'ಹೆಜ್ಜೆ ಹೆಜ್ಜೆಗೂ ನಾನು...' ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಬೆನ್ನಲ್ಲೇ ಭಾವುಕ ಫೋಸ್ಟ್‌ ಹಂಚಿಕೊಂಡ ಸಿದ್ದರಾಮಯ್ಯ..!

Published : May 28, 2026, 09:07 PM IST
Siddaramaiah

ಸಾರಾಂಶ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ, ತಮ್ಮ ಸುದೀರ್ಘ ರಾಜಕೀಯ ಪಯಣವನ್ನು ಭಾವನಾತ್ಮಕ ಪತ್ರದ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಏಳಿಗೆಗೆ ಕಾರಣರಾದ ಜನತೆ, ಪಕ್ಷ ಹಾಗೂ ಗುರುಗಳನ್ನು ಸ್ಮರಿಸಿರುವ ಅವರು, ತಾವು ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಕರ್ನಾಟಕ ಕಂಡ ಅತ್ಯಂತ ದಿಟ್ಟ, ಜನಪರ ಹಾಗೂ ದೀರ್ಘಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆ ಪಾತ್ರರಾಗಿರುವ ಸಿದ್ದರಾಮಯ್ಯ ಅವರ ವರ್ಣರಂಜಿತ ಮುಖ್ಯಮಂತ್ರಿ ಜೀವನಕ್ಕೆ ತೆರೆ ಬಿದ್ದಿದೆ. ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ಸಕ್ರಿಯ ರಾಜ್ಯ ರಾಜಕಾರಣದಲ್ಲಿ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.

ಇಂದು ಮಧ್ಯಾಹ್ನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರ ಕಂಪ್ಲೀಟ್ ವಿವರ ಈ ಕೆಳಗಿನಂತಿದೆ.

ಸಿದ್ದರಾಮಯ್ಯ ಭಾವನಾತ್ಮಕ ಪೋಸ್ಟ್

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಇಂದಿನ ವರೆಗೂ ನನಗೆ ನಿರೀಕ್ಷೆಗೂ ಮೀರಿ ಪ್ರೀತಿ ನೀಡಿದ, ಅಭಿಮಾನಿಸಿದ, ಕೈಹಿಡಿದು ನಡೆಸಿದ ರಾಜ್ಯದ ಜನತೆಯನ್ನು ಉದ್ದೇಶಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದೆ.

* ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಘನತೆವೆತ್ತ ರಾಜ್ಯಪಾಲರಿಗೆ ನೀಡಿ ಬಂದಿದ್ದೇನೆ. ಸಾಂವಿಧಾನಿಕ ವಿಧಿ-ವಿಧಾನಗಳ ಮೂಲಕ ರಾಜ್ಯಪಾಲರು ಕ್ರಮಕೈಗೊಳ್ಳುತ್ತಾರೆ. ಶೀಘ್ರದಲ್ಲಿಯೇ ನೂತನ ಮುಖ್ಯಮಂತ್ರಿಯನ್ನು ರಾಜ್ಯದ ಜನತೆ ಕಾಣಲಿದೆ.

* ಮೇರು ನಟ ಡಾ.ರಾಜ್ ಕುಮಾರ್ ಅಭಿಮಾನಿಗಳನ್ನು ‘’ಅಭಿಮಾನಿ ದೇವರು’’ ಎಂದು ಕರೆಯುತ್ತಿದ್ದರು, ನಾನೊಬ್ಬ ಸಂವಿಧಾನವನ್ನೇ ಧರ್ಮ ಎಂದು ತಿಳಿದುಕೊಂಡಿರುವ ರಾಜಕಾರಣಿ. ನನ್ನ ಪಾಲಿಗೆ ಮತದಾರರು ‘’ಮತದಾರ ದೇವರು". ಆ ದೇವರುಗಳ ಮುಂದೆ ನನ್ನ ಮನದಾಳದ ಕೆಲವು ಮಾತುಗಳನ್ನು ಹಂಚಿಕೊಳ್ಳಬೇಕೆಂದು ಬಯಸಿದ್ದೇನೆ.

* ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿರುವ ನನ್ನ ಬಗ್ಗೆ ರಾಜ್ಯದ ಜನತೆಗೆ ತಿಳಿದಿದೆ. ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಜಾಯಮಾನದವನಲ್ಲ. ಈ ರಾಜೀನಾಮೆ ಪತ್ರವನ್ನು ಕೂಡಾ ಅತ್ಯಂತ ಸಂತೋಷದಿಂದ ಮನಪೂರ್ವಕವಾಗಿ ನೀಡಿದ್ದೇನೆ.

* ಹಳ್ಳಿಗಾಡಿನ ರೈತಾಪಿ ಕುಟುಂಬದಿಂದ ಬಂದ ನಾನು ರಾಜಕಾರಣಕ್ಕೆ ಪ್ರವೇಶ ಮಾಡುವಾಗ ಮುಂದೊಂದು ದಿನ ಶಾಸಕನಾಗುತ್ತೇನೆ, ಸಚಿವನಾಗುತ್ತೇನೆ, ನಾಡಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸನ್ನೂ ಕಂಡವನಲ್ಲ. ಇಂತಹದ್ದೊಂದು ದುಬಾರಿ ಕನಸನ್ನು ನನಸು ಮಾಡಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ. ಈ ಸಂವಿಧಾನದ ಬಲ ಇಲ್ಲದೆ ಹೋಗಿದ್ದರೆ ನಾನು ಎಲ್ಲೋ ಕುರಿ ಮೇಯಿಸಿಕೊಂಡೋ, ಇನ್ನೇನೋ ಆಗಿ ಇರುತ್ತಿದ್ದೆ. ಈ ಕಾರಣಕ್ಕಾಗಿ ಮೊದಲಿಗೆ ನಮ್ಮ ಸಂವಿಧಾನ ಮತ್ತು ಸಂವಿಧಾನದ ಶಿಲ್ಪಿಯಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಈ ಸಂದರ್ಭದಲ್ಲಿ ತಲೆಬಾಗಿ ನಮಿಸುತ್ತೇನೆ.

* ಎರಡನೆಯದಾಗಿ ರಾಜ್ಯದ ಜನತೆ. ಹೆಚ್ಚುಕಡಿಮೆ ನಾಲ್ಕುವರೆ ದಶಕಗಳ ಸುದೀರ್ಘ ರಾಜಕಾರಣದ ಪಯಣದಲ್ಲಿ ಜನ ನನ್ನನ್ನು ಶಾಸಕ, ಸಚಿವ, ಕೊನೆಗೆ ಎರಡುಬಾರಿ ಮುಖ್ಯಮಂತ್ರಿ ಸ್ಥಾನದ ಕಿರೀಟವನ್ನು ನನ್ನ ತಲೆ ಮೇಲೆ ಇಟ್ಟು ಹರಸಿ ಅವರ ಸೇವೆ ಮಾಡುವ ಭಾಗ್ಯವನ್ನು ನನಗೆ ಕರುಣಿಸಿದ್ದಾರೆ. ಆ ಮತದಾರ ದೇವರುಗಳಿಗೆ ನಾನು ಆಭಾರಿಯಾಗಿದ್ದೇನೆ.

* ಮೂರನೆಯದಾಗಿ, ನನ್ನ ಸೈದ್ಧಾಂತಿಕ ಬದ್ಧತೆ ಮತ್ತು ರಾಜಕೀಯ ಹೋರಾಟಕ್ಕೆ ಮನ್ನಣೆ ನೀಡಿದ ಕಾಂಗ್ರೆಸ್‌ ಪಕ್ಷವು ನನ್ನ ಮೇಲೆ ವಿಶ್ವಾಸ ಇರಿಸಿ ನನ್ನನ್ನು ಬರಮಾಡಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಅವಕಾಶನೀಡಿದೆ. ಎರಡು ಬಾರಿ ಮುಖ್ಯಮಂತ್ರಿ ಮಾಡಿದೆ, ವಿರೋಧಪಕ್ಷದ ನಾಯಕನಾಗಿ ಕೆಲಸ ಮಾಡಲು ಅವಕಾಶ ನೀಡಿದೆ. ಆ ಮೂಲಕ ಈ ನಾಡಿನ ಜನತೆಗೆ ನಾನು ನಂಬಿರುವ ತತ್ವಾದರ್ಶಗಳ ಅನುಸಾರ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ಈ ಕಾರಣಕ್ಕಾಗಿ ಶ್ರೀಮತಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಸದಾ ಆಭಾರಿಯಾಗಿರುತ್ತೇನೆ.

* ನಾನೆಂದೂ ರಾಜಕಾರಣವನ್ನು ಅಧಿಕಾರದ ದಂಡ ಎಂದಾಗಲಿ, ವ್ಯಾಪಾರದ ಗಲ್ಲಾ ಪೆಟ್ಟಿಗೆ ಎಂದಾಗಲಿ ತಿಳಿದುಕೊಂಡವನಲ್ಲ, ಅದು ಬಡವರಿಗೆ, ಶೋಷಿತರಿಗೆ, ನೊಂದವರಿಗೆ ನೆರವಾಗುವ ಒಂದು ಅವಕಾಶ ಎಂದು ತಿಳಿದುಕೊಂಡವನು. ಈ ಸಮುದಾಯಗಳಿಗೆ ನೆರವಾಗುವ ಉದ್ದೇಶದಿಂದಲೇ ವಕೀಲನಾಗಿ ಸೇವೆ ಮಾಡುತ್ತಿದ್ದ ನಾನು ರಾಜಕಾರಣವನ್ನು ಪ್ರವೇಶ ಮಾಡಿದವನು.

* ನನ್ನ 77 ವರ್ಷಗಳ ಜೀವನ ಪಯಣದಲ್ಲಿ ಹಲವಾರು ವ್ಯಕ್ತಿಗಳು ಪ್ರೀತಿ-ವಿಶ್ವಾಸದಿಂದ ಕೈಹಿಡಿದು ಮುನ್ನಡೆಸಿದ್ದಾರೆ. ನನ್ನ ಬದುಕು ಒಂದು ತೆರೆದ ಪುಸ್ತಕ. ಈ ಪುಸ್ತಕದಲ್ಲಿ ಮೊದಲ ಬರವಣಿಗೆ ಮಾಡಿದ್ದು ಮರಳಿನ ಮೇಲಿನ ಅಕ್ಷರಾಭ್ಯಾಸದ ಮೂಲಕ ವೀರ ಕುಣಿತವನ್ನು ಕಲಿಯುತ್ತಾ ಸಮಯ ಸಿಕ್ಕಾಗ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡುತ್ತಿದ್ದ ನನ್ನನ್ನು ಶಾಲೆಗೆ ಕರೆದೊಯ್ದು ವಿದ್ಯೆ ಕಲಿಯುವ ಅವಕಾಶ ನೀಡಿದವರು ರಾಜಪ್ಪ ಮಾಸ್ತರ್…

* ವಕೀಲನಾಗಿದ್ದ ನನ್ನಲ್ಲಿನ ಸೇವಾಕಾಂಕ್ಷೆಯನ್ನು ಗುರುತಿಸಿಸಿ ಸಮಾಜವಾದದ ಪಾಠ ಮಾಡಿ, ರಾಜಕಾರಣಿಗಳಿಗೆ ಇರಬೇಕಾದ ಸೈದ್ಧಾಂತಿಕ ಬದ್ಧತೆ, ಜನಪರ ಕಾಳಜಿ ಮತ್ತು ಹೋರಾಟದ ಗುಣವನ್ನು ಕಲಿಸಿದವರು ರೈತನಾಯಕ ಎಂ.ಡಿ.ನಂಜುಂಡಸ್ವಾಮಿ ಅವರು.

* ಮೊದಲ ಬಾರಿ 1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ನನ್ನನ್ನು ಗುರುತಿಸಿ ಕನ್ನಡ ಕಾವಲು ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದಲ್ಲದೆ ಎರಡನೇ ಬಾರಿ ಶಾಸಕನಾದ ನನ್ನನ್ನು ಸಚಿವನನ್ನಾಗಿ ಮಾಡಿದವರು ದಿವಂಗತ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು.

* ಇವರೆಲ್ಲರ ನೆರವು, ಕಾಳಜಿ ಮತ್ತು ಮಾರ್ಗದರ್ಶನಗಳು ಇಲ್ಲದೆ ಹೋಗಿದ್ದರೆ ನಾನು ಇಷ್ಟು ದೂರ ಸಾಗಿ ಬರುತ್ತಿರಲಿಲ್ಲ ಮತ್ತು ಇಷ್ಟು ಎತ್ತರಕ್ಕೆ ಏರಲು ಕೂಡಾ ಆಗುತ್ತಿರಲಿಲ್ಲ ಎನ್ನುವುದನ್ನು ವಿನಮ್ರವಾಗಿ ನಿವೇದಿಸಬಯಸುತ್ತೇನೆ.

* ನಾನು ದುಡ್ಡು, ಆಸ್ತಿಪಾಸ್ತಿ ಮಾಡಲು ರಾಜಕಾರಣಿ ಆದವನಲ್ಲ. ಮತದಾರ ದೇವರುಗಳು ಅಧಿಕಾರದ ಮೂಲಕ ಅವಕಾಶ ನೀಡಿದಾಗೆಲ್ಲ ಅವರ ಕಲ್ಯಾಣಕ್ಕಾಗಿ ಶ್ರಮಿಸಿದ್ದೇನೆ. ಈ ಸಂದರ್ಭದಲ್ಲಿ ನನ್ನ ಸಾಧನೆಗಳ ದಾಖಲೆಗಳನ್ನು ನಾನು ನಿಮ್ಮ ಮುಂದೆ ಇಟ್ಟ ನನ್ನನ್ನು ಸಾಬೀತುಪಡಿಸು ವ್ಯರ್ಥಪ್ರಯತ್ನವನನ್ನು ನಾನು ಮಾಡುವುದಿಲ್ಲ., ಅವೆಲ್ಲವೂ ತೆರೆದ ಪುಸ್ತಕದ ರೀತಿಯಲ್ಲಿ ರಾಜ್ಯದ ಜನತೆಯ ಕಣ್ಣಮುಂದಿದೆ.

* ಜಾತಿ,ದುಡ್ಡು ಮತ್ತು ತೋಳ್ಭಲಗಳ ನೆರವಿಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಹೆಜ್ಜೆ ಇಡಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು ಜನಜನಿತವಾಗಿದೆ. ಇದು ಈ ಕಾಲದ ಸತ್ಯವೂ ಹೌದು. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಭಾತೃತ್ವದಂತಹ ಸಂವಿಧಾನದ ಆಶಯಗಳಿಗೆ ಬದ್ದರಾಗಿ ರಾಜಕಾರಣ ಮಾಡುವುದು ಎಷ್ಟೊಂದು ಕಷ್ಟದ ಕೆಲಸ ಎನ್ನುವ ಅನುಭವ ನಾಲ್ಕುವರೆ ದಶಕಗಳ ರಾಜಕೀಯ ಪಯಣದಲ್ಲಿ ನನಗಾಗಿದೆ.

* ರಾಜಕೀಯ ಪಯಣದ ನನ್ನಹಾದಿಯಲ್ಲಿ ಹೆಜ್ಜೆಹೆಜ್ಜೆಗೂ ನಾನು ಪಟ್ಟಭದ್ರರ ದ್ವೇಷ ಅಸೂಯೆಗೆ ಈಡಾಗಿ‍ದ್ದೇನೆ. ಹೊರಗಿನವರ ಮತ್ತು ಒಳಗಿನವರ ಮೋಸ-ವಂಚನೆ-ಪಿತೂರಿಗೆ ಒಳಗಾಗಿದ್ದೇನೆ. ಇದರಿಂದಾಗಿ ಹಲವಾರು ಬಾರಿ ಬಿದ್ದಿದ್ದೇನೆ, ಬಿದ್ದಲ್ಲಿಂದಲೇ ಎದ್ದಿದ್ದೇನೆ.

* ನಾನು ಮಾತ್ರವಲ್ಲ ನನ್ನ ಕುಟುಂಬ ಕೂಡಾ ರಾಜಕೀಯ ದ್ವೇಷಕ್ಕೆ ಬಲಿಯಾಗಿದೆ, ನನ್ನ ರಾಜಕೀಯ ವಿರೋಧಿಗಳು ರಾಜಕಾರಣಕ್ಕಿಂತ ಬಹುದೂರ ಇದ್ದುಕೊಂಡು ಕುಟುಂಬದ ಪಾಲನೆ-ಪೋಷಣೆಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡ ನನ್ನ ಪತ್ನಿಯ ವಿರುದ್ದವೂ ಸುಳ್ಳು ಆರೋಪಗಳನ್ನು ಮಾಡಿ ಮಾನಸಿಕ ಹಿಂಸೆ ನೀಡಿದ್ದರು. ಇವೆಲ್ಲವನ್ನೂ ಅನುಭವಿಸಿದಾಗ ರಾಜಕೀಯ ಸನ್ಯಾಸ ತೆಗೆದುಕೊಂಡು ಬಿಡುವ ಎನ್ನುವಷ್ಟು ಮನಸ್ಸು ನೊಂದಿತ್ತು. ಆದರೆ ಶತ್ರುಗಳ ದಾಳಿಗೆ ಹೆದರಿ ಪಲಾಯನವಾದಿಯಾಗ ಬೇಡ, ಜನಸೇವೆಯ ಪಥದಿಂದ ಹಿಂದಡಿ ಇಡಬೇಡ, ಎಂದು ನನ್ನ ಅಂತಾರಾತ್ಮ ಎಚ್ಚರಿಸಿತು. ಅನ್ಯಾಯದ ವಿರುದ್ದ ನ್ಯಾಯದ ಹೋರಾಟವನ್ನು ಮುಂದುವರಿಸಿ ಆರೋಪಿತ ಕಳಂಕವನ್ನು ನಿವಾರಿಸಿಕೊಂಡು ನಿರಾಳನಾದೆ.

* ನನ್ನ ನೋವು, ದು:ಖ-ದುಮ್ಮಾನಗಳನ್ನು ಈ ಸಂದರ್ಭದಲ್ಲಿ ಪಟ್ಟಿಮಾಡಿ ನನ್ನ ಮನಸ್ಸನ್ನು ಕಹಿಮಾಡಿಕೊಳ್ಳುವುದಿಲ್ಲ.ಆದರೆ ಈ ಸಂಘರ್ಷದ ಹಾದಿಯಲ್ಲಿ ನಾನೆಂದೂ ನಂಬಿದ ಮೌಲ್ಯಗಳ ಜೊತೆ ರಾಜಿಮಾಡಿಕೊಂಡಿಲ್ಲ. ನಂಬಿದ ಜನತೆಗೆ ದ್ರೋಹ ಬಗೆದಿಲ್ಲ, ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡಿಕೊಂಡಿಲ್ಲ. ಹೋರಾಟವನ್ನೇ ಬದುಕಾಗಿಸಿ ಸ್ವೀಕರಿಸಿ ಇಷ್ಟು ದೂರ ಬಂದಿದ್ದೇನೆ.

* ಇಂದಿನ ವರ್ತಮಾನ ನನ್ನನ್ನು ಎಷ್ಟು ಅರ್ಥಮಾಡಿಕೊಂಡಿದೆಯೋ ಗೊತ್ತಿಲ್ಲ, ಸಾಮಾನ್ಯವಾಗಿ ಸಾಮಾಜಿಕ ಪರಿವರ್ತನೆಯ ಹರಿಕಾರರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ. ಆದರೆ ಇತಿಹಾಸ ಮಾತ್ರ ಅವರನ್ನು ನೆನಪಲ್ಲಿಟ್ಟುಕೊಂಡು ಸ್ಮರಿಸುತ್ತದೆ. ಹನ್ನೆರಡನೇ ಶತಮಾನದ ಬಸವಣ್ಣನವರಿಂದ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್ ವರೆಗೆ ಎಲ್ಲರ ಪಾಲಿನ ಸತ್ಯ ಇದು. ಈ ಭರವಸೆಯ ಆಸರೆಯೊಂದಿಗೆ ನನ್ನ ರಾಜಕೀಯ ಹೋರಾಟವನ್ನು ಮುಂದುವರಿಸಿಕೊಂಡು ಬಂದಿದ್ದೇನೆ, ಅಧಿಕಾರ ಇರಲಿ, ಇಲ್ಲದೆ ಇರಲಿ ಈ ಹೋರಾಟ ಮುಂದುವರಿಯಲಿದೆ.

* ನಾನು ರಾಜಕಾರಣಕ್ಕೆ ಪ್ರವೇಶ ಮಾಡಿದಾಗ ನುಡಿದಂತೆ ನಡೆಯಬೇಕು, ಜನತೆ ಇಟ್ಟಿರುವ ವಿಶ್ವಾಸಕ್ಕೆ ಭಂಗ ಉಂಟು ಮಾಡಬಾರದೆಂಬ ಪ್ರಮಾಣವನ್ನು ಮನಸ್ಸಿನೊಳಗೆ ಮಾಡಿದ್ದೆ. ಜನರಿಗೆ ನೀಡಿದ ವಚನಪಾಲನೆಯೇ ನಿಜವಾದ ರಾಜಧರ್ಮ ಎಂದು ನಂಬಿದವನು ನಾನು. ಅದನ್ನು ತ್ರಿಕರಣಪೂರ್ವಕವಾಗಿ ಪಾಲಿಸಿದ್ದೇನೆ ಎಂಬ ವಿಶ್ವಾಸ ನನಗಿದೆ. ನುಡಿದಂತೆಯೇ ನಡೆದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.

* ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಬದುಕಿನ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗದ ಭಾಗ್ಯ ಲಭಿಸಬೇಕು. ಬಡವ-ಬಲ್ಲಿದನೆಂಬ ಭೇದ ಇಲ್ಲದೆ ಎಲ್ಲರೂ ನಿರ್ಭಯವಾಗಿ ಘನತೆ ಮತ್ತು ಗೌರವರಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಬೇಕು. ಕೃಷಿ ಸಂಪತ್ತು ಬೆಳೆಯಬೇಕು. ಉದ್ಯಮ ಕ್ಷೇತ್ರದಲ್ಲಿ ಪ್ರಗತಿಯಾಗಬೇಕು. ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು. ಮೂಲಸೌಲಭ್ಯಗಳು ವೃದ್ಧಿಯಾಗಬೇಕು. ನೆಮ್ಮದಿಯಿಂದ ಬದುಕುವಷ್ಟು ಆದಾಯ ಪ್ರತಿ ಕುಟುಂಬದ ಪಾಲಿಗಿರಬೇಕು. ಸಂಪತ್ತು, ಅಧಿಕಾರ ಮತ್ತು ಅವಕಾಶ ಸಮಾನವಾಗಿ ಎಲ್ಲರಿಗೂ ಹಂಚಿಕೆಯಾಗಬೇಕು- ಇದು ರಾಜಕೀಯ ಕ್ಷೇತ್ರಕ್ಕೆ ಕಾಲಿಡುವಾಗ ನಾನು ಕಂಡ ಕನಸು.

* ಆ ಕನಸು ನನಸಾಗುವ ದಾರಿಯಲ್ಲಿ ಕರ್ನಾಟಕ ಭರದಿಂದ ಮುನ್ನಡೆದಿದೆ. ಇಂದು ಕರ್ನಾಟಕವು ದೇಶದಲ್ಲಿಯೇ ತಲಾದಾಯದಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಾವು ಮೇಲಕ್ಕೇರುತ್ತಿದ್ದೇವೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಜನತೆಗೆ ಸಾಮಾಜಿಕ ಭದ್ರತೆಯನ್ನು ಒದಗಿಸಿದ್ದೇವೆ. ಹಸಿವುಮುಕ್ತ ಕರ್ನಾಟಕ ನಿರ್ಮಾಣಗೊಳ್ಳುತ್ತಿದೆ, ಅಪೌಷ್ಠಿಕತೆಯಿಂದ ನರಳುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿದಿದೆ, ಆರೋಗ್ಯ ಸೇವೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಅತಿವೃಷ್ಟಿ-ಅನಾವೃಷ್ಟಿಗಳು ಎದುರಾದರೂ ಸಮರ್ಥವಾಗಿ ಎದುರಿಸಿದ್ದೇವೆ, ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನ ಮತ್ತು ಬೆಳೆದ ಬೆಳೆಗೆ ವೈಜ್ಞಾನಿಕವಾದ ಬೆಲೆ ನಿಗದಿಯಿಂದಾಗಿ ಸರ್ಕಾರದ ಬಗ್ಗೆ ರೈತರಲ್ಲಿ ಭರವಸೆ ಮೂಡಿದೆ. ನೀರಿನ ಹಕ್ಕಿನ ರಕ್ಷಣೆಗಾಗಿ ಸರ್ಕಾರ ನಡೆಸುತ್ತಿರುವ ಪ್ರಯತ್ನ ಅವರಿಗೆ ಸಮಾಧಾನ ತಂದಿದೆ. ನೆಲ-ಜಲ-ಭಾಷೆಯ ರಕ್ಷಣೆಯ ವಿಚಾರದಲ್ಲಿ ರಾಜಿ ಇಲ್ಲದ ನಮ್ಮ ನಿಲುವು ಕನ್ನಡಿಗರ ಮನ ಗೆದ್ದಿದೆ.

* ನಾಡಿನ ಇತಿಹಾಸದಲ್ಲಿಯೇ ಅತಿಹೆಚ್ಚು ಬಜೆಟ್‌ಗಳನ್ನು ಮಂಡಿಸುವ ಅವಕಾಶ ಲಭ್ಯವಾಗಿದ್ದರ ಬಗ್ಗೆ ನನಗೆ ತೃಪ್ತಿ ಇದೆ. ನಾನು ಮಂಡಿಸಿದ ಹದಿನೇಳು ಬಜೆಟ್‌ಗಳಲ್ಲಿಯೂ ಸಾಮಾಜಿಕ ನ್ಯಾಯ ಹಾಗೂ ಅಭಿವೃದ್ಧಿಪರವಾದ ಯೋಜನೆಗಳಿಗೆ ಸಮಾನ ಪ್ರಾಶಸ್ತ್ಯವನ್ನು ನೀಡಿದ್ದೇನೆ.

- ನಾಡು ಕಂಡ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂದು ಇತಿಹಾಸದಲ್ಲಿ ದಾಖಲಾಗುವುದಕ್ಕಿಂತ ಹೆಚ್ಚಾಗಿ ನಾಡಿನ ಅಭಿವೃದ್ಧಿಗೆ, ನಾಡಿನ ಜನತೆಯ ಏಳಿಗೆಗೆ ಕಾರಣವಾಗುವಂತಹ ಮಹತ್ವದ ಯೋಜನೆಗಳನ್ನು ನೀಡಿದ ಮುಖ್ಯಮಂತ್ರಿ ನಾನಾಗಬೇಕು ಎನ್ನುವ ಹಂಬಲದಿಂದ ಇಲ್ಲಿಯವರೆಗೆ ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ.

* ಕರ್ನಾಟಕದ ಜನತೆ, ವಿಶೇಷವಾಗಿ ನಾಡಿನ ಮೂಲೆಮೂಲೆಗಳಲ್ಲಿರುವ ದೀನದಲಿತರು, ದಮನಿತರು, ದನಿಯಿಲ್ಲದವರು, ಅಶಕ್ತರು, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ನನ್ನನ್ನು ತಮ್ಮ ದನಿಯಾಗಿಸಿಕೊಂಡಿದ್ದಕ್ಕೆ ನಾನು ಚಿರಋಣಿಯಾಗಿರುತ್ತೇನೆ. ಅವರು ನನ್ನಲ್ಲಿ ತುಂಬಿದ ಶಕ್ತಿಯಿಂದಾಗಿಯೇ ನಾನು ನಾಡಿನ ಜನತೆಯ ಸೇವೆಯನ್ನು ಇಷ್ಟು ದೀರ್ಘಕಾಲ ಮಾಡಲು ಸಾಧ್ಯವಾಗಿದೆ.

* ನನ್ನನ್ನು ನಾಯಕನನ್ನಾಗಿ ಸ್ವೀಕರಿಸಿ ಬೆಂಬಲ ನೀಡಿದ ನನ್ನ ಎಲ್ಲ ಶಾಸಕ ಮಿತ್ರರಿಗೆ, ಸರ್ಕಾರದ ಯಂತ್ರವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಹಕಾರ ನೀಡಿದ ಅಧಿಕಾರಿವರ್ಗಕ್ಕೆ ನಾನು ವಿಶೇಷವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

* ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ, ನಾನು ಚುನಾವಣಾ ರಾಜಕಾರಣದಿಂದ ದೂರ ಸರಿಯಬಹುದು, ಆದರೆ ರಾಜಕೀಯ ಕ್ಷೇತ್ರದಲ್ಲಿರುತ್ತೇನೆ. ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಇಲ್ಲವೆ ಪಕ್ಷ ನೀಡುವ ಕರೆಗೆ ಓಗೊಟ್ಟು ಸಹಕಾರ ನೀಡುತ್ತೇನೆ.

ಮತ್ತೊಮ್ಮೆ ಎಲ್ಲರಿಗೂ ನನ್ನ ಧನ್ಯವಾದಗಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking: ಹವಾಮಾನ ವೈಪರೀತ್ಯ: ಸಿಎಂ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ಜೈಪುರದಲ್ಲಿ ತುರ್ತು ಲ್ಯಾಂಡಿಂಗ್
ರಾಮನಗರ ಜಿಲ್ಲೆಯಿಂದ ಮುಖ್ಯಮಂತ್ರಿಯಾಗಲಿರುವ ಐದನೇ ವ್ಯಕ್ತಿ ಡಿಕೆ ಶಿವಕುಮಾರ್‌!