ವಿದ್ವತ್‌, ಅನುಭವ ಎರಡೂ ಇದ್ದರೂ ಪ್ರಣಬ್‌ ದಾಗೆ ಪ್ರಧಾನಿ ಹುದ್ದೆ ಅವಕಾಶ ಸಿಗಲಿಲ್ಲ: ಸಿದ್ದರಾಮಯ್ಯ

By Kannadaprabha NewsFirst Published Sep 1, 2020, 8:53 AM IST
Highlights

ಕೆಲವರು ಅಗಲಿ ಹೋದ ಜಾಗದಲ್ಲಿ ನಿರ್ವಾತ ಸೃಷ್ಟಿಯಾಗುತ್ತದೆ. ಆ ಜಾಗವನ್ನು ಸುಲಭದಲ್ಲಿ ಬೇರೊಬ್ಬರು ತುಂಬಲು ಸಾಧ್ಯವಾಗುವುದಿಲ್ಲ. ಪ್ರಣಬ್‌ ಮುಖರ್ಜಿ ಅವರು ಅಂತಹ ಅಪರೂಪದ ರಾಜಕಾರಣಿ.

ಬೆಂಗಳೂರು (ಸೆ. 01): ಕೆಲವರು ಅಗಲಿ ಹೋದ ಜಾಗದಲ್ಲಿ ನಿರ್ವಾತ ಸೃಷ್ಟಿಯಾಗುತ್ತದೆ. ಆ ಜಾಗವನ್ನು ಸುಲಭದಲ್ಲಿ ಬೇರೊಬ್ಬರು ತುಂಬಲು ಸಾಧ್ಯವಾಗುವುದಿಲ್ಲ. ಪ್ರಣಬ್‌ ಮುಖರ್ಜಿ ಅವರು ಅಂತಹ ಅಪರೂಪದ ರಾಜಕಾರಣಿ.

ದೇಶದ ರಾಷ್ಟ್ರಪತಿಗಳಾಗಿ, ಕೇಂದ್ರದ ಹಿರಿಯ ಸಚಿವರಾಗಿ ಮತ್ತು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯನಿರ್ವಹಿಸಿದ ರೀತಿಯನ್ನು ಇಡೀ ದೇಶ ಕೊಂಡಾಡಿದೆ. ಅವರೊಬ್ಬ ಮುತ್ಸದ್ದಿ ಮಾತ್ರವಲ್ಲ ಬುದ್ಧಿಜೀವಿ ರಾಜಕಾರಣಿ.

ಅವರೊಬ್ಬ ಪ್ರಖರ ಆರ್ಥಿಕ ತಜ್ಞ. ಪ್ರಾರಂಭದ ದಿನದಲ್ಲಿಯೇ ಇಂದಿರಾಗಾಂಧಿಯವರು ಅದನ್ನು ಗುರುತಿಸಿ ಅತ್ಯಂತ ಕಿರಿಯ ವಯಸ್ಸಿಗೆ (47ನೇ ವರ್ಷ) ಹಣಕಾಸು ಸಚಿವರಾಗಿ ಮಾಡಿದ್ದರು. ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಸಂಪುಟದಲ್ಲಿಯೂ ಹಣಕಾಸು ಸಚಿವರಾಗಿದ್ದರು. ಪಿ.ವಿ.ನರಸಿಂಹರಾವ್‌ ಪ್ರಧಾನಿಯಾಗಿದ್ದಾಗ ಐದು ವರ್ಷ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು. ಎಲ್ಲಾ ಇಲಾಖೆಗಳ ಬಗ್ಗೆ ಅವರಿಗಿದ್ದ ಜ್ಞಾನದಿಂದಲೇ ಮನಮೋಹನ್‌ ಸಿಂಗ್‌ ಸರ್ಕಾರದ ಬೇರೆ ಬೇರೆ ಇಲಾಖೆಗಳ ಅನೇಕ ಸಚಿವರ ಗುಂಪುಗಳಿಗೆ ಅವರು ಅಧ್ಯಕ್ಷರಾಗಿದ್ದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಅವರು ರಾಷ್ಟ್ರಪತಿಗಳಾಗಿದ್ದರು. ಹಲವಾರು ಬಾರಿ ರಾಷ್ಟ್ರಪತಿಗಳಾಗಿ ಬೆಂಗಳೂರಿಗೆ ಆಗಮಿಸಿದಾಗ ಶಿಷ್ಟಾಚಾರದ ಪ್ರಕಾರ ಅವರನ್ನು ಸ್ವಾಗತಿಸಿ ಕರೆತಂದು ಆ ಮೇಲೆ ಬೀಳ್ಕೊಡಬೇಕಾಗಿತ್ತು. ಎಲ್ಲ ಸಂದರ್ಭಗಳಲ್ಲಿ ಅವರ ಸಜ್ಜನಿಕೆಯ ನಡವಳಿಕೆ ನನ್ನ ಮನಸೆಳೆದಿತ್ತು. 3-4 ಬಾರಿ ದೆಹಲಿಯಲ್ಲಿ ಭೇಟಿಯಾಗಿದ್ದೆ. ನಾನು ಹಣಕಾಸು ಸಚಿವನಾಗಿದ್ದದ್ದು ಅವರಿಗೆ ಗೊತ್ತಿದ್ದ ಕಾರಣ ನನ್ನ ಜೊತೆ ಆರ್ಥಿಕ ಕ್ಷೇತ್ರದ ಬಗ್ಗೆಯೇ ಅವರು ಹೆಚ್ಚು ಮಾತನಾಡಿದ್ದರು.

ಉಡುಪಿಯಲ್ಲಿ ಪ್ರಣಬ್ ಪ್ರಯಾಣ, ವೈದ್ಯರ ಮೇಲಿನ ಹಲ್ಲೆ ಖಂಡಿಸಿದ್ದ ಇತಿಹಾಸ

ಪ್ರಧಾನಿ ಹುದ್ದೆ ಏಕೈಕ ಕೊರಗು ಇರಬಹುದು:

ಹಲವಾರು ಬಾರಿ ಸಮೀಪಕ್ಕೆ ಬಂದು ತಪ್ಪಿಹೋದ ಪ್ರಧಾನಿ ಹುದ್ದೆ ಬಹುಶಃ ಅವರ ಜೀವನದ ಏಕೈಕ ಕೊರಗು ಇರಬಹುದು. ವಿದ್ವತ್‌ ಮತ್ತು ಅನುಭವ ಎರಡೂ ದೃಷ್ಟಿಯಿಂದಲೂ ಪ್ರಧಾನಿಯಾಗುವ ಅರ್ಹತೆ ಅವರಿಗಿತ್ತೆನ್ನುವುದು ನಿಜ. ಆದರೆ ರಾಜಕೀಯದಲ್ಲಿ ಒಂದಷ್ಟುಅವಕಾಶಗಳು ಬಯಸದೆ ಇದ್ದರೂ ಒದಗಿ ಬರುತ್ತದೆ, ಇನ್ನು ಕೆಲವು ಅವಕಾಶಗಳು ಬಯಸಿದರೂ ಕೂಡಿ ಬರುವುದಿಲ್ಲ.

ಇಂತಹದ್ದೊಂದು ಅವಕಾಶ ತಪ್ಪಿದ್ದಕ್ಕೋ ಏನೋ ಸೋನಿಯಾ ಗಾಂಧಿಯವರು ಪ್ರಣಬ್‌ ಮುಖರ್ಜಿ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದರು. ಅದು ಅವರ ಪಾಲಿಗೆ ಬಯಸದೇ ಬಂದ ಭಾಗ್ಯ. ಆ ಹುದ್ದೆಯನ್ನು ಘನತೆಯಿಂದ ಅವರು ನಿಭಾಯಿಸಿದ್ದರು.

ಸ್ವತಂತ್ರ ಚಿಂತನೆಯ ಪ್ರಣಬ್‌ ಮುಖರ್ಜಿ ಅವರು ಈ ಗುಣವನ್ನು ಕೊನೆವರೆಗೆ ಉಳಿಸಿಕೊಂಡಿದ್ದರು. ಇತ್ತೀಚೆಗೆ ಆರ್‌ಎಸ್‌ಎಸ್‌, ಅವರನ್ನು ತಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಸ್ವಂತ ಮಗಳೇ ವಿರೋಧಿಸಿದರೂ ಒಪ್ಪದೆ ಹೋಗಿ ಭಾಗವಹಿಸಿದ್ದರು. ಸಂಸತ್‌ನಲ್ಲಿ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸಮಕ್ಕೆ ನಿಂತು ವೇದ-ಉಪನಿಷತ್‌ಗಳ ವಿಷಯದಲ್ಲಿ ನಿರರ್ಗಳವಾಗಿ ಮಾತನಾಡಿ ಸೈ ಅನಿಸಿಕೊಂಡಿದ್ದರು. ಕಾಂಗ್ರೆಸನ್ನು ಟೀಕಿಸುತ್ತಿದ್ದ ಬಿಜೆಪಿಗರ ಬಾಯಿ ಮುಚ್ಚಿಸುತ್ತಿದ್ದರು.

ಅವರೊಬ್ಬ ಪೂರ್ಣಕಾಲಿಕ ರಾಜಕಾರಣಿಯಾಗಿದ್ದರೂ ಅವರ ಆಸಕ್ತಿ ರಾಜಕೀಯವನ್ನು ಮೀರಿದ್ದಾಗಿತ್ತು. ಈ ಎಲ್ಲ ಕಾರಣಗಳಿಂದಾಗಿಯೇ ಪ್ರಣಬ್‌ ಮುಖರ್ಜಿ ಅವರು ಬಿಟ್ಟು ಹೋದ ಜಾಗವನ್ನು ತುಂಬುವುದು ಕಷ್ಟವಾಗಬಹುದು. ಅಗಲಿದ ಹಿರಿಯ ಚೇತನಕ್ಕೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ.

click me!