ಸದನದಲ್ಲಿ ಶಾಸಕರ ಜಟಾಪಟಿ: ಬಗೆಹರಿಸಿಕೊಂಡು ಹೋಗುವುದೇ ಸದನದ ಸಂಸ್ಕೃತಿ, ಶಿವಲಿಂಗೇಗೌಡರ ಬಗ್ಗೆ ಸ್ಪೀಕರ್ ಹೇಳಿದ್ದನು?

Published : Feb 07, 2026, 12:40 PM IST
 UT Khader

ಸಾರಾಂಶ

ವಿಧಾನಸಭೆಯಲ್ಲಿ ಶಾಸಕರಾದ ಶಿವಲಿಂಗೇಗೌಡ ಮತ್ತು ಶರಣು ಸಲಗಾರ ನಡುವಿನ ಮಾತಿನ ಜಟಾಪಟಿಗೆ ಸ್ಪೀಕರ್ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದನವು ಒಂದು ಕುಟುಂಬವಿದ್ದಂತೆ, ಶಾಸಕರು ಆತ್ಮಾವಲೋಕನ ಮಾಡಿಕೊಂಡು ಸದನದ ಗೌರವವನ್ನು ಕಾಪಾಡಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ. 

ಮಂಗಳೂರು (ಫೆ.7): ಸದನ ಎಂಬುದು ಒಂದು ಕುಟುಂಬವಿದ್ದಂತೆ. ಅಣ್ಣ-ತಮ್ಮಂದಿರ ಮಧ್ಯೆ ಚರ್ಚೆಗಳು ನಡೆಯುವುದು ಸಹಜ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರಿಯಿಸಿದರು.

ವಿಧಾನಸಭೆಯಲ್ಲಿ ಶಾಸಕರಾದ ಶಿವಲಿಂಗೇಗೌಡ ಹಾಗೂ ಶರಣು ಸಲಗಾರ ನಡುವೆ ನಡೆದ ಮಾತಿನ ಜಟಾಪಟಿ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸ್ಪೀಕರ್, ಇಂತಹ ಘಟನೆಗಳು ಇದೇ ಮೊದಲೇನಲ್ಲ, ಈ ಹಿಂದೆಯೂ ನಡೆದಿವೆ. ಚರ್ಚೆಯ ಬಳಿಕ ಇಬ್ಬರೂ ಶಾಸಕರು ತಮಾಷೆಯಾಗಿ ಮಾತನಾಡಿಕೊಂಡಿದ್ದಾರೆ. ಆದರೆ ಊಟದ ನಂತರ ಬಂದು ಮತ್ತೆ ಅದೇ ವಿಚಾರ ಪ್ರಸ್ತಾಪಿಸಿದ್ದು ಸರಿಯಲ್ಲ," ಎಂದು ಅವರು ಅಭಿಪ್ರಾಯಪಟ್ಟರು.

ಶಾಸಕರ ವರ್ತನೆ ಮತ್ತು ಆತ್ಮಾವಲೋಕನದ ಅಗತ್ಯ

ಸದನದಲ್ಲಿ ಶಾಸಕರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಖಾದರ್, 224 ಶಾಸಕರಲ್ಲಿ ಕೆಲವರ ವರ್ತನೆ ಈ ರೀತಿ ಇರುತ್ತದೆ, ಹಾಗಂತ ಎಲ್ಲರೂ ಹೀಗೆ ಇಲ್ಲ. ಸದನ ನಡೆಸುವುದು ಕೇವಲ ಸಭಾಧ್ಯಕ್ಷರ ಜವಾಬ್ದಾರಿಯಲ್ಲ, ಅದು ಎಲ್ಲ ಸದಸ್ಯರ ಹೊಣೆಗಾರಿಕೆಯಾಗಿದೆ. ಶಾಸಕರು ಸ್ವಯಂ ಪ್ರೇರಿತವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕ್ಷೇತ್ರ ಮತ್ತು ಸಮಾಜದಲ್ಲಿ ಜನರನ್ನು ತಿದ್ದುವ ಸ್ಥಾನದಲ್ಲಿರುವವರು, ಕಾನೂನು ತಿಳಿದವರು ಈ ರೀತಿ ವರ್ತಿಸಬಾರದು. ನಾವು ಮಾಡುವ ಕೆಲಸವನ್ನು ಜನ ನೋಡುತ್ತಿರುತ್ತಾರೆ ಎಂಬ ಅರಿವು ಇರಬೇಕು ಎಂದು ಕಿವಿಮಾತು ಹೇಳಿದರು.

ಕರಾವಳಿ ಶಾಸಕರಿಗೆ ಸ್ಫೀಕರ್ ಕಿವಿಮಾತು

ವಿಶೇಷವಾಗಿ ಕರಾವಳಿ ಭಾಗದ ಶಾಸಕರ ಬಗ್ಗೆ ಮಾತನಾಡಿದ ಸ್ಪೀಕರ್, ಹಿಂದೆ ಕರಾವಳಿಯ ಶಾಸಕರ ಬಗ್ಗೆ ಸದನದಲ್ಲಿ ಅಪಾರ ಗೌರವವಿತ್ತು. ಆದರೆ ಈಗಿನ ಶಾಸಕರು ಪರಸ್ಪರ ಕೋತಿಗಳು, ಪ್ರಾಣಿಗಳ ಹೆಸರನ್ನು ಎಳೆದು ತಂದು ಕರೆಯುವಾಗ ನಮಗೂ ಬೇಸರವಾಗುತ್ತದೆ. ಶಾಸಕರು ತಮ್ಮ ಕ್ಷೇತ್ರಕ್ಕೆ, ಜಿಲ್ಲೆಗೆ ಅಥವಾ ಹಿರಿಯರಿಗೆ ಅಗೌರವ ತರುವಂತಹ ವ್ಯಕ್ತಿತ್ವವನ್ನು ಅಲ್ಲಿ ರೂಪಿಸಬಾರದು. ಇನ್ನೊಬ್ಬರಿಂದ ನಾವು ಇಂತಹ ಮಾತುಗಳನ್ನು ಕರೆಸಿಕೊಳ್ಳುವುದು ಇಡೀ ಜಿಲ್ಲೆಗೆ ತರುವ ಅಗೌರವವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬಗೆಹರಿಸಿಕೊಂಡು ಹೋಗುವುದೇ ಸದನದ ಸಂಸ್ಕೃತಿ

ಶಾಸಕರ ನಡುವಿನ ಇಂತಹ ತಿಕ್ಕಾಟಗಳನ್ನು ಅತಿರೇಕಕ್ಕೆ ಒಯ್ಯದೆ, ಬಗೆಹರಿಸಿಕೊಂಡು ಹೋಗುವುದೇ ಸದನದ ನೈಜ ಸಂಸ್ಕೃತಿಯಾಗಿದೆ ಎಂದು ಖಾದರ್ ತಿಳಿಸಿದರು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಾಸಕರು ಎಚ್ಚರಿಕೆ ವಹಿಸಬೇಕು. ಶಾಸಕರ ಗೌರವವನ್ನು ಉಳಿಸಿಕೊಳ್ಳುವುದು ಅವರವರ ಕೈಯಲ್ಲೇ ಇದೆ. ಸಮಾಜದಲ್ಲಿ ಗೌರವಯುತವಾಗಿ ಬದುಕುವ ಸತ್ಪ್ರಜೆಗಳು ಇಂತಹ ವರ್ತನೆಗಳಿಂದ ದೂರವಿರಬೇಕು, ಎಂದು ಅವರು ಕರೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

KPTCL ತುರ್ತು ನಿರ್ವಹಣಾ ಕಾಮಗಾರಿ: ಇಂದು ಬೆಂಗಳೂರಿನ ಈ ಭಾಗಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಇರೋಲ್ಲ ಕರೆಂಟ್!
HD kumaraswamy: ಬೇರೆ ರಾಜ್ಯಗಳಲ್ಲಿ ಯಾಕೆ ಮೆಟ್ರೋ ದರ ಹೆಚ್ಚಳವಾಗಿಲ್ಲ? ಕೇಂದ್ರದ ಮೇಲೆ ಗೂಬೆ ಕೂರಿಸೋದು ಕಾಂಗ್ರೆಸ್ ಚಾಳಿ