ಸಿದ್ಧಗಂಗಾ ಕ್ಷೇತ್ರವೆಂದರೆ ಅದೊಂದು ಸಣ್ಣ ಕರ್ನಾಟಕ

By Web Desk  |  First Published Jan 22, 2019, 9:16 AM IST

ಹನ್ನೆರಡನೇ ಶತಮಾನದ ಶರಣರ ದಾಸೋಹ ಪರಿಕಲ್ಪನೆ ಇಲ್ಲಿ ಸಾಕಾರ | ಪರಿಪಕ್ವ ಹೃದಯದ ನಿಜವಾದ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ


ಕರ್ನಾಟಕದ ಇಂದಿನ ಸುಪ್ರಸಿದ್ಧ ಪೀಠಾಧ್ಯಕ್ಷರಲ್ಲಿ ಅತ್ಯಂತ ಹಿರಿಯರಾದ ಸಿದ್ಧಗಂಗಾ ಕ್ಷೇತ್ರದ ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಯವರನ್ನು ನಾನು ಹತ್ತಿರದಿಂದ ಬಲ್ಲೆ ಎಂದು ಹೇಳಿಕೊಳ್ಳುವುದರಲ್ಲಿ ನನಗೊಂದು ಸಕಾರಣ ಹೆಮ್ಮೆ ಇದೆ. ಅವರು ಮಾಡುತ್ತಿರುವ ಕಾರ್ಯಗಳು ಅವರ ಚಿಂತನೆಯ ಹಾದಿ ಇವು ನನ್ನನ್ನು ಚಕಿತಗೊಳಿಸುತ್ತದೆ.

ಎರಡು ವರ್ಷಗಳ ಹಿಂದೆ ಅವರು ಸಿದ್ಧಗಂಗೆಯ ಶ್ರೀಕ್ಷೇತ್ರದ ಅತಿಥಿಗೃಹದಲ್ಲಿ ನನಗೆ ಒಂದು ವಾರ ಇದ್ದು ಭಾಷಿಕ ಬೃಹತ್ ಕರ್ನಾಟಕ ಎಂಬ ಕೃತಿ ರಚನೆಗೆ ಅನುವು ಮಾಡಿಕೊಟ್ಟರು. ಬೆಂಗಳೂರಿನಲ್ಲಿ ನನಗೆ ಆ ಕೃತಿ ರಚನೆಯ ಟಿಪ್ಪಣಿಗಳು ಸಿದ್ಧವಾದರೂ ಕೃತಿ ರಚನೆಗೆ ಇಲ್ಲಿ ಬಿಡುವು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಬೆಳಗಿನಿಂದ ರಾತ್ರಿವರೆಗೆ ಸಿದ್ಧಗಂಗೆಯ ಪ್ರಶಾಂತ ವಾತಾವರಣದಲ್ಲಿ ನನ್ನ ಬರವಣಿಗೆ ಆರಂಭವಾಗಿ ಒಂದು ಹಂತವನ್ನೂ ತಲುಪಿತು. ಅಲ್ಲಿಯವರೆಗೆ ಹೊರಗಿನಿಂದ ಮಾತ್ರ ಅಲ್ಲಿನ ವಿದ್ಯಾರ್ಥಿ ನಿಲಯವನ್ನು ಕಂಡಿದ್ದೆನೇ ಹೊರತು ಒಳ ಆತ್ಮೀಯ ಪರಿಚಯವಾಗಿರಲಿಲ್ಲ. ನಾನೂ ಎಂಟು ವರ್ಷ ದಾವಣಗೆರೆಯ ಉಚಿತ ವಿದ್ಯಾರ್ಥಿ ನಿಲಯದಲ್ಲಿದ್ದು ಓದಿದವನು, ಈ ಬಾರಿ ಅಲ್ಲಿನ ವಿದ್ಯಾರ್ಥಿಗಳ ಜೊತೆ ಸಂಪೂರ್ಣ ಬೆರೆತು ಪಡೆದ ಅನುಭವವೆಂದರೆ, ಸಿದ್ಧಗಂಗಾ ಕ್ಷೇತ್ರವೇ ಒಂದು ಸಂಕ್ಷಿಪ್ತ ಕರ್ನಾಟಕ.

Tap to resize

Latest Videos

undefined

ಕರ್ನಾಟಕದ ಎಲ್ಲೆಡೆಗಳಿಂದ, ವಿಶೇಷವಾಗಿ ಉತ್ತರ ಕರ್ನಾಟಕದಿಂದ ಬಡವರ್ಗದ ಮಕ್ಕಳು ಅಲ್ಲಿದ್ದು, ಉಚಿತ ಊಟ, ಸೌಕರ್ಯ ಪಡೆದು ಓದನ್ನು ಮುಂದುವರಿಸುತ್ತಿದ್ದಾರೆ. ಅವರ ಹಿನ್ನೆಲೆ ಒಂದು ಕಣ್ಣೀರಿನ ಕತೆ. ಅವರ ಕಣ್ಣೀರು ಒರೆಸಿ ಅವರ ಬದುಕಿಗೆ ದಾರಿದೀಪವಾಗಿರುವ ಶ್ರೀಮಠ. ಅದರ ಪ್ರಾಣ ಜೀವಾಳ ಡಾ.ಶಿವಕುಮಾರ ಸ್ವಾಮೀಜಿ. ಇವರ ಕೊಡುಗೆ ಏನು ಎಂಬುದರ ಪ್ರತ್ಯಕ್ಷ ಅರಿವಾಯ್ತು. ಹನ್ನೆರಡನೇ ಶತಮಾತನದ ಶರಣರ ದಾಸೋಹ ಪರಿಕಲ್ಪನೆ ನೆನಪಾಯ್ತು.

‘ದಾಸೋಹಂ’ ಎಂದರೆ ಸಂಸ್ಕೃತದಲ್ಲಿ ನಾನು ದಾಸ ಆಗಿದ್ದೇನೆ ಎಂದರ್ಥ. ಸಂಸ್ಕೃತದಲ್ಲಿ ಅದಕ್ಕಿಂತ ಪ್ರಸಿದ್ಧವಾದ ಉಕ್ತಿ ಎಂದರೆ ಸೋಹಂ (ಸಃ ಅಹಂ) ಎಂದರೆ ನಾನೇ ಆಗಿದ್ದೇನೆ ಎಂದರ್ಥ. ದಾಸೋಹಂ, ಸೋಹಂ ಎಂಬುದು ಆಧ್ಯಾತ್ಮಿಕ ಕ್ಷೇತ್ರದ ಪಾರಿಭಾಷಿಕ ಪದಗಳು, ಸೋಹಂ ಎಂದರೆ ನಾನು ಅವನೇ ಎಂದರೆ ಪರಮಾತ್ಮನೇ ಆಗಿದ್ದೇನೆ ಎಂಬ ಅನುಭವ ಅಭಿವ್ಯಕ್ತಿ. ದಾಸೋಹಂ ಎಂದರೆ ನಾನು ಪರಮಾತ್ಮ ದಾಸನೇ ಆಗಿದ್ದೇನೆ ಎಂದರ್ಥ.

ದಾಸೋಹಂ ಮತ್ತು ಸೋಹಂ ಇವು ಒಬ್ಬ ಆಧ್ಯಾತ್ಮಿಕ ಸಾಧಕನ ಅನುಭವದ ಬೆಳವಣಿಗೆಯ ಸೋಚಕಗಳು ಅಥವಾ ಸಂಕೇತಗಳು. ಆಧ್ಯಾತ್ಮಿಕ ಸಾಧಕನಾದವನು ಆರಂಭದಲ್ಲಿ ತಾನು ಪರಮಾತ್ಮನ ದಾಸ ಸೇವಕ ಎಂಬ ಎಂಬ ಭಕ್ತಿ ಭಾವನೆಯಿಂದ ಪರಮಾತ್ಮನನ್ನು ಆರಾಧಿಸುತ್ತಾನೆ. ಇಂದ್ರಿಯಗಳನ್ನು ನಿಯಂತ್ರಿಸಿ ಪರಮಾತ್ಮನಿಗೆ ತನ್ನನ್ನು ತಾನು ಸಂಪೂರ್ಣವಾಗಿ ಒಪ್ಪಿಸಿಕೊಂಡು ಮುಂದುವರೆಯುವ ಸಾಧಕನಿಗೆ ಕ್ರಮೇಣ ತಾನು ದಾಸ ಸೇವಕ ಎಂಬ ಅನುಭವದಿಂದ ಅಂದರೆ ನಾನೇ ಬೇರೆ, ಭಗವಂತನೇ ಬೇರೆ ಎಂಬ ಅನುಭವದಿಂದ ಭಿನ್ನವಾದ ವಲಯ ಅನುಭವವಾಗುತ್ತದೆ. ಕ್ರಮೇಣ ಆ ಪರಮಾತ್ಮನು ತನ್ನ ಒಳಗೇ ಇದ್ದಾನೆ ಎಂಬ, ಕ್ರಮೇಣ ಅವನೇ ತಾನು ಎಂದೂ ತಾನೂ ಪರಮಾತ್ಮ ಅಭಿನ್ನ ಎಂಬ ಅನುಭವವಾಗುತ್ತದೆ. ದಾಸೋಹಂ ಸ್ಥಿತಿಯು, ಸೋಹಂ ಸ್ಥಿತಿಗೆ ಏರುತ್ತದೆ. ದ್ವೈತ ಸ್ಥಿತಿಯಿಂದ ಆತ್ಮವು ಅದ್ವೈತ ಸ್ಥಿತಿಯನ್ನು ತಲುಪುತ್ತದೆ.

ಶಂಕರಾಚಾರ್ಯರ ಚಿದಾನಂದ ರೂಪಃ ಶಿವೋಹಂ ಶಿವೋಹಂ ಎಂದು ಕೊನೆಯಾಗುವ ಪಾದಗಳುಳ್ಳ ಸಂಸ್ಕೃತ ಗೀತವು ಪ್ರಸಿದ್ಧ. ಶಿವೋಹಂ ಎಂದರೂ ಒಂದೇ, ಸೋಹಂ ಎಂದರೂ ಒಂದೇ. ವೀರಶೈವ ಪರಿಕಲ್ಪನೆಯಲ್ಲಿ ದಾಸೋಹ ಮಾತಿಗೆ ಸ್ವಲ್ಪ ಭಿನ್ನವಾದ ಅರ್ಥ ಲಭ್ಯವಾಗಿದೆ. ಕಾಯಕ ಎಂದರೆ ವ್ಯಾಕ್ತಿ ಕೈಗೊಳ್ಳುವ ಭಕ್ತಿಭಾವ ಮೂಲಕ ವೃತ್ತಿ, ಆಡಳಿತ, ವ್ಯವಸಾಯ, ಮೀನುಗಾರಿಕೆ, ಕ್ಷೌರ, ಚಪ್ಪಲಿ ಹೊಲಿಯುವಿಕೆ ಇತ್ಯಾದಿ ಯಾವುದೇ ವೃತ್ತಿಯನ್ನು ಜೀವನೋಪಾಯಕ್ಕಾಗಿ ಆರಿಸಿಕೊಂಡರೂ ಅವೆಲ್ಲವೂ ಶರಣರ ಪ್ರಕಾರ ತಾತ್ವಿಕವಾಗಿ ಸರಿಸಮಾನವಾದುದು

ವೃತ್ತಿಗಳಲ್ಲಿ ಯಾವುದೂ ಹೆಚ್ಚಲ್ಲ, ಕಡಿಮೆಯಲ್ಲ, ಅದು ಕಾಯಕ ಪರಿಕಲ್ಪನೆಯ ಮುಖ್ಯ ಮುಖ್ಯ ಅಡಿಗಲ್ಲು. ವ್ಯಕ್ತಿ ತಾನು ಮಾಡುವ ಜೂವನೋಪಾಯದ ಯಾವುದೇ ವೃತ್ತಿಯನ್ನು ಶ್ರದ್ಧೆಯಿಂದ ಶ್ರಮವಹಿಸಿ ಮಾಡುತ್ತಾ ಆವೃತ್ತಿಯು ತನ್ನ ಸಾಧನೆಯ ಮಾರ್ಗ, ಭಗವಂತನತ್ತ ಸಾಗುವ ಒಂದು ಪಥ ಎಂದೇ ಪರಿಭಾವಿಸಬೇಕು. ಆ ವೃತ್ತಿಯಿಂದ ಬರುವ ಆದಾಯವು ಅವನ ಮತ್ತು ಅವನ ಕುಟುಂಬದ ನಿರ್ವಹಣೆಗಾದರೂ ಆ ಆದಾಯದ ಒಂದು ಭಾಗವನ್ನು ತಾನು ಬದುಕುತ್ತಿರುವ ಸಮಾಜದ ಜನರ ಜೊತೆ ಹಂಚಿಕೊಳ್ಳಬೇಕು. ಇದು ಕಾಯಕ ಪರಿಕಲ್ಪನೆಯ ಒಂದು ಮುಖ್ಯ ಆಯಾಮ.

ಹಾಗೆ ಸಂಪತ್ತನ್ನು ಹಂಚಿಕೊಳ್ಳುವ ಒಂದು ವಿಧಾನವೆಂದರೆ ಸಾಮೂಹಿಕವಾಗಿ ಸಾಮಾನ್ಯ ಬಡಜನರಿಗೆ ಭೋಜನ ವ್ಯವಸ್ಥೆ ಮಾಡುವುದು, ಆ ಭೋಜನ ಪೂಜೆ, ಜಪ, ಸ್ತೋತ್ರ ಇವುಗಳ ಹಿನ್ನೆಲೆಯಲ್ಲಿ ನಡೆಯುತ್ತದೆ. ಅದೇ ದಾಸೋಹ. ಆ ದಾಸೋಹ ಮಾತಿಗೆ ಆದಾಯವನ್ನು ಗಳಿಸಿರುವ ವ್ಯಕ್ತಿಯೊಬ್ಬ ಶ್ರದ್ಧೆಯಿಂದ ವ್ಯವಸ್ಥೆ ಮಾಡುವ ಸಾಮೂಹಿತ ಭೋಜನ ವ್ಯವಸ್ಥೆ ಎಂಬರ್ಥ ಬಂದಿದೆ.

ದಾಸೋಹ ಒಂದು ರೀತ್ಯಲ್ಲಿ ಹಣವಂತರು ಸಾಮಾನ್ಯರಿಗೆ ವ್ಯವಸ್ಥೆ ಮಡುವ ಸಾಮೂಹಿಕ ಊಟವಾದರೂ ಅದು ಶ್ರೀಮಂತರು ಬಡವರಿಗೆ ನೀಡುವ ದಾನ ಅಲ್ಲ, ದಾಸೋಹಕ್ಕೂ ದಾನಕ್ಕೂ ಇರುವ ಮುಖ್ಯ ವ್ಯತ್ಯಾಸವನ್ನು ಗಮನಿಸಿ. ದಾನ ಕ್ರಿಯೆಯಲ್ಲಿ ಎರಡು ಪಾತ್ರಗಳಿವೆ. ಒಬ್ಬ ಶ್ರೀಮಂತ. ಅವನದು ನೀಡುವ ಕೈ. ಇನ್ನೊಬ್ಬ ಬಡವ ಅಥವಾ ಸಾಮಾನ್ಯ. ಅವನದು ಚಾಚುವ ಕೈ. ಕೊಡುವ ಕೈಗೆ ತಾನು ಕೊಡುವುದು ಎಂಬ ಅಹಂಕಾರವಿದ್ದರೆ ಬೇಡುವ ಕೈಗೆ ತಾನು ಬಡವ ಕೆಳಗಿನದು ಎಂಬ ಕೀಳರಿಮೆ ಇರುತ್ತದೆ. ಒಬ್ಬ ದಾನಿ, ಇನ್ನೊಬ್ಬ ಯಾಚಕ

ದಾಸೋಹ ಕ್ರಿಯೆಯಲ್ಲೂ ಕೊಡುವ ಕೈ, ಸ್ವೀಕರಿಸುವ ಕೈ ಇದ್ದರೂ ಆ ಕೈಗಳು ತಮ್ಮ ಪಾತ್ರವನ್ನು ಬದಲಿಸುತ್ತದೆ. ಕೊಡುವ ಕೈ ತಾನು ಯಜಮಾನ ಎಂದು ಭಾವಿಸಿದರೆ ತಾನು ಕೊಡಲಿರುವ ವ್ಯಕ್ತಿಯ ದಾಸ ಎಂದೇ ಭಾವಿಸುತ್ತದೆ. ದಾಸೋಹ ನಡೆಸುವಾತ ಶ್ರೀಮಂತನಾದರೂ ತಾನು ದಾಸೋಹ ಅಥವಾ ಅನ್ನ ದಾನವನ್ನು ಸ್ವೀಕರಿಸಲು ಬಂದಿರುವ ವ್ಯಕ್ತಿಗಳ ದಾಸ ಎಂದು ಎಂದೇ ಭಾವಿಸುತ್ತಾನೆ. ತಾನು ಸಾಮಾನ್ಯರಿಗೆ ಸಹಾಯ ಮಾಡುತ್ತಿಲ್ಲ, ಅವರು ತಾನು ನೀಡುವ ಸಹಾಯವನ್ನು ಸ್ವೀಕರಿಸುವ ಕೃಪೆ ತೋರಿದ್ದಾರೆ ಎದೇ ಆತ ಭಾವಿಸುತ್ತಾನೆ. ಅಲ್ಲಿ ಯಜಮಾನನು ದಾಸನಾಗುತ್ತಾನೆ. ದಾಸನು ಯಜಮಾನನಾಗುತ್ತಾನೆ ಇದು ದಾಸೋಹದ ನಿವಜಾದ ಪರಿಕಲ್ಪನೆ.

ಸಿದ್ಧಗಂಗೆಯನ್ನು ಒಮ್ಮೆ ನೋಡಿ. ಬಂದವರಿಗೆ ಒಂದು ಮರೆಯದ ಅನುಭವವೆಂದರೆ, ಅಲ್ಲಿಗೆ ಬಂದವರಿಗೆಲ್ಲಾ ಊಟ ಹಾಕಲಾಗುತ್ತದೆ. ದಿನವೂ ಅಲ್ಲಿ ಅವಕಾಶ ಪಡೆದಿರುವ ಕನಿಷ್ಠ ಒಂಬತ್ತು ಸಾವಿರ ಬಡ ವಿದ್ಯಾರ್ಥಿಗಳಿಗೆ ಆಹಾರ ನೀಡಲಾಗುತ್ತದೆ. ಅದು ನಿಜವಾದ ದಾಸೋಹವಲ್ಲದೇ ಮತ್ತೇನು? ಪೂಜ್ಯ ಶಿವಕುಮಾರ ಸ್ವಾಮಿಯವರು ಯುವ ಅಥವಾ ಮಧ್ಯವಯಸ್ಕರಾಗಿದ್ದಾಗ ಮಠದ ಹೊಲದಲ್ಲಿ ಸ್ವತಃ ಉಳುಮೆ ಮಾಡುತ್ತಿದ್ದನ್ನು, ಹಳ್ಳಿಹಳ್ಳಿಗೆ ಹೋಗಿ ಜನರಿಂದ ಧಾನ್ಯ ದವಸಗಳನ್ನು ಪಡೆದು ಅನ್ನಸಂತರ್ಪಣೆ ನಡೆಸುತ್ತಿದ್ದನ್ನು ಜನರು ನೆನಪಿಸಿಕೊಳ್ಳುತ್ತಾರೆ.

 

ಅವರದು ಶ್ರಮಪೂರ್ವಕ ಕಾಯಕವಾಗಿತ್ತು. ಅವರಿಗೆ ತಾವು ಅಂತಹ ಒಂದು ಆಹಾರ ನೀಡುವ ದೊಡ್ಡ ಕೇಂದ್ರದ ಯಜಮಾನರು ಎಂಬ ಭಾವನೆ ಬರಲು ಸಾಧ್ಯವೆ ಇಲ್ಲ. ಅದೊಂದು ಸೇವೆ, ಭಗವಂತನ ಉಪಾಸನಾ ವಿಧಾನ, ಅಪೂರ್ವ ಅವಕಾಶ, ಬದುಕಿನ ಗುರಿ ಎಂದೇ ಸಹಜ ವಿನೀತ ಭಾವದಿಂದ ಪರಿಭಾವಿಸುತ್ತಾರೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಜೀವ ಅದು. ಪರಿಪಕ್ವ ಹೃದಯದ ನಿಜವಾದ ದಾಸೋಹಿ ಎಂದರೆ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ. ಅವರು ದಾಸೋಹ ಪರಿಕಲ್ಪನೆಯ ನಿಜವಾದ ಸಂಕೇತವೇ ಹೌದು. ಅಂತೆಯೇ ಕಾಯಕ ಯೋಗದ ಸಾಕಾರ ಸ್ವರೂಪ, ಎಲ್ಲವನ್ನೂ ತೊರೆದು ಸನ್ಯಾಸಿಗಳಾಗಿ ಸನ್ಯಾಸ ಜೀವನದ ಸಾಧಕ ಜೀವನ ನಡೆಸುತ್ತಾ ಲಕ್ಷಾಂತರ ಸಂಸಾರಗಳನ್ನು ಮೇಲಕ್ಕೆ ಎತ್ತಿ ನಿಲ್ಲಿಸಿದ್ದಾರೆ. ಅವರು ನಾಲ್ಕು ಗೋಡೆಗಳ ಮಧ್ಯದ ಸಂಸಾರ ಜೀವನವನ್ನು ತ್ಯಜಿಸಿದ್ದರೂ ಇಡೀ ವಿಶ್ವವೇ ಅವರ ಕುಟುಂಬವಾಗಿದೆ. ಭಾರತದಲ್ಲಿ ಸಿದ್ಧಗಂಗೆಗೆ ಸಮಾನವಾದ ಕ್ಷೇತ್ರ ಸಿದ್ಧಗಂಗೆಯೇ, ಶಿವಕುಮಾರ ಸ್ವಾಮೀಜಿಯವರಿಗೆ ಸಂವಾದಿ ಎನ್ನಿಸುವವರು ಅವರಷ್ಟೇ.

ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರು ಕನ್ನಡಪ್ರಭಕ್ಕಾಗಿ ಈ ಹಿಂದೆ ಬರೆದಿದ್ದ ಪ್ರಕಟಿತ ಲೇಖನದ ಆಯ್ದಭಾಗ.

click me!