ಚುನಾವಣಾ ನಿವೃತ್ತಿ ಮಾತು ನಿಲ್ಲಿಸಿ: ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಕಿವಿಮಾತು

Published : Sep 12, 2026, 07:11 AM IST
Rahul Gandhi Siddaramaiah

ಸಾರಾಂಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದು, ಈ ವೇಳೆ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡದಂತೆ ರಾಹುಲ್ ಕಿವಿಮಾತು ಹೇಳಿದ್ದಾರೆ. ಈ ಭೇಟಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿ ನೇಮಕಾತಿಗಳಂತಹ ಪ್ರಮುಖ ರಾಜಕೀಯ ವಿಷಯಗಳ ಬಗ್ಗೆಯೂ ಚರ್ಚೆ ನಡೆದಿದೆ.

ನವದೆಹಲಿ: ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡದಂತೆ ಕಾಂಗ್ರೆಸ್‌ ವರಿಷ್ಠ ರಾಹುಲ್ ಗಾಂಧಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಶುಕ್ರವಾರ ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದರು.

ಶುಕ್ರವಾರ ಬೆಳಗ್ಗೆ 11ಕ್ಕೆ ರಾಹುಲ್ ಗಾಂಧಿ ಅವರನ್ನು ಸಿದ್ದರಾಮಯ್ಯ ಅವರು 10 ಜನಪಥ್‌ ನಿವಾಸದಲ್ಲಿ ಭೇಟಿ ಆದರು. ಇಬ್ಬರೂ ನಾಯಕರು ಅರ್ಧ ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದರು. ಈ ವೇಳೆ ರಾಹುಲ್‌ ಗಾಂಧಿ ಅವರು, ‘ಸಿದ್ದರಾಮಯ್ಯ ಜೀ, ಪದೇ ಪದೇ ನಿವೃತ್ತಿಯ ಮಾತಾಡಬೇಡಿ. ನಿಮ್ಮ ಸೇವೆ, ನಾಯಕತ್ವ ಪಕ್ಷಕ್ಕೆ ಬೇಕು’ ಎಂದು ಕಿವಿಮಾತು ಹೇಳಿದರು.

ರಾಹುಲ್ ಗಾಂಧಿ ಜೊತೆ ಏನೆಲ್ಲಾ ಚರ್ಚೆ? 

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ವಯಸ್ಸಿನ ಹಿನ್ನೆಲೆಯಲ್ಲಿ ನಾನು ಈ ಮಾತು ಹೇಳಿದ್ದೆ ಎಂದು ಸಮಜಾಯಿಷಿ ನೀಡಿದರು ಎಂದು ಮೂಲಗಳು ತಿಳಿಸಿವೆ. ಆದರೆ ಭೇಟಿಯ ವೇಳೆ ನಡೆದ ಮಾತುಕತೆಯನ್ನು ಬಹಿರಂಗಪಡಿಸಲು ಸಿದ್ದರಾಮಯ್ಯ ಅವರು ನಿರಾಕರಿಸಿದ್ದಾರೆ.

ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿ ಅಧ್ಯಕ್ಷರ ಬದಲಾವಣೆ, ವಿಧಾನ ಪರಿಷತ್‌ ಖಾಲಿ ಸ್ಥಾನಗಳ ಭರ್ತಿ, ಜಾತಿ ಜನಗಣತಿ ಜಾರಿ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಗೆ ಬಂದಿದ್ದಾಗ ಭೇಟಿಗೆ ಸಮಯ ಕೇಳಿದ್ದೆ. ಅದರಂತೆ ಸಮಯ ನೀಡಿದ್ದಾರೆ. ಕೇವಲ ಉಭಯ ಕುಶಲೋಪರಿ ಅಷ್ಟೇ. ಭೇಟಿ ಕುತೂಹಲ ಏನೂ ಇಲ್ಲ ಎಂದು ಹೇಳಿದರು.

ಮಧ್ಯಾಹ್ನ 2 ಗಂಟೆಗೆ ಕೆ.ಸಿ.ವೇಣುಗೋಪಾಲ್‌ ಅವರನ್ನು ಲೋಧಿ ಎಸ್ಟೇಟ್ ನಿವಾಸದಲ್ಲಿ ಸಿದ್ದರಾಮಯ್ಯ ಭೇಟಿ ಆಗಿ ಮಾತುಕತೆ ನಡೆಸಿದರು. ಸಚಿವ ಸಂಪುಟ ವಿಸ್ತರಣೆ, ನಿಗಮ- ಮಂಡಳಿಗೆ ಹೊಸ ಅಧ್ಯಕ್ಷರ ನೇಮಕ ಕುರಿತು ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ರಾಹುಲ್ ಗಾಂಧಿ ಭೇಟಿ ಮಾಡಿದ್ದೇನೆ ಅಷ್ಟೇ. ಭೇಟಿಯ ವೇಳೆ ಏನು ಚರ್ಚೆ ನಡೆಯಿತು ಎಂದು ಹೇಳಲು ಸಾಧ್ಯ ಇಲ್ಲ ಎಂದು ಸ್ಪಷ್ಟವಾಗಿ ಮಾಹಿತಿ ನೀಡಲು ನಿರಾಕರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರಜ್ವಲ್ ಸೆಲ್‌ನಲ್ಲಿದ್ದ ಪೆನ್‌ಡ್ರೈವ್‌ನಲ್ಲಿ 100 ಅಶ್ಲೀಲ ವಿಡಿಯೋ ಪತ್ತೆ; ಟಿವಿಯಲ್ಲಿ ವೀಕ್ಷಣೆ
ಆಫ್ರಿಕಾದ ಚಿನ್ನದ ಗಣಿ ಕಂಪನಿಯಲ್ಲಿ 40% ಪಾಲು; 3.3 ಕೋಟಿ ನಗದು, 15 ಲಕ್ಷ ವಿದೇಶಿ ಕರೆನ್ಸಿ ಪತ್ತೆ