
ಬೆಂಗಳೂರು(ಸೆ.25): ಮುಂಗಾರು ಅಂತ್ಯದಲ್ಲಿ ರಾಜ್ಯದ ಕೆಲವೆಡೆ ಮಳೆಯಾಗುತ್ತಿದ್ದು, ಸಿಡಿಲಬ್ಬರದ ಮಳೆಗೆ ಗುರುವಾರ ಮೂವರು ಮೃತಪಟ್ಟಿದ್ದಾರೆ. 7 ಮಂದಿ ಗಾಯಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಐಹೊಳೆಯಲ್ಲಿ ಹೊಲದಲ್ಲಿ ಸೂರ್ಯಕಾಂತಿಯ ರಾಶಿ ಮಾಡಲು ಹೋದಾಗ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಆರು ಜನ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಾಟಾಪುರದ ಭರಮಪ್ಪ ಯಲ್ಲಪ್ಪ ಖಂಡೇಕರ (25) ಹಾಗೂ ಐಹೊಳೆಯ ರಾಮವ್ವ ದ್ಯಾಮಪ್ಪ ಹೊಳಗಿ (65) ಎಂದು ಗುರುತಿಸಲಾಗಿದೆ. ಈ ಮಧ್ಯೆ, ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸುಲ್ತಾನಪುರು ಗ್ರಾಮದ ತೆಗ್ಗಿನ ಕ್ಯಾಂಪ್ ನಲ್ಲಿ ಜಮೀನಿನಲ್ಲಿ ಜೋಳ ಬಿತ್ತನೆ ಮಾಡುವಾಗ ಸಿಡಿಲು ಬಡಿದು ದ್ವಾವಣ್ಣ (35 ) ಎಂಬುವರು ಮೃತಪಟ್ಟಿದ್ದಾರೆ.
ಅಯ್ಯಪ್ಪ ಯಮನಪ್ಪ ಭೋವಿ (50) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಗುರುವಾರ ಮಧ್ಯಾಹ್ನದ ವೇಳೆ ಸಾಧಾರಣ ಮಳೆಯಾಗಿದೆ.
ಕೆಲವು ದಿನಗಳ ಬಳಿಕ ದ.ಕ. ಜಿಲ್ಲೆಯಲ್ಲಿ ಗುರುವಾರ ಮಳೆ ಕಾಣಿಸಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಸೆ.26ರ ತನಕ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯ ಸಾಧ್ಯತೆಗಳಿದ್ದು, ಸೆ. 29ರಿಂದ ಗುಡುಗು ಸಹಿತ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಮಂಗಳೂರು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬೆಳಗ್ಗೆ ತುಸು ಬಿಸಿಲು, ಮೋಡ, ಮಧ್ಯಾಹ್ನ ವೇಳೆಗೆ ಸಾಧಾರಣ ಮಳೆ, ಸಂಜೆ ಮತ್ತೆ ಮೋಡ, ತಂಪಗಿನ ವಾತಾವರಣ ಕಂಡುಬಂದಿದೆ. ಕಳೆದ ಒಂದೆರಡು ವಾರದಿಂದ ಜಿಲ್ಲೆಯ ವಾತಾವರಣ ಬಿಸಿಯಾಗಿದ್ದು, ಗರಿಷ್ಠ 33.7 ಡಿ.ಸೆ. ವರೆಗೂ ಉಷ್ಣಾಂಶ ತಲುಪಿತ್ತು. ಗುರುವಾರ ಅಲ್ಲಲ್ಲಿ ಮಳೆಯಾಗಿದ್ದರಿಂದ ಗರಿಷ್ಟ ತಾಪಮಾನ 30.1ಡಿ.ಸೆ, ಕನಿಷ್ಠ ತಾಪಮಾನ 23.4 ಡಿ.ಸೆ ದಾಖಲಾಗಿದೆ.
ಬಂಗಾಲಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ಪ್ರಭಾವದಿಂದಾಗಿ ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿನ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಇದರ ಪರಿಣಾಮವಾಗಿ ಕರಾವಳಿ ಸೇರಿದಂತಂತೆ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಳೆದ ಕೆಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನರಿಗೆ ತಂಪಾದ ವಾತಾವರಣದ ಅನುಭವವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ