ಲಂಚ ಹಣದಿಂದ ಸಮಾಜ ಒಡೆವ ಯತ್ನ| ಕಾಂಗ್ರೆಸಿಗರ ವಿರುದ್ಧ ಕಾಂಗ್ರೆಸ್ ನಾಯಕ ವಾಗ್ದಾಳಿ
ದಾವಣಗೆರೆ[ಜ.13]: ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿ ಕಾಂಗ್ರೆಸ್ ನಾಯಕರ ವಿರುದ್ಧ ಪಕ್ಷದ ಹಿರಿಯ ಮುಖಂಡ ಶಾಮನೂರು ಶಿವಶಂಕರ್ ಮತ್ತೆ ಬಹಿರಂಗವಾಗಿಯೇ ಮಾತಿನ ಚಾಟಿ ಬೀಸಿದ್ದಾರೆ. ಕೆಲವರು ಲಂಚ, ಬೇನಾಮಿ ಹಣದಿಂದ ಒಗ್ಗಟ್ಟಾಗಿರುವ ವೀರಶೈವ-ಲಿಂಗಾಯತ ಸಮಾಜವನ್ನು ಒಡೆಯುವ ಕೆಲಸ ಮಾಡಿದರು ಎಂದು ಆರೋಪಿಸಿದ್ದಾರೆ.
ನಗರದಲ್ಲಿ ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್‌ನಿಂದ ಶನಿವಾರ ನಡೆದ ವೀರಶೈವ ಲಿಂಗಾಯತ ಧರ್ಮೋತ್ತೇಜನ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಮನೂರು ಈ ರೀತಿ ಆರೋಪಿಸಿದರು.
ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಭಾವನೆ ಎಲ್ಲರಲ್ಲಿತ್ತು. ಆದರೆ ಕೆಲವರು ಲಂಚ, ಬೇನಾಮಿಯಾಗಿ ಬಂದ ಹಣವನ್ನು ಬಳಸಿಕೊಂಡು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕಷ್ಟದಿಂದ ದುಡಿದ ಹಣವಾಗಿದ್ದರೆ ಅವರಿಗೆ ಅರ್ಥ ಆಗುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಬಿಪಿ ವಿರುದ್ಧ ಕಿಡಿ:
ಇದೇ ವೇಳೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿ ನಾಯಕ, ಗೃಹ ಸಚಿವರೂ ಆದ ಎಂ.ಬಿ.ಪಾಟೀಲ ವಿರುದ್ಧ ನೇರವಾಗಿಯೇ ಶಾಮನೂರು ಶಿವಶಂಕರಪ್ಪ ಕಿಡಿಕಾರಿದರು. ವೀರಶೈವ-ಲಿಂಗಾಯತ ಸಮಾಜ ಸಂಘರ್ಷ ಸಮಯದಲ್ಲಿ ಎಂ.ಬಿ.ಪಾಟೀಲ್ ನನ್ನನ್ನು ‘ಮುದಿ ಎತ್ತು’ ಎಂದಿದ್ದರು, ಆದರೆ ಇದೇ ‘ಮುದಿ ಎತ್ತು’ ಚುನಾವಣಾ ಸಮಯದಲ್ಲಿ ಗೆದ್ದಿದೆ. ನನ್ನನ್ನು ಹೀಯಾಳಿಸಿದ ಮಾಜಿ ಸಚಿವ ವಿನಯ್ ಕುಲಕರ್ಣಿ ಸೋತಿದ್ದಾರೆ. ಎಂ.ಬಿ.ಪಾಟೀಲ ಅವರು ನೂರಾರು ಕೋಟಿ ಹಣ ಚೆಲ್ಲಿ ಗೆದ್ದಿದ್ದಾರಷ್ಟೆ ಎಂದು ಏಕವಚನದಲ್ಲೇ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸಿದ ನಾಯಕರ ವಿರುದ್ಧ ಶಾಮನೂರು ಅಸಮಾಧಾನ ವ್ಯಕ್ತಪಡಿಸಿದರು.
ಮೊದಲಿನಿಂದಲೂ ವೀರಶೈವ-ಲಿಂಗಾಯತ ಒಂದೇ ಎಂದು ಹೇಳಿದವರಿಗೆ ಇತ್ತೀಚೆಗೆ ಜ್ಞಾನೋದಯವಾಗಿ ಲಿಂಗಾಯತ ಧರ್ಮಕ್ಕಾಗಿ ಹೋರಾಟಕ್ಕಿಳಿದಿದ್ದಾರೆ. ಈ ಮೂಲಕ ಸಮಾಜದ ಒಗ್ಗಟ್ಟನ್ನು ಮುರಿಯಲು ಯತ್ನಿಸಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಯ ಪ್ರಸ್ತಾಪವನ್ನು ಕೇಂದ್ರ ತಿರಸ್ಕರಿಸಿದ್ದರೂ ಇದೀಗ ಮತ್ತೆ ಹೋರಾಟಕ್ಕೆ ಇಳಿಯುತ್ತೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಒಂದೇ ನಾಣ್ಯದ ಎರಡು ಮುಖಗಳಂತಿರುವ ವೀರಶೈವ-ಲಿಂಗಾಯತದ ಎಲ್ಲಾ ಒಳಪಂಗಡಗಳು ಒಂದಾಗಬೇಕಿದೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ ಎಂದರು.
ಬಿಎಸ್‌ವೈ ಕುರಿತು ಮೆಚ್ಚುಗೆ:
ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ನಿಲುವಿಗೆ ಈಗಲೂ ನಾನು ಬದ್ಧನಾಗಿದ್ದು, ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಇದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೀರಶೈವ ಮಹಾಸಭಾದ ನಿಲುವಿಗೆ ಸದಾ ಬೆನ್ನೆಲುಬಾಗಿ ನಿಂತಿದ್ದು ನಮ್ಮ ಆತ್ಮಸ್ಥೈರ್ಯ ಹೆಚ್ಚಿಸಿದೆ ಎಂದು ಇದೇ ವೇಳೆ ಶಾಮನೂರು ಹೇಳಿದರು.