ಜಾತಿಗಣತಿ ವರದಿ ಬಿಡುಗಡೆ ಬಗ್ಗೆ ಕಾಂಗ್ರೆಸ್‌ನಲ್ಲೇ ಆಂತರಿಕ ಬೇಗುದಿ..!

By Kannadaprabha NewsFirst Published Sep 8, 2021, 10:19 AM IST
Highlights

*   ವೀರಶೈವ ಮಹಾಸಭಾ ವಿರೋಧಕ್ಕೆ ಸಿದ್ದು ಅತೃಪ್ತಿ
*  ಸಿಎಲ್‌ಪಿ ಸಭೆಗೆ ಶಾಮನೂರು, ಖಂಡ್ರೆ ಗೈರು
*  ಜಾತಿ ಗಣತಿ ಬಗ್ಗೆ ಪಕ್ಷದಲ್ಲೇ ಪರ-ವಿರೋಧ ನಿಲುವು
 

ಬೆಂಗಳೂರು(ಸೆ.08): ತಮ್ಮ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ನಡೆಸಲಾಗಿದ್ದ ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿಯನ್ನು (ಜಾತಿ ಗಣತಿ) ಜಾರಿಗೊಳಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಆಗ್ರಹಿಸುತ್ತಿರುವುದರ ನಡುವೆ ಕಾಂಗ್ರೆಸ್‌ ಪಾಳೆಯದಲ್ಲೇ ಈ ವರದಿ ಬಿಡುಗಡೆ, ಜಾರಿಗೆ ಪರೋಕ್ಷವಾಗಿ ವಿರೋಧ ಕಂಡುಬಂದಿದೆ.

ಕಾಂಗ್ರೆಸ್‌ನ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಮತ್ತು ಈಶ್ವರ್‌ ಖಂಡ್ರೆ ಅವರು ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ಪ್ರಮುಖ ಸ್ಥಾನದಲ್ಲಿದ್ದು, ಮಹಾಸಭಾ ಮೂಲಕ ಜಾತಿ ಜನಗಣತಿ ತಿರಸ್ಕರಿಸುವಂತೆ ಸರ್ಕಾರವನ್ನು ಒತ್ತಾಯಿಸಿರುವುದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶಾಸಕ ಎಂ.ಬಿ.ಪಾಟೀಲ್‌ ಅವರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಇದೇ ಕಾರಣಕ್ಕೆ ಇಬ್ಬರೂ ಶಾಸಕರು ಮಂಗಳವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದಾರೆ ಎನ್ನಲಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ಅಧ್ಯಕ್ಷರಾಗಿರುವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಪ್ರಧಾನ ಕಾರ್ಯದರ್ಶಿಯಾಗಿರುವ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಜಾತಿಗಣತಿ ವರದಿ ಜಾರಿಗೆ ವಿರೋಧಿಸಿ ಹಾಗೂ ಆ ವರದಿ ತಿರಸ್ಕರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಸೋಮವಾರವಷ್ಟೇ ಪತ್ರಿಕಾ ಹೇಳಿಕೆ ಬಿಡುಗಡೆಯಾಗಿತ್ತು. ಇದರ ಬೆನ್ನಲ್ಲೇ ಮಂಗಳವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಶಾಸಕರಾದ ಶಾಮನೂರು ಶಿವಶಂಕರಪ್ಪ ಮತ್ತು ಈಶ್ವರ್‌ ಖಂಡ್ರೆ ಗೈರು ಹಾಜರಾಗಿದ್ದರು. ಜಾತಿ ಗಣತಿ ವರದಿಯನ್ನು ಜಾರಿಗೊಳಿಸುವಂತೆ ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ಕಾಂಗ್ರೆಸ್‌ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದಕ್ಕೆ ವಿರೋಧ ಇದ್ದುದರಿಂದಲೇ ಈ ಇಬ್ಬರು ನಾಯಕರೂ ಸಭೆಗೆ ಹಾಜರಾಗಿಲ್ಲ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಜಾತಿ ಗಣತಿ ಬಿಡುಗಡೆ ಮತ್ತು ಜಾರಿಗೆ ಕಾಂಗ್ರೆಸ್‌ನಲ್ಲೇ ಭಿನ್ನಾಭಿಪ್ರಾಯಗಳಿರುವುದು ಬಹಿರಂಗವಾದಂತಾಗಿದೆ.

ಜಾತಿ ಗಣತಿ ವರದಿ ಜಾರಿಗಾಗಿ ಕಲಾಪದಲ್ಲಿ ಹೋರಾಟ: ಸಿದ್ದು

ಪಾಟೀಲ್‌ ಬಳಿ ಸಿದ್ದು ಬೇಸರ:

ಮಂಗಳವಾರ ತಮ್ಮ ನಿವಾಸಕ್ಕೆ ಎಂ.ಬಿ.ಪಾಟೀಲ್‌ ಅವರನ್ನು ಕರೆಸಿಕೊಂಡು ಮಾತನಾಡಿದ ಸಿದ್ದರಾಮಯ್ಯ ಅವರು ಅಖಿಲ ಭಾರತ ವೀರಶೈವ ಮಹಾಸಭಾ ಜಾತಿ ಜನಗಣತಿ ವರದಿಯನ್ನು ತಿರಸ್ಕರಿಸುವಂತೆ ಆಗ್ರಹಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಪಕ್ಷದವರೇ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳೂ ಆಗಿರುವ ಮಹಾಸಭಾದಿಂದ ಪ್ರಕಟಣೆ ಹೊರಡಿಸಿರುವುದರಿಂದ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ? ಈ ಬಗ್ಗೆ ಮಹಾಸಭಾದ ಕಾಂಗ್ರೆಸ್‌ ನಾಯಕರೊಂದಿಗೆ ಮಾತನಾಡಿ ಮನವರಿಕೆ ಮಾಡಿಕೊಡಿ ಎಂದು ತಿಳಿಸಿದರು ಎಂದು ಗೊತ್ತಾಗಿದೆ.

ಆದರೆ, ಇದನ್ನು ಸಿದ್ದರಾಮಯ್ಯ ಅವರ ಆಪ್ತ ವಲಯ ಅಲ್ಲಗಳೆದಿದೆ. ಎಂ.ಬಿ.ಪಾಟೀಲ್‌ ಅವರ ಭೇಟಿ ಸೌಜನ್ಯದ ಭೇಟಿಯಷ್ಟೆ. ಬೇರೆ ಅರ್ಥ ನೀಡುವುದು ಸರಿಯಲ್ಲ. ಹಾಗೊಂದು ವೇಳೆ ಮಹಾಸಭಾ ಪ್ರಕಟಣೆ ಕುರಿತು ಮಾತನಾಡುವುದಾದರೆ ಶಾಮನೂರು ಶಿವಶಂಕರಪ್ಪ ಹಾಗೂ ಈಶ್ವರ್‌ ಖಂಡ್ರೆ ಅವರನ್ನೇ ಕರೆಸಿ ಸಿದ್ದರಾಮಯ್ಯ ಅವರು ಮಾತನಾಡುತ್ತಾರೆ. ಎಂ.ಬಿ.ಪಾಟೀಲ್‌ ಅವರ ಬಳಿ ಅಸಮಾಧಾನ ವ್ಯಕ್ತಪಡಿಸುವ ಅಗತ್ಯವಿಲ್ಲ ಎನ್ನುತ್ತವೆ ಮೂಲಗಳು.
 

click me!