
ಬೆಂಗಳೂರು(ಮಾ.20): ಮಾಜಿ ಸಚಿವರ ಲೈಂಗಿಕ ಹಗರಣದ ಸಂಬಂಧ ಹೊರ ರಾಜ್ಯಗಳಲ್ಲಿ ಅವಿತುಕೊಂಡು ವಿಡಿಯೋ ಹೇಳಿಕೆ ಮೂಲಕ ಸಂಚಲನ ಮೂಡಿಸುತ್ತಿರುವ ಸಿ.ಡಿ. ಸ್ಫೋಟದ ಸೂತ್ರಧಾರರ ‘ಶಿಕಾರಿ’ಗೆ ವಿಶೇಷ ತನಿಖಾ ದಳವು (ಎಸ್‌ಐಟಿ) ಇದೀಗ ‘ಆಪರೇಷನ್ ಗೌರಿ’ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಎಸ್‌ಐಟಿಯಲ್ಲಿ ಕಾರ್ಯನಿರ್ವಹಿಸಿದ್ದ ಪೊಲೀಸರನ್ನು ಮಾಜಿ ಸಚಿವರ ಲೈಂಗಿಕ ಹಗರಣದ ತನಿಖೆಯಲ್ಲಿ ಬಳಸಿಕೊಳ್ಳಲು ಎಸ್‌ಐಟಿ ಮುಖ್ಯಸ್ಥ ಹಾಗೂ ಹೆಚ್ಚುವರಿ ಆಯುಕ್ತ ಸೌಮೇಂದು ಮುಖರ್ಜಿ ನಿರ್ಧರಿಸಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಸೇರಿದಂತೆ ಕೆಲವು ಅಧಿಕಾರಿಗಳು ಹೊಸದಾಗಿ ಎಸ್‌ಐಟಿ ಸೇರಿಕೊಂಡಿದ್ದಾರೆ.
ಸಿ.ಡಿ. ಸ್ಫೋಟದ ಬಳಿಕ ತಲೆಮರೆಸಿಕೊಂಡು ಅಜ್ಞಾತ ಸ್ಥಳದಿಂದ ವಿವಾದಿತ ಯುವತಿ ಹಾಗೂ ಇಬ್ಬರು ಪತ್ರಕರ್ತರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಎಸ್‌ಐಟಿ, ಈಗ ತನ್ನ ಕಾರ್ಯಾಚರಣೆಯ ತಂತ್ರಗಾರಿಕೆಯನ್ನು ಬದಲಾಯಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಮೊದಲು ಸೌಮೇಂದು ಮುಖರ್ಜಿ ನೇತೃತ್ವದ ಎಸ್‌ಐಟಿಗೆ ಜಂಟಿ ಆಯುಕ್ತರು, ಇಬ್ಬರು ಡಿಸಿಪಿಗಳು ಸೇರಿದಂತೆ 7 ಅಧಿಕಾರಿಗಳನ್ನು ಆಯುಕ್ತ ಕಮಲ್ ಪಂತ್ ನಿಯೋಜಿಸಿದ್ದರು. ಪ್ರಕರಣದಲ್ಲಿ ಸಿ.ಡಿ. ಸ್ಫೋಟದ ಜಾಲವನ್ನು ಶೋಧಿಸುತ್ತಿದ್ದಂತೆಯೇ ಅದರ ಕಬಂಧ ಬಾಹುಗಳು ನಿಗೂಢವಾಗುತ್ತಿವೆ. ಇನ್ನೊಂದೆಡೆ ಆರೋಪಿಗಳು ಹಾಗೂ ಯುವತಿ ಕೂಡ ಭೂಗತರಾಗಿದ್ದಾರೆ. ಹೀಗಾಗಿ ಈ ಹಿಂದೆ ಎಸ್‌ಐಟಿಯಲ್ಲಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆಗೆ ಹೆಚ್ಚುವರಿ ಆಯುಕ್ತರು ಕೋರಿದ್ದರು. ಈ ಮನವಿಗೆ ಮೇರೆಗೆ ಡಿಸಿಪಿ ಹರೀಶ್ ಪಾಡೆ, ಮೂವರು ಎಸಿಪಿಗಳು, 10ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 30 ಜನರು ಎಸ್‌ಟಿಗೆ ಸೇರ್ಪಡೆಗೊಂಡಿದ್ದಾರೆ.
ಪ್ರತ್ಯೇಕ ಕಾರ್ಯಾಚರಣೆ, ಒಂದೊಂದು ಹೊಣೆ:
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲೂ ಕೂಡ ಹಂತಕರ ಜಾಡು ಪತ್ತೆಯಾಗದೆ ಎಸ್‌ಐಟಿಗೆ ಸವಾಲಾಗಿ ಪರಿಣಮಿಸಿತ್ತು. ಆಗ ‘ಬೇಸಿಕ್ ಪೊಲೀಸಿಂಗ್’ ಜೊತೆ ತಂತ್ರಜ್ಞಾನ ಆಧರಿಸಿ ಕಾರ್ಯಾಚರಣೆಗಿಳಿದು ಎಸ್‌ಐಟಿ ಯಶಸ್ಸು ಕಂಡಿತ್ತು. ಅದೇ ಸೂತ್ರವನ್ನು ಮಾಜಿ ಸಚಿವರ ಲೈಂಗಿಕ ಹಗರಣದಲ್ಲೂ ಅನುಸರಿಸಲಾಗುತ್ತದೆ.
ಎಸ್‌ಐಟಿಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪ್ರತ್ಯೇಕ ಉಪ ತಂಡಗಳಾಗಿ ವಿಭಜಿಸಿ ಪ್ರತಿಯೊಂದು ತಂಡಕ್ಕೂ ಪ್ರತ್ಯೇಕ ಕೆಲಸ ಹಂಚಿಕೆ ಮಾಡಲಾಗಿದೆ. ಮೊಬೈಲ್ ಕರೆಗಳ ವಿಶ್ಲೇಷಣೆಯಲ್ಲಿ ನುರಿತ ತಜ್ಞರಾಗಿರುವ ಸೈಬರ್ ಇನ್ಸ್‌ಪೆಕ್ಟರ್ ಪ್ರಶಾಂತ್ ಬಾಬು ಅವರಿಗೆ ಮೊಬೈಲ್ ಕರೆಗಳ ಪರಿಶೀಲನೆ, ಪ್ರಕರಣದ ತನಿಖಾಧಿಕಾರಿಯಾಗಿ ಎಸಿಪಿ ಎಚ್.ಎನ್.ಧರ್ಮೇಂದ್ರ, ಎಸಿಪಿ ನಾಗರಾಜ್ ಅವರಿಗೆ ಆರೋಪಿಗಳ ಮನೆಗಳ ಶೋಧದ ಜವಾಬ್ದಾರಿ ನೀಡಲಾಗಿದೆ. ಸಿಸಿಬಿ ಇನ್ಸ್‌ಪೆಕ್ಟರ್‌ಗಳನ್ನು ಹೊರ ರಾಜ್ಯಗಳ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಡಿಸಿಪಿಗಳಾದ ಎಂ.ಎನ್.ಅನುಚೇತ್ ಹಾಗೂ ಹರೀಶ್ ಪಾಂಡೆ ಅವರಿಗೆ ತನಿಖೆ ಉಸ್ತುವಾರಿ ಕೊಡಲಾಗಿದ್ದು, ಡಿಸಿಪಿ ರವಿಕುಮಾರ್ ಅವರಿಗೆ ಆರೋಪಿಗಳ ಕಾರ್ಯಾಚರಣೆ ಪ್ರಭಾರ ಹಂಚಿಕೆಯಾಗಿದೆ.
ಪ್ರತಿ ದಿನ ಸಂಜೆ ಎಸ್‌ಐಟಿ ಮುಖ್ಯಸ್ಥರು ಸಭೆ ನಡೆಸಿ ಮಾಹಿತಿ ಪಡೆಯಲಿದ್ದಾರೆ. ಅದರಲ್ಲಿ ಎಲ್ಲ ತಂಡಗಳನ್ನು ಸಂಗ್ರಹಿಸಿರುವ ಮಾಹಿತಿ ಕ್ರೋಢೀಕರಿಸಿ ಮುಂದಿನ ಕಾರ್ಯಾಚರಣೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ