
ಬೆಂಗಳೂರು (ಫೆ.15): ಕನ್ನಡ ಚಿತ್ರ ರಂಗದ ಮೇರು ನಟ ದಿ.ಡಾ.ವಿಷ್ಣುವರ್ಧನ್ ಅವರ ಪೋಸ್ಟ್ ಮುಂದೆ ‘ರೀಲ್ಸ್’ ಹುಚ್ಚಿಗೆ ಅಪಹಾಸ್ಯ ಮಾಡಿದ್ದ ತಪ್ಪಿಗೆ ಪೊಲೀಸರ ಮುಂದೆ ಖಾಸಗಿ ಕಾಲೇಜಿನ ನಾಲ್ವರು ಪಿಯುಸಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕ್ಷಮೆ ಕೋರುವ ಮೂಲಕ ವಿವಾದ ಪರ್ಯಾವಸಗೊಂಡ ಘಟನೆ ಶನಿವಾರ ನಡೆದಿದೆ.
ಜೆ.ಪಿ. ನಗರ ಹತ್ತಿರದ ಸೆಂಟ್ರಲ್ ಮಾಲ್ ಬಳಿಕ ಹಾಕಲಾಗಿದ್ದ ವಿಷ್ಣುವರ್ಧನ್ ಅವರ ಪೋಸ್ಟರ್ ಮುಂದೆ ನಿಂತು ಸಿಹಿ ತಿನ್ನಿಸುವಂತೆ ನಟಿಸಿ ವಿದ್ಯಾರ್ಥಿಗಳು ಅಪಹಾಸ್ಯ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ವೈರಲ್ ಆಗಿತ್ತು. ಈ ವಿಡಿಯೋ ವಿರುದ್ಧ ಕೆರಳಿದ ವಿಷ್ಣುವರ್ಧನ್ ಅಭಿಮಾನಿಗಳು, ಕಿಡಿಗೇಡಿಗಳ ಪತ್ತೆಗೆ ಜೆ.ಪಿ.ನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ವಿಡಿಯೋ ಆಧರಿಸಿ ತನಿಖೆಗಿಳಿದ ಪೊಲೀಸರು, ಅದರಲ್ಲಿನ ದೃಶ್ಯಾವಳಿಯಲ್ಲಿದ್ದ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಅಂತೆಯೇ ಶನಿವಾರ ಜೆ.ಪಿ. ನಗರ ಠಾಣೆಗೆ ಪೋಷಕರ ಜತೆ ವಿದ್ಯಾರ್ಥಿಗಳು ಹಾಜರಾಗಿದ್ದರು. ಕೊನೆಗೆ ತಾವು ತಿಳಿಯದೆ ತಪ್ಪು ಮಾಡಿದ್ದೇವೆ. ನಮಗೂ ಕನ್ನಡ ಭಾಷೆ ಹಾಗೂ ಕಲಾವಿದರ ಮೇಲೆ ಅಭಿಮಾನವಿದೆ. ತಮ್ಮ ಮಕ್ಕಳನ್ನು ಕ್ಷಮಿಸುವಂತೆ ಪೋಷಕರು ಮನವಿ ಮಾಡಿದರು. ಈ ಕೋರಿಕೆಗೆ ಪೊಲೀಸರು ಹಾಗೂ ವಿಷ್ಣುವರ್ಧನ್ ಅಭಿಮಾನಿಗಳು ಸಮ್ಮತಿಸಿದ್ದಾರೆ. ಕೊನೆಗೆ ಈ ರೀತಿ ತಪ್ಪು ಮಾಡುವುದಿಲ್ಲ ಎಂದು ಕ್ಷಮಾಪಣೆ ಬರೆಸಿಕೊಂಡು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಪೊಲೀಸರು ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ