು (ಜ.12): ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ನೂತನವಾಗಿ ರಚನೆಯಾಗಿರುವ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ'ದ (GBA) ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ನ ಸಿಜೆಐ ಪೀಠವು ರಾಜ್ಯ ಸರ್ಕಾರಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಮೀಸಲಾತಿ ಪ್ರಕ್ರಿಯೆ ಅಂತ್ಯದತ್ತ

ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ವಾರ್ಡ್‌ಗಳ ಮೀಸಲಾತಿ ಪ್ರಕ್ರಿಯೆಯು ಪ್ರಸ್ತುತ ಅಂತಿಮ ಹಂತದಲ್ಲಿದೆ ಎಂದು ಕೋರ್ಟ್‌ಗೆ ತಿಳಿಸಿದರು. ಫೆಬ್ರವರಿ 28ರೊಳಗೆ ಮೀಸಲಾತಿ ಪಟ್ಟಿಯು ಅಧಿಕೃತವಾಗಿ ಹೊರಬೀಳಲಿದ್ದು, ತದನಂತರ ಚುನಾವಣೆ ನಡೆಸುವ ಜವಾಬ್ದಾರಿ ಆಯೋಗಕ್ಕೆ ಇರಲಿದೆ ಎಂದು ಸ್ಪಷ್ಟಪಡಿಸಿದರು.

ಚುನಾವಣಾ ಆಯೋಗದ ವಾದ

ರಾಜ್ಯ ಚುನಾವಣಾ ಆಯೋಗವು ತನ್ನ ವಾದ ಮಂಡಿಸುತ್ತಾ, ಮಾರ್ಚ್ 16ರವರೆಗೆ ಮತದಾರರ ಪಟ್ಟಿಯ ಪರಿಶೀಲನೆ ನಡೆಯಲಿದೆ. ಇದಾದ ಬಳಿಕ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗಳು ನಡೆಯಲಿರುವುದರಿಂದ ಸಿಬ್ಬಂದಿ ಕೊರತೆ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಮೇ ಕೊನೆಯ ವಾರದವರೆಗೂ ಸಮಯಾವಕಾಶ ಬೇಕು ಎಂದು ಮನವಿ ಮಾಡಿತು. ಸಂಪೂರ್ಣ ಪ್ರಕ್ರಿಯೆ ಮುಗಿಸಲು ಜೂನ್ ವರೆಗೂ ಸಮಯ ಬೇಕಾಗಬಹುದು ಎಂದು ಆಯೋಗವು ಸುಪ್ರೀಂ ಕೋರ್ಟ್‌ಗೆ ವಿವರಿಸಿತು.

ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ

ಎಲ್ಲಾ ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಜೂನ್ 30ರ ಒಳಗೆ ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದೆ. ಅಲ್ಲದೆ, 'ಮತ್ತೆ ಸಮಯ ಕೇಳಿಕೊಂಡು ಬರಬೇಡಿ' ಎಂದು ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಾದ ಎಚ್ಚರಿಕೆಯನ್ನು ನೀಡಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ ಸುಪ್ರೀಂ ಕೋರ್ಟ್‌ನಲ್ಲಿ ಬಿಬಿಎಂಪಿ ಚುನಾವಣೆ ನಡೆಸುವಂತೆ ಕೆಲವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿರುವುದರಿಂದ ನಗರದ ಅಭಿವೃದ್ಧಿಗೆ ತಾಂತ್ರಿಕ ತೊಡಕು ಬರಬಾರದು ಎಂಬ ನೆಪವೊಡ್ಡಿ ಇದನ್ನು ದೊಡ್ಡ ಪ್ರಾಧಿಕಾರವನ್ನಾಗಿ ರಚಿಸಿ, 8 ಪಾಲಿಕೆಗಳನ್ನು ಮಾಡುವ ಪ್ರಸ್ತಾವನೆ ಮುಂದಿಟ್ಟಿತ್ತು. ಈ ಪ್ರಕ್ರಿಯೆ ಪೂರ್ಣ ಮಾಡುವ ಮೊದಲೇ ಅಧಿಕಾರ ಮುಗಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರವೂ ಚುನಾವಣೆ ನಡೆಸದೇ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಿ 5 ನಗರ ಪಾಲಿಕೆಗಳನ್ನು ರಚಿಸಿದ್ದು, ಚುನಾವಣೆಗೆ ಆಮೆಗತಿಯ ವೇಗದಲ್ಲಿ ಸಾಗುತ್ತಿತ್ತು. ಆದರೆ, ಸುಪ್ರೀಂ ಕೋರ್ಟ್ ವಿಳಂಬ ಮಾಡದಂತೆ ಅಂತಿಮ ಗಡುವು ಕೊಟ್ಟಿದೆ.

ಐದಾರು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದೇ ಜನರು ಪರದಾಟ

2019ರ ನಂತರ ಹಳೆಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅವಧಿಯ ಜನಪ್ರತಿನಿಧಿಗಳ ಅಧಿಕಾರ ಮುಕ್ತಾಯಗೊಂಡಿತ್ತು. ಆದರೆ, ವಾರ್ಡ್‌ಗಳ ಪುನರ್ವಿಂಗಡಣೆ, ಮೀಸಲಾತಿ ಪಟ್ಟಿ ಹಾಗೂ ಕೊರೊನಾ ಕಾರಣಗಳನ್ನು ನೀಡಿ ಈ ಹಿಂದಿನ ಬಿಜೆಪಿ ಮತ್ತು ಈಗಿನ ಕಾಂಗ್ರೆಸ್ ಸರ್ಕಾರಗಳು ಚುನಾವಣೆಯನ್ನು ಮುಂದೂಡುತ್ತಾ ಬಂದಿದ್ದವು. ಚುನಾಯಿತ ಪ್ರತಿನಿಧಿಗಳಿಲ್ಲದೆ ಅಧಿಕಾರಿಗಳ ಆಡಳಿತದಲ್ಲಿದ್ದ ಬೆಂಗಳೂರಿನ ಜನರು ತಮ್ಮ ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪರದಾಡುವಂತಾಗಿತ್ತು. ಚುನಾವಣೆ ನಡೆಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದರೆ, ವಿವಿಧ ತಾಂತ್ರಿಕ ಕಾರಣಗಳು ಹಾಗೂ ವಾರ್ಡ್‌ಗಳ ಪುನರ್ವಿಂಗಡಣೆಯ ನೆಪವೊಡ್ಡಿ ಚುನಾವಣೆಗಳನ್ನು ಮುಂದೂಡಲಾಗಿತ್ತು. ಆದರೆ, ಇದೀಗ ಸುಪ್ರೀಂ ಕೋರ್ಟ್ ಆದೇಶ ಹೊಸ ಚೈತನ್ಯ ನೀಡಿದೆ.

ಇತ್ತೀಚೆಗೆ ರಾಜ್ಯ ಸರ್ಕಾರವು ಬಿಬಿಎಂಪಿಯನ್ನು 'ಗ್ರೇಟರ್ ಬೆಂಗಳೂರು ಪ್ರಾಧಿಕಾರ'ವಾಗಿ (GBA) ಮೇಲ್ದರ್ಜೆಗೇರಿಸಿತ್ತು. ಈ ಹೊಸ ವ್ಯವಸ್ಥೆಯಲ್ಲಿ ಬೆಂಗಳೂರಿನ ಸುತ್ತಮುತ್ತಲ ಕೆಲವು ಹಳ್ಳಿಗಳನ್ನು ಸೇರ್ಪಡೆಗೊಳಿಸಿ ನಗರದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಜಿಬಿಎನಲ್ಲಿ ಒಟ್ಟು 369 ವಾರ್ಡ್‌ಗಳನ್ನು ರಚಿಸಲಾಗಿದೆ. ಈಗಾಗಲೇ ಸರ್ಕಾರವು ವಾರ್ಡ್‌ಗಳ ಸಂಖ್ಯೆ ಹಾಗೂ ವಾರ್ಡ್‌ವಾರು ಮೀಸಲಾತಿ ಕರಡು ಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಕ್ಷಿಣ ಸುಡಾನ್‌ನಲ್ಲಿ ಸೇವೆ: ಬೆಂಗಳೂರು ಮೂಲದ ಮೇಜರ್ ಸ್ವಾತಿಗೆ ವಿಶ್ವಸಂಸ್ಥೆ ಗೌರವ
ಲೈಸನ್ಸ್‌ ಇಲ್ಲದ ಚಾಲಕ ನೇಮಿಸಿದರೆ ಮಾಲೀಕರಿಗೆ ಸಂಕಷ್ಟ; ನ್ಯಾಯಾಲಯದಿಂದ ಮಹತ್ವದ ತೀರ್ಪು