Sindhu Shanbhag: ರಾಷ್ಟ್ರಭಕ್ತ ದಿ. ದಯಾನಂದ ಶಾನಭಾಗರು | ತುರ್ತು ಪರಿಸ್ಥಿತಿ ವಿರೋಧಿಸಿದ್ದಕ್ಕೆ ನೌಕರಿ ಕಳೆದುಕೊಂಡು ಬಳ್ಳಾರಿ ಜೈಲು ಸೇರಿದರು!

Published : Jun 24, 2025, 11:24 AM ISTUpdated : Jun 24, 2025, 12:22 PM IST
India emergency memory

ಸಾರಾಂಶ

ಜೂನ್ 25, 1975 ರಂದು ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿದ 50 ನೇ ವರ್ಷ. ಲೇಖಕರ ಕುಟುಂಬದ ಮೇಲೆ ತುರ್ತು ಪರಿಸ್ಥಿತಿಯ ಪ್ರಭಾವ ಮತ್ತು ಅವರ ಕುಟುಂಬ ಸದಸ್ಯರು ಅನುಭವಿಸಿದ ಕಷ್ಟಗಳನ್ನು ವಿವರಿಸುತ್ತದೆ.

-ಸಿಂಧು ಶಾನಭಾಗ

ನಿನ್ನೆ ನನ್ನ ಪತಿ ಇದೇ ಜೂನ್ 25ಕ್ಕೆ ಭಾರತದಲ್ಲಿ ತುರ್ತುಪರಿಸ್ಥಿತಿ ಹೇರಿಕೆಗೆ 50 ವರ್ಷಗಳಾಗುತ್ತವೆ ಎಂದಾಗ ನನ್ನ ಮನಸ್ಸು ಆ ದಿನಗಳತ್ತ ಜಾರಿತು. ನನ್ನದು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಕಟ ಒಡನಾಟವಿರುವ ಕುಟುಂಬ. ನನ್ನ ಅಜ್ಜನವರಾದ ವಕೀಲ ದಿ. ನರಸಿಂಹ ಗೋವಿಂದ ಶಾನಭಾಗರು ತಮ್ಮ 'ಚುನಾವಣೆ' ಎಂಬ ಪತ್ರಿಕೆಯಲ್ಲಿ ತುರ್ತು ಪರಿಸ್ಥಿತಿಯನ್ನು ಉಗ್ರವಾಗಿ ಖಂಡಿಸುತ್ತಿದ್ದರು. ಅವರ ಇಳಿ ವಯಸ್ಸನ್ನು ತಿಳಿದು ಜಿಲ್ಲಾಡಳಿತ ಅವರನ್ನು ಗೃಹಬಂಧನದಲ್ಲಿ ಇರಿಸಿತ್ತು. ನನ್ನ ದೊಡ್ಡಪ್ಪ ಪ್ರಸಿದ್ಧ ವಕೀಲರು. ಆರ್‌ಎಸ್‌ಎಸ್‌ನ ಉತ್ತರ ಕನ್ನಡ ಜಿಲ್ಲಾ ಪ್ರಮುಖರಾಗಿದ್ದ ದಿ. ವೆಂಕಟೇಶ ಶಾನಭಾಗರು. ಅವರನ್ನು ಮೀಸಾ ಕಾಯ್ದೆಯಡಿ ಬೆಳಗಾವಿ ಕಾರಾಗೃಹದಲ್ಲಿ ಇರಿಸಲಾಗಿತ್ತು.

ನನ್ನ ತಂದೆ ದಿ.ಡಾ. ದಯಾನಂದ ಶಾನಭಾಗರು ಸರ್ಕಾರಿ ಸ್ವಾಮ್ಯದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು. ಆದಾಗ್ಯೂ ಅವರ ಆದರ್ಶ ಪ್ರಾಯರಾದ ಆರ್‌ಎಸ್‌ಎಸ್‌ನ ಗೋಳವಲ್ಕರ ಗುರೂಜಿಯವರ 'ರಾಷ್ಟ್ರಾಯ ಸ್ವಾಹಾ ಇದಂ ನ ಮಮ' ಎಂಬ ಧೈಯ ವಾಕ್ಯದಂತೆ ತುರ್ತುಪರಿಸ್ಥಿತಿ ವಿರುದ್ಧದ ತಮ್ಮ ತಾಯಿ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸಿದ್ದರು. ಅದರ ಪರಿಣಾಮವಾಗಿ ಸರ್ಕಾರ ತಂದೆಯವರನ್ನು ಉದ್ಯೋಗದಿಂದ ನಿಲಂಬಿತಗೊಳಿಸಿ, ಮೀಸಾ ಕಾಯ್ದೆಯಡಿ ರಾಜಕೀಯ ಕೈದಿಯನ್ನಾಗಿಸಿ ಬಳ್ಳಾರಿ ಜೈಲಿಗೆ ಕಳುಹಿಸಿತು.

ಶ್ರೀಯುತ ಶಾನಭಾಗರು ಕಾರಾಗೃಹ ವಾಸದಲ್ಲಿ ಕೂಡ ಅಲ್ಲಿನ ಗ್ರಂಥಾಲಯದಲ್ಲಿ ಕಾನೂನು ಅಧ್ಯಯನ ಮಾಡಿದರು. ಮಹಾಕಾವ್ಯ ಶ್ರೀರಾಮಾಯಣದ ವ್ಯಾಖ್ಯಾನವನ್ನು ಬರೆಯಲು ಪ್ರಾರಂಭಿಸಿದರು. ಅಲ್ಲಿ ಸಂಜೆ ಹೊತ್ತು ಎಲ್ಲ ಪ್ರಕಾರದ ಕೈದಿಗಳಿಗೆ ಒಗ್ಗೂಡಿಸಿ ರಾಮಾಯಣದ ವ್ಯಾಖ್ಯಾನವನ್ನು ಮಾಡುತ್ತಿದ್ದರು. ನಾವು ಬಳ್ಳಾರಿಗೆ ಅವರನ್ನು ಕಾಣಲು ಹೋದಾಗ ಜೈಲು ಅಧೀಕ್ಷಕರು ತಮ್ಮ ಕೊಠಡಿಗೆ ನಮ್ಮೆಲ್ಲರನ್ನು ಕರೆಸಿ ತುಂಬು ಮೆಚ್ಚುಗೆಯಿಂದ ಈ ವಿಷಯವನ್ನು ಹೇಳಿದ್ದರು. ಇದೇ ಕಾನೂನು ಅಧ್ಯಯನದಿಂದಾಗಿ ಶ್ರೀಯುತರು ತುರ್ತುಪರಿಸ್ಥಿಯ ನಂತರ ತಮ್ಮ ಪ್ರಾಧ್ಯಾಪಕ ಉದ್ಯೋಗವನ್ನು ಸರ್ಕಾರದಿಂದ ಮರಳಿ ಪಡೆದರು.

ಇಂತಹ ಕಠಿಣ ಮತ್ತು ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲೂ ನನ್ನ ದೊಡ್ಡಮ್ಮ ದಿ. ಶ್ರೀಮತಿ ಜಾನಕಿ ಮತ್ತು ನನ್ನ ಅಮ್ಮ ದಿ. ಶ್ರೀಮತಿ ವಿದ್ಯಾ ಅವರು ಎದೆಗುಂದದೆ ತಮ್ಮ ತಮ್ಮ ಸಂಸಾರವನ್ನು ಸಮರ್ಥವಾಗಿ ನಿಭಾಯಿಸಿದರು. ಈ ಸಮಯದಲ್ಲಿ ನನ್ನ ಸೋದರತ್ತೆಯವರಾದ ಸುಲೋಚನಕ್ಕ, ಶ್ರೀವೇಣಕ್ಕೆ ಮತ್ತೆಲ್ಲ ಕುಟುಂಬದ ಸದಸ್ಯರ ಸಹಕಾರವನ್ನು ಮರೆಯಲಾಗದು. 1977ರ ಚುನಾವಣೆ ಘೋಷಣೆಯಾಗುತ್ತಿದ್ದಂತೆ ನಮ್ಮ ಮನೆ ಚುನಾವಣಾ ಕಾರ್ಯಾಲಯವಾಯಿತು ಮತ್ತು ನಾವೆಲ್ಲ ತುರ್ತುಪರಿಸ್ಥಿತಿಯ ವಿರುದ್ಧದ ಚುನಾವಣಾ ಪ್ರಚಾರಕ್ಕೆ ತೊಡಗಿದೆವು.

ವಯಸ್ಸಿನಿಂದ ಚಿಕ್ಕವಳಾಗಿದ್ದರೂ ಅಂದಿನ ಪರಿಸ್ಥಿತಿ, ತಂದೆಯವರ ಮತ್ತು ಪೂರ್ಣ ಕುಟುಂಬದ ದೇವರಲ್ಲಿನ ನಂಬಿಕೆ. ಗುರು ಹಿರಿಯರಿಗೆ ಕೊಡುವ ಗೌರವ, ರಾಷ್ಟ್ರಪ್ರೇಮ, ಅದರ ಒಳಿತಿಗಾಗಿ ಸ್ವಾರ್ಥವನ್ನು ಬದಿಗಿಟ್ಟು ಸಮಾಜ ಸೇವೆ ಮಾಡುವ ಪ್ರವೃತ್ತಿಯನ್ನು ಕಂಡ ನಾನು ಅವರೆಲ್ಲರ ಹಿರಿಮೆಯ ಬಗ್ಗೆ ತುಂಬಾ ಪ್ರಭಾವಿತಳಾಗಿದ್ದೇನೆ. ರಾಷ್ಟ್ರದ ಉನ್ನತಿಗೆ ಮೊದಲ ಆದ್ಯತೆ ಕೊಟ್ಟ ದಯಾನಂದ ಶಾನಭಾಗರು ತಮ್ಮ ತೀಕ್ಷ್ಯ ಬುದ್ದಿವಂತಿಕೆ, ದೈತ ವೇದಾಂತದ ಮೇಲಿನ ಪಾಂಡಿತ್ಯತೆ, ಅಧ್ಯಯನ ನಿರತತೆ, ಸಮಾಜಸೇವೆ ಮತ್ತು ವಿದ್ಯಾರ್ಥಿಗಳ ಬಗೆಗಿನ ಕಾಳಜಿಯಿಂದ ತುಂಬಾ ಪ್ರಸಿದ್ಧರು. ಆದರೂ ಯಾವ ರಾಜಾಶ್ರಯವನ್ನೂ ಬಯಸದೇ, ಧಾರವಾಡದಲ್ಲಿ ಜೀವನ ರೂಪಿಸಲು ಬಂದವರಿಗೆ, ಸಹಾಯ ಅರಸಿ ಬಂದವರಿಗೆ ತಮ್ಮ ಮನೆಯಲ್ಲೇ ಆಶ್ರಯಕೊಟ್ಟು ಸರಳ ಜೀವನವನ್ನು ನಡೆಸಿದವರು. ಈ ಮನೆಮಗಳಾಗಿ ಹುಟ್ಟಿ ಧನ್ಯಳಾದ ನಾನು ಆ ಪರಮಾತ್ಮನಿಗೆ ಚಿರಋಣಿ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!