
ಮಂಗಳೂರು (ಆ.4): ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಅನುಮಾನಾಸ್ಪದವಾಗಿ ಹೂಳಲಾಗಿದೆ ಎಂಬ ಅನಾಮಿಕ ವ್ಯಕ್ತಿಯ ದೂರಿನ ಮೇರೆಗೆ ಈಗಾಗಲೇ ವಿಶೇಷ ತನಿಖಾ ತಂಡ(ಎಸ್‌ಐಟಿ) ಗುರುತು ಮಾಡಿದ 13 ಜಾಗಗಳ ಪೈಕಿ 10 ಜಾಗಗಳಲ್ಲಿ ಉತ್ಖನನ ನಡೆಸಿದೆ. ಇದರಲ್ಲಿ ಒಂದು ಜಾಗದಲ್ಲಿ ಮಾತ್ರ ಉತ್ಖನನ ವೇಳೆ ಅಸ್ಥಿಯ ತುಣುಕುಗಳು ಪತ್ತೆಯಾಗಿವೆ. ಉಳಿದ ಯಾವುದೇ ಜಾಗಗಳಲ್ಲಿ ಮಾನವನ ಕಳೇಬರ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಪತ್ತೆಕಾರ್ಯಕ್ಕೆ ಅನುಕೂಲವಾಗಲು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಬಳಸಿ, ಸ್ಥಳ ತನಿಖೆ ನಡೆಸುವಂತೆ ಬೆಂಗಳೂರಿನ ವಕೀಲರೊಬ್ಬರು ಎಸ್ಐಟಿಯನ್ನು ಕೋರಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾದ ಅನನ್ಯಾ ಭಟ್ ಪರ ವಕೀಲ ಮಂಜುನಾಥ್, ಭಾನುವಾರ ಈ ಕುರಿತು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ಈ ಆಗ್ರಹ ಮಾಡಿದ್ದಾರೆ.
ಧರ್ಮಸ್ಥಳ ಗ್ರಾಮ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ ಈವರೆಗೆ ಸಾಕ್ಷಿ-ದೂರುದಾರ ತೋರಿರುವ 10 ಸ್ಥಳಗಳಲ್ಲಿ ಕೆಲವು ಸ್ಥಳದಲ್ಲಿ ಕಳೇಬರಗಳು ಪತ್ತೆಯಾಗಿರುತ್ತದೆ ಎಂದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಸಾಕ್ಷಿಯೇ ಹೇಳಿರುವಂತೆ, ಆತ ಧರ್ಮಸ್ಥಳವನ್ನು 2014ರಲ್ಲಿಯೇ ತೊರೆದಿದ್ದಾನೆ. ಅಪಾರ ಮಳೆಯನ್ನು ಕಾಣುವ ಈ ಪ್ರದೇಶದಲ್ಲಿ ಮಣ್ಣು ಒಂದೆಡೆಯಿಂದ ಮತ್ತೊಂದೆಡೆಗೆ ಹರಿದು ಶೇಖರಣೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ, ಸುಮಾರು 11 ವರ್ಷಗಳಲ್ಲಿ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಸಾಕ್ಷಿದಾರ ತನ್ನ ನೆನಪಿನಲ್ಲಿ ಇಟ್ಟಿಕೊಂಡ ಗುರುತಿನಲ್ಲಿ ಬದಲಾವಣೆಯಾಗಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಾವು ಈಗಾಗಲೇ ಜು.29ರಂದು ಮನವಿ ಮಾಡಿಕೊಂಡಂತೆ ಭಾರತದಲ್ಲಿ ಬಳಕೆಯಲ್ಲಿರುವ ಅತ್ಯಾಧುನಿಕ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್‌ಗಳನ್ನು ಬಳಸಿ ಈಗಾಗಲೇ ಅಗೆಯಲಾಗಿರುವ ಸ್ಥಳಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಕಳೇಬರಗಳ ಪತ್ತೆಗೆ ಬಳಸುವಂತೆ ಕೇಳಿಕೊಳ್ಳುತಿದ್ದೇವೆ.
ಹುಲ್ಲು ಕಡ್ಡಿಯನ್ನು ತೆರವುಗೊಳಿಸಲು ಬಳಸುವ ಯಂತ್ರದಷ್ಟು ಗಾತ್ರವಿರುವ ಜಿಪಿಆರ್‌ಅನ್ನು ಕೆಲವೇ ವ್ಯಕ್ತಿಗಳನ್ನು ನಿಯೋಜಿಸಿ ಈಗಾಗಲೇ ಅಗೆದಿರುವ ಸ್ಥಳಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಕಳೇಬರಗಳ ಪತ್ತೆಗೆ ಬಳಸಲು ಸಾಧ್ಯವಿದೆ. ಪ್ರಣವ್ ಮೊಹಂತಿಯವರ ನೇತೃತ್ವದ ಎಸ್‌ಐಟಿ ತಂಡ, ಜಿಪಿಆರ್‌ಅನ್ನು ಅಳವಡಿಸುವುದೆಂಬ ನಿರೀಕ್ಷೆಯನ್ನು ಅನೇಕ ತಜ್ಞರು ಹೊಂದಿರುತ್ತಾರೆ. ಜಿಪಿಆರ್‌ಅನ್ನು ನಿಯೋಜಿಸಲು ಎಸ್‌ಐಟಿಗೆ ಕರ್ನಾಟಕ ಸರ್ಕಾರ ನೆರವಾಗುವ ನಂಬಿಕೆ, ವಿಶ್ವಾಸ ಇದೆ ಎಂದು ವಕೀಲ ಮಂಜುನಾಥ್ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿನ್ನೆ ನಡೆಯದ ಉತ್ಖನನ ಕಾರ್ಯ
ಈ ಮಧ್ಯೆ, ಭಾನುವಾರ ರಜಾ ದಿನವಾದ ಕಾರಣ ಯಾವುದೇ ಉತ್ಖನನ ನಡೆದಿಲ್ಲ. ಸೋಮವಾರ ಮತ್ತೆ ಉಳಿದ ಮೂರು ಕಡೆ ಗುರುತು ಹಾಕಿದ ಜಾಗಗಳ ಉತ್ಖನನ ಮುಂದುವರಿಯಲಿದೆ.
ಮತ್ತೊಬ್ಬ ದೂರುದಾರ ಆರೋಪ
ಈ ಮಧ್ಯೆ, ಶನಿವಾರ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಹಾಜರಾದ ಮತ್ತೊಬ್ಬ ದೂರುದಾರರು, ತಾವು ನೋಡಿದ ಪ್ರಕರಣವೊಂದಕ್ಕೆ ಸಂಬಂಧಿಸಿ ದೂರು ನೀಡುವುದಾಗಿ ಹೇಳಿದ್ದಾರೆ. ಅಲ್ಲಿನ ಕಲ್ಲೇರಿ ಎಂಬಲ್ಲಿ 15 ವರ್ಷದ ಹಿಂದೆ ಬಾಲಕಿಯ ಮೃತದೇಹವನ್ನು ನೋಡಿದ್ದೇನೆ. ಅದನ್ನು ತನಿಖೆ ನಡೆಸದೆ ಹೂತು ಹಾಕಿರುವ ಬಗ್ಗೆ ಸ್ಪಷ್ಟವಾದ ಮಾಹಿತಿ ತನ್ನಲ್ಲಿ ಇದೆ ಎಂದಿದ್ದಾರೆ. ಈ ಬಗ್ಗೆ ಸೋಮವಾರ ಎಸ್‌ಐಟಿಗೆ ದೂರು ನೀಡುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ