
ಬೆಂಗಳೂರು: ಹಣದಾಸೆಗೆ ಬಿದ್ದು ಕಾನೂನು ಬಾಹಿರವಾಗಿ ಕೈದಿಗಳಿಗೆ ಮೊಬೈಲ್ ಪೂರೈಸುತ್ತಿದ್ದ ಸಂಬಂಧ ಮತ್ತಿಬ್ಬರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸಿಬ್ಬಂದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಾರಾಗೃಹದ ಮುಖ್ಯ ವೀಕ್ಷಕ ವಿಜಯ್ ಕುಮಾರ್ ಹಾಗೂ ವೀಕ್ಷಕ ಶ್ರೀನಿವಾಸ್ ನಾಯ್ಕ ಬಂಧಿತರು. ಹಣದಾಸೆಗೆ ಕೈದಿಗಳಿಗೆ ಬೇನಾಮಿ ಹೆಸರಿನಲ್ಲಿ ಮೊಬೈಲ್ ಖರೀದಿಸಿ ಆರೋಪಿಗಳು ಮಾರುತ್ತಿದ್ದರು. ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರತ್ಯೇಕವಾಗಿ 2 ಎಫ್‌ಐಆರ್‌ಗಳು ದಾಖಲಾಗಿದ್ದವು. ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎಸಿಪಿ ಸತೀಶ್ ನೇತೃತ್ವದ ತಂಡವು ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದೆ.
ಕಳೆದ ಜನವರಿಯಲ್ಲಿ ಕೇಂದ್ರ ಕಾರಾಗೃಹದಲ್ಲಿ 4 ಮೊಬೈಲ್‌ಗಳು, 2 ಸಿಮ್ ಕಾರ್ಡ್‌ಗಳು, 1 ಚಾರ್ಜರ್ ಪತ್ತೆಯಾಗಿದ್ದವು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಆ ಮೊಬೈಲ್ ಸಂಖ್ಯೆಗಳು ಯಾವ ಫೋನ್‌ಗಳಲ್ಲಿ ಬಳಕೆಯಾಗಿವೆ ಎಂಬುದರ ಬಗ್ಗೆ ಸಿಐಐಆರ್ ಪೋರ್ಟಲ್ ಮೂಲಕ ತಾಂತ್ರಿಕ ಮಾಹಿತಿ ಕಲೆ ಹಾಕಿದರು. ಆಗ ಜೈಲಿನಲ್ಲಿ ಸಿಕ್ಕಿದ ಸಿಮ್‌ಗಳು ಕಾರಾಗೃಹ ವಾರ್ಡನ್ ಶ್ರೀನಿವಾಸ್ ನಾಯ್ಕ್‌ಗೆ ಸೇರಿದ 2 ಮೊಬೈಲ್‌ಗಳಲ್ಲಿ ಬಳಕೆಯಾಗಿರುವ ಸಂಗತಿ ಗೊತ್ತಾಯಿತು. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಬೇನಾಮಿ ಹೆಸರಿನಲ್ಲಿ ಮೊಬೈಲ್ ಖರೀದಿ ಭಾನಗಡಿ ಬಯಲಾಯಿತು.
‘ರಾಹುಲ್’ ಎಂಬ ಅಪರಿಚಿತ ಹೆಸರಿನಲ್ಲಿ ಒಟ್ಟು 12 ಮೊಬೈಲ್‌ಗಳನ್ನು ಶ್ರೀನಿವಾಸ್ ಖರೀದಿಸಿದ್ದರು. ಬಳಿಕ ಅವುಗಳಲ್ಲಿ 2 ಮೊಬೈಲ್‌ಗಳನ್ನು ಕೈದಿಗೆ ಪೂರೈಕೆ ಮಾಡಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಕಾರಾಗೃಹದಲ್ಲಿ ಮತ್ತೆ ಮೇನಲ್ಲಿ ಒಂದು ಮೊಬೈಲ್ ಹಾಗೂ ಸಿಮ್ ಪತ್ತೆಯಾಗಿದ್ದವು. ಆ ಸಿಮ್ ಆಧಾರದ ಮೇರೆಗೆ ತನಿಖೆಗಿಳಿದ ಪೊಲೀಸರು, ಸಿಮ್ ಮಾರಾಟದ ಬಗ್ಗೆ ಮಾಹಿತಿ ಕಲೆ ಹಾಕಿದರು.
ಆಗ ಆಂಧ್ರದ ಎಜೆನ್ಸಿವೊಂದಕ್ಕೆ ಮಾಡಲಾಗಿತ್ತು ಎಂದು ಕಂಪನಿ ತಿಳಿಸಿತು. ಈ ಸುಳಿವು ಆಧರಿಸಿ ಮತ್ತಷ್ಟು ಶೋಧಿಸಿದಾಗ ಮೊಬೈಲ್ ಮಾರಾಟದ ಪೂರ್ಣ ವಿವರ ಲಭಿಸಿತು. ಈ ಮಾಹಿತಿ ಬೆನ್ನತ್ತಿದ್ದಾಗ ಮೊಬೈಲ್ ಖರೀದಿಸಿದ್ದ ಭರತ್ ಅಲಿಯಾಸ್ ಭುವನ್ ಸಿಕ್ಕಿಬಿದ್ದ. ಆತನ ಹೇಳಿಕೆ ಮೇರೆಗೆ ಮುಖ್ಯ ವೀಕ್ಷಕ ವಿಜಯ್ ಸೆರೆಯಾಗಿದ್ದಾನೆ.
ಇದನ್ನೂ ಓದಿ: ಪವಿತ್ರ ಗೌಡ ಸ್ಥಳಾಂತರ, ದರ್ಶನ್‌ಗೂ ಬಿಗಿ ಹಿಡಿದ ಜೈಲು ಅಧಿಕಾರಿಗಳು' ಇಷ್ಟಕ್ಕೆಲ್ಲ ಕಾರಣ ಪ್ರಜ್ವಲ್ ರೇವಣ್ಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ