ಕೋವಿಡ್‌ ಹೆಚ್ಚಿರುವ 7 ಜಿಲ್ಲೆಗಳಲ್ಲಿ ಸಂಪರ್ಕಿತರ ಪತ್ತೆ ತೀವ್ರಕ್ಕೆ ಆದೇಶ

Kannadaprabha News   | Asianet News
Published : Aug 17, 2021, 07:07 AM IST
ಕೋವಿಡ್‌ ಹೆಚ್ಚಿರುವ 7 ಜಿಲ್ಲೆಗಳಲ್ಲಿ ಸಂಪರ್ಕಿತರ ಪತ್ತೆ ತೀವ್ರಕ್ಕೆ ಆದೇಶ

ಸಾರಾಂಶ

ರಾಜ್ಯದಲ್ಲಿ ಅಕ್ಟೋಬರ್‌-ನವೆಂಬರ್‌ ತಿಂಗಳಲ್ಲಿ ಕೊರೋನಾ ಮೂರನೇ ಅಲೆ ಎದುರಾಗುವ ಸಾಧ್ಯತೆ ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲೇ ಕೊರೋನಾ ನಿಯಂತ್ರಣಕ್ಕಾಗಿ ‘ಜಿಲ್ಲಾ ತಾಂತ್ರಿಕ ತಜ್ಞರ ಸಮಿತಿ’

 ಬೆಂಗಳೂರು (ಆ.17):  ರಾಜ್ಯದಲ್ಲಿ ಅಕ್ಟೋಬರ್‌-ನವೆಂಬರ್‌ ತಿಂಗಳಲ್ಲಿ ಕೊರೋನಾ ಮೂರನೇ ಅಲೆ ಎದುರಾಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲೇ ಕೊರೋನಾ ನಿಯಂತ್ರಣಕ್ಕಾಗಿ ‘ಜಿಲ್ಲಾ ತಾಂತ್ರಿಕ ತಜ್ಞರ ಸಮಿತಿ’ (ಟಿಇಸಿ) ರಚನೆ ಮಾಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಜತೆಗೆ, ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ದಕ್ಷಿಣ ಕನ್ನಡ, ಉಡುಪಿ, ಹಾಸನ, ಮೈಸೂರು, ಕೊಡಗು, ಚಿಕ್ಕಮಗಳೂರು ಹಾಗೂ ಚಾಮರಾಜನಗರದಲ್ಲಿ ಸೋಂಕಿತರ ಸಂಪರ್ಕಿತರ ಪತ್ತೆಗೆ ವಿಶೇಷ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ಈ ಜಿಲ್ಲೆಗಳಲ್ಲಿ ಪ್ರತಿ ಸೋಂಕಿತರ ಕನಿಷ್ಠ 20 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆ ಹಚ್ಚಿ ಪರೀಕ್ಷೆಗೊಳಪಡಿಸುವಂತೆ ಸೂಚಿಸಲಾಗಿದೆ.

ಟಿಇಸಿ ಸಮಿತಿಯಲ್ಲಿ ಯಾರಿರಬೇಕು?:

ಸಾರ್ವಜನಿಕ ಆರೋಗ್ಯ ವಿಭಾಗದ ಹಿರಿಯ ತಜ್ಞ ವೈದ್ಯರು, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ, ಹಿರಿಯ ಶ್ವಾಸಕೋಶ ತಜ್ಞ, ತೀವ್ರ ನಿಗಾ ತಜ್ಞ, ಮಕ್ಕಳ ವೈದ್ಯರು, ಮೈಕ್ರೋಬಯೋಲಜಿಸ್ಟ್‌, ಹಿರಿಯ ಆಯುಷ್‌ ವೈದ್ಯರು ಸದಸ್ಯರಾಗಿರಬೇಕು. ಜತೆಗೆ ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಆರೋಗ್ಯಾಧಿಕಾರಿಗಳು ವಿಶೇಷ ಆಹ್ವಾನಿರಾಗಿ ಇರಬೇಕು ಎಂದು ತಿಳಿಸಲಾಗಿದೆ.

ಕರ್ನಾಟಕದ 11 ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ರೇಟ್‌ ಹೆಚ್ಚಳ

ಸಮಿತಿಯು ಕನಿಷ್ಠ ಪ್ರತಿ 15 ದಿನಗಳಿಗೊಮ್ಮೆ ಸಭೆ ಸೇರಬೇಕು. ಅಗತ್ಯ ಬಿದ್ದರೆ ಇನ್ನೂ ತ್ವರಿತಗತಿಯಲ್ಲಿ ಸಭೆಗಳನ್ನು ಸೇರಬೇಕು. ಸಭೆಯ ನಡಾವಳಿ ಹಾಗೂ ಜಿಲ್ಲಾ ಮಟ್ಟದ ಬೆಳವಣಿಗೆಗಳ ಬಗ್ಗೆ ಸಮಿತಿಯು ಕೂಡಲೇ ಮಾಹಿತಿಯನ್ನು ಆರೋಗ್ಯ ಇಲಾಖೆ ಆಯುಕ್ತರು ಹಾಗೂ ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿಗೆ ಕಳುಹಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

7 ಜಿಲ್ಲೆಗಳಲ್ಲಿ ಸಂಪರ್ಕಿತರ ಪತ್ತೆಗೆ ಆದೇಶ:

ದಕ್ಷಿಣ ಕನ್ನಡ, ಉಡುಪಿ, ಹಾಸನ, ಮೈಸೂರು, ಕೊಡಗು, ಚಿಕ್ಕಮಗಳೂರು ಹಾಗೂ ಚಾಮರಾಜನಗರದಲ್ಲಿ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.3-4ರಷ್ಟಿದೆ. ಈ ಹಿನ್ನೆಲೆ ಆ ಜಿಲ್ಲೆಗಳಲ್ಲಿ ಸೋಂಕು ಪರೀಕ್ಷೆಗಳನ್ನು ಗಣನೀಯವಾಗಿ ಹೆಚ್ಚಿಸಲು ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸೋಂಕು ದೃಢಪಟ್ಟವ್ಯಕ್ತಿಯ ಸಂಪರ್ಕ ಹೊಂದಿರುವ ತಲಾ 20 ಮಂದಿಯನ್ನು ಕಡ್ಡಾಯವಾಗಿ ಸೋಂಕು ಪರೀಕ್ಷೆಗೊಳಪಡಿಸಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕಚಂದ್ರ ಆದೇಶದಲ್ಲಿ ತಿಳಿಸಿದ್ದಾರೆ.

ಅಗತ್ಯ ವ್ಯವಸ್ಥೆಗೆ ಸೂಚನೆ:

ಶೇ.2ಕ್ಕಿಂತ ಅಧಿಕ ಪಾಸಿಟಿವಿಟಿ ದರ ಹೊಂದಿರುವ ಜಿಲ್ಲೆಗಳು ಅಲ್ಲಿನ ಸೋಂಕಿತರ ಆಸ್ಪತ್ರೆ ದಾಖಲಾತಿಗೆ ಅನುಗುಣವಾಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌, ಐಸಿಯು ಹಾಸಿಗೆಗಳನ್ನು ವ್ಯವಸ್ಥೆ ಮಾಡಿಕೊಳ್ಳಬೇಕು. ಪ್ರತಿ ವಾರ ಜಿಲ್ಲಾ ಮಟ್ಟದ ಕೊರೋನಾ ತಾಂತ್ರಿಕ ತಜ್ಞರ ಸಮಿತಿ ಸದಸ್ಯರ ಸಭೆಯನ್ನು ಕಡ್ಡಾಯವಾಗಿ ನಡೆಸಿ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಲಾಗಿದೆ.

ಜಿಲ್ಲಾ ಮಟ್ಟದ ಟಿಇಸಿ ರಚನೆ:

ರಾಜ್ಯ ಮಟ್ಟದಲ್ಲಿ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಇರುವಂತೆ ಜಿಲ್ಲೆಯ ಮಟ್ಟದಲ್ಲಿ ತಾಂತ್ರಿಕ ತಜ್ಞರ ಸಮಿತಿ (ಟಿಇಸಿ) ರಚನೆ ಮಾಡಬೇಕು. ಜಿಲ್ಲಾ ಮಟ್ಟದ ತಜ್ಞರ ಸಮಿತಿಯು ಕೇಂದ್ರ ಸರ್ಕಾರ, ಐಸಿಎಂಆರ್‌, ಏಮ್ಸ್‌, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರೆ ಸಂಸ್ಥೆಗಳ ಮಾರ್ಗಸೂಚಿಗಳ ಮೇಲೆ ನಿರಂತರವಾಗಿ ನಿಗಾ ವಹಿಸಿ, ಸ್ಥಳೀಯವಾಗಿ ಕೊರೋನಾ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳ ಬಗ್ಗೆ ಜಿಲ್ಲಾಡಳಿತಕ್ಕೆ ಸಲಹೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜಿಲ್ಲಾ ಟಿಇಸಿ ಸಮಿತಿಯು ನಿರಂತರವಾಗಿ ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಜತೆ ಸಂಪರ್ಕದಲ್ಲಿದ್ದು ಅದರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಬೇಕು. ಜಿಲ್ಲಾ ಮಟ್ಟದ ಅಂಕಿ-ಅಂಶಗಳನ್ನು ಇತರೆ ಜಿಲ್ಲೆ ಹಾಗೂ ರಾಜ್ಯ ಸರಾಸರಿಯೊಂದಿಗೆ ತಾಳೆ ನೋಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇದರ ಆಧಾರದ ಮೇಲೆ ಜಿಲ್ಲಾಡಳಿತಕ್ಕೆ ಸೂಕ್ತ ಕ್ರಮಗಳಿಗಾಗಿ ಸಲಹೆ ನೀಡಬಹುದು ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!