
ಬೆಂಗಳೂರು(ಜು.12): ರಾಜ್ಯದ ಕೆಲವೆಡೆಗಳಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆ ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಮತ್ತು ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮತ್ತಷ್ಟು ತೀವ್ರವಾಗಿರುವುದರಿಂದ ಅಲ್ಲಲ್ಲಿ ಭೂಕುಸಿತ, ಪ್ರವಾಹ ಭೀತಿ ಎದುರಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಗಳಲ್ಲೂ ಮಳೆ ಅಬ್ಬರ ಮುಂದುವರಿದಿರುವುದರಿಂದ ಕೃಷ್ಣಾ ಮತ್ತದರ ಉಪನದಿಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು ನದಿ ತೀರ ಪ್ರದೇಶಗಳಲ್ಲಿನ ಹೊಲಗದ್ದೆಗಳು ಸಂಪೂರ್ಣ ಜಲಾವೃತವಾಗಿವೆ. ಹಾಸನ ಜಿಲ್ಲೆಯ 4 ತಾಲೂಕುಗಳಲ್ಲಿ ಮಳೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನೆರೆ ಕಾಟದ ಜತೆ ಗುಡ್ಡ ಕುಸಿಯುವ ಭೀತಿ
ಇದೇವೇಳೆ ರೆಡ್ ಅಲರ್ಚ್ ಇದ್ದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ತೀವ್ರತೆ ಇಳಿಮುಖವಾಗುತ್ತಿದ್ದು, ಪ್ರವಾಹರೂಪಿಯಾಗಿದ್ದ ನದಿಗಳಲ್ಲೂ ನೀರಿನ ಮಟ್ಟಇಳಿಕೆಯಾಗಿ ಜನಜೀವನ ಸಹ ಸ್ಥಿತಿಯತ್ತ ಮುಖಮಾಡುತ್ತಿದೆ.
ರಾಜ್ಯದಲ್ಲಿ ಗರಿಷ್ಠ ಮಳೆ ಪ್ರಮಾಣ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಳ್ಳಿಹೊಳೆಯಲ್ಲಿ 18.8 ಸೆಂ.ಮೀ. ದಾಖಲಾಗಿದೆ. ಮಡಿಕೇರಿ ತಾಲೂಕಿನ ಮಾಡೆಯಲ್ಲಿ 17.2 ಸೆಂ.ಮೀ. ಮತ್ತು ಕಾರ್ಕಳ ತಾಲೂಕಿನ ಶಿವಪುರದಲ್ಲಿ 15.65 ಸೆಂ.ಮೀ. ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕಳಸ, ಕೊಪ್ಪ ತಾಲೂಕುಗಳಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ತುಂಗಾ, ಭದ್ರಾನದಿಗೆ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಚಿಕ್ಕಮಗಳೂರು ತಾಲೂಕಿನ ಆವತಿ ಹೋಬಳಿಯ ಕೆರೆಮಕ್ಕಿ ಗ್ರಾಮದಲ್ಲಿ ಧರ್ಮೇಗೌಡ ಅವರ ಕಾಫಿ ತೋಟದ ಮೇಲೆ ಗುಡ್ಡ ಕುಸಿದಿದ್ದು, ಸುಮಾರು 150 ಕಾಫಿ ಗಿಡಗಳು ನಾಶವಾಗಿವೆ. ಕೊಪ್ಪ ತಾಲೂಕಿನ ಗುಡ್ಡೆತೋಟ, ಹುತ್ತಿನಗದ್ದೆ, ಚನ್ನಕಲ್ಲು ಗ್ರಾಮಗಳಲ್ಲೂ ಭೂ ಕುಸಿತ ಉಂಟಾಗಿದೆ. ಚಿಕ್ಕಮಗಳೂರು ತಾಲೂಕಿನ ಗಿರಿಪ್ರದೇಶದ ಕೆಲವೆಡೆ ಧರೆ ಕುಸಿದಿದೆ. ಮಣಬೂರು ಗ್ರಾಮದಲ್ಲಿ ಕಿರು ಸೇತುವೆಯೊಂದು ಮುಳುಗಡೆಯಾಗಿದ್ದು ಗ್ರಾಮಸ್ಥರು ಹಗ್ಗದ ಸಹಾಯದಿಂದ ಹಳ್ಳವನ್ನು ದಾಟುತ್ತಿದ್ದಾರೆ.
ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಿಂದ ಬರೆ ಕುಸಿತ ಉಂಟಾಗಿದ್ದು, ಕೆಲವೆಡೆ ಪ್ರವಾಹ ಭೀತಿ ಎದುರಾಗಿದೆ. ಮಡಿಕೇರಿ ತಾಲೂಕಿನ ಕರಿಕೆ ರಸ್ತೆಯ ಮೇಲೆ ಹೊಳೆ ಹರಿದಂತಾಗಿದೆ. ಕುಶಾಲನಗರ ತಾಲೂಕಿನ ಕಣಿವೆಯಲ್ಲಿ 10 ಎಕರೆ ಕೃಷಿ ಭೂಮಿ ಜಲಾವೃತಗೊಂಡಿದ್ದು ಇಲ್ಲಿನ ಸಾಯಿ ಬಡಾವಣೆ ಮುಳುಗಡೆ ಭೀತಿಯಲ್ಲಿದೆ. ಮುಂಜಾಗ್ರತಾ ಕ್ರಮವಾಗಿ ಕೆಲ ಮನೆಯ ನಿವಾಸಿಗಳು ಮನೆ ಖಾಲಿ ಮಾಡಿದ್ದಾರೆ.
Chikkamagaluru: ಪುನರ್ವಸು ಮಳೆ ಅಬ್ಬರಕ್ಕೆ ಕಾಫಿನಾಡು ತತ್ತರ!
ಇನ್ನು ಉಡುಪಿ ಜಿಲ್ಲೆಯಲ್ಲಿ ಸೋಮವಾರವೂ ಧಾರಾಕಾರ ಮಳೆಯಾಗಿದ್ದು 9 ಮನೆಗಳಿಗೆ ಹಾನಿಯಾಗಿವೆ. ಸೌಪರ್ಣಿಕಾ, ಸೀತಾ, ಮಟಪಾಡಿ, ಸ್ವರ್ಣಾ, ಪಾಪನಾಶಿನಿ, ಉಪ್ಪೂರು ನದಿಗಳು ಪ್ರವಾಹೋಪಾದಿಯಲ್ಲಿ ಹರಿಯುತ್ತಿದ್ದು ಬ್ರಹ್ಮಾವರ ತಾಲೂಕಿನ 4 ಗ್ರಾಮಗಳಲ್ಲಿ ನೆರೆ ಇಳಿಯದೆ, ನಿವಾಸಿಗಳು ಪರದಾಡುವಂತಾಗಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗೊಮ್ಮೆ ಈಗೊಮ್ಮೆ ಭಾರಿ ಮಳೆ ಬಿದ್ದರೂ, ನಿರಂತರ ಮಳೆಗೆ ಬ್ರೇಕ್ ಬಿದ್ದಿದೆ. ಮನೆ, ಹೊಲ, ಗದ್ದೆಗಳಿಗೆ ನುಗ್ಗಿದ್ದ ನೀರು ಇಳಿದುಹೋಗಿದೆ. ಶಿರಸಿ ತಾಲೂಕಿನಲ್ಲಿ ಮಾತ್ರ ಮಳೆ, ವರದಾ ಪ್ರವಾಹದಿಂದ ಸುಮಾರು 500 ಎಕರೆಗೂ ಅಧಿಕ ಭತ್ತದ ಬೆಳೆ ಜಲಾವೃತಗೊಂಡಿವೆ. ಇದೇವೇಳೆ ಕಾರವಾರ ಬೆಳಗಾವಿ ರಸ್ತೆಯ ಅಣಶಿ ಘಟ್ಟದಲ್ಲಿ ಗುಡ್ಡ ಮತ್ತೆ ಮತ್ತೆ ಕುಸಿಯುತ್ತಿದೆ. ಇದರಿಂದ ಆ ರಸ್ತೆಯಲ್ಲಿ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಇನ್ನುಳಿದಂತೆ ಧಾರವಾಡ, ಹಾವೇರಿ ಜಿಲ್ಲೆಗಳಲ್ಲೂ ಉತ್ತಮ ಮಳೆ ಸುರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ