ಬಂಧಮುಕ್ತ ಕೈದಿಗಳಿಗೂ ಕ್ವಾರಂಟೈನ್ ಕಡ್ಡಾಯ | ಜೈಲಿಂದ ಬಂದ ಬಳಿಕ 14 ದಿನ ‘ಗೃಹಬಂಧನ’ | ಹೈಕೋರ್ಟ್ ನಿರ್ದೇಶನದಂತೆ ಕ್ರಮ
ಬೆಂಗಳೂರು (ಮೇ. 18): ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾದ ವಿಚಾರಣಾಧೀನ ಕೈದಿಗಳು ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ಗೆ (ಮನೆಯಲ್ಲೇ ಏಕಾಂತವಾಸಕ್ಕೆ) ಒಳಗಾಗಬೇಕೆಂದು ಹೈಕೋರ್ಟ್ ಷರತ್ತು ವಿಧಿಸಿದೆ.
ಕೋವಿಡ್-19 ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಜಾಮೀನು ಮಂಜೂರು ಮಾಡಿದ ಪ್ರಕರಣಗಳಲ್ಲಿ 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ಗೆ ಒಳಗಾಗಬೇಕೆಂದು ಕೈದಿಗಳಿಗೆ ಷರತ್ತು ವಿಧಿಸಿದೆ.
undefined
ಮತ್ತೊಂದೆಡೆ ಕೈದಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರವೇ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಜೈಲು ಪ್ರಾಧಿಕಾರಗಳಿಗೆ ನಿರ್ದೇಶಿಸಿದೆ. ಇದರಿಂದ ನ್ಯಾಯಾಂಗ ಬಂಧನದಿಂದ (ಜೈಲುವಾಸ) ಮುಕ್ತಿ ಪಡೆದರೂ ಕೈದಿಗಳು 14 ದಿನ ‘ಗೃಹ ಬಂಧನ’ ಅನುಭವಿಸಬೇಕಾಗಿದೆ.
ಮಾರಕ ಕೊರೋನಾ ಭೀತಿ: ಕ್ವಾರಂಟೈನ್ ಕೇಂದ್ರಗಳು ಅದೆಷ್ಟು ಸುರಕ್ಷಿತ..?
ಸಾಮಾನ್ಯವಾಗಿ ಜಾಮೀನು ನೀಡಿದ ಸಂದರ್ಭದಲ್ಲಿ ಒಂದಷ್ಟುಮೊತ್ತಕ್ಕೆ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ವ್ಯಕ್ತಿಗಳ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯಾಧಾರ ತಿರುಚುವ ಅಥವಾ ನಾಶಯಪಡಿಸುವುದಕ್ಕೆ ಪ್ರಯತ್ನಿಸಬಾರದು. ತನಿಖೆಗೆ ಸಹಕರಿಸಬೇಕು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ನ್ಯಾಯಾಲಯಗಳು ಆರೋಪಿಗಳಿಗೆ ಷರತ್ತು ವಿಧಿಸುತ್ತವೆ.
ಸದ್ಯ ಕೊರೋನಾ ವೈರಸ್‌ನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಜೈಲಿನಿಂದ ಬಿಡುಗಡೆಯಾದ ವಿಚಾರಣಾಧೀನ ಕೈದಿಗಳಿಗೆ ಕೊರೋನಾ ಸೋಂಕು ಇದ್ದರೆ ಅವರಿಂದ ಮತ್ತೊಬ್ಬರಿಗೆ ಹರಡದಿರಲಿ ಎಂಬ ಉದ್ದೇಶದಿಂದ ಜಾಮೀನು ಮೇಲೆ ಜೈಲಿನಿಂದ ಬಿಡುಗಡೆಯಾದ ಕೂಡಲೇ ಸೂಕ್ತ ವೈದ್ಯಾಧಿಕಾರಿ ಬಳಿ ವೈದ್ಯಕೀಯ ತಪಾಸಣೆ ಮಾಡಿಕೊಳ್ಳಬೇಕು. ಅಲ್ಲದೇ ಕೊರೋನಾ ಸೋಂಕಿಲ್ಲದೆ ಇದ್ದರೆ ಜೈಲಿನಿಂದ ಬಿಡುಗಡೆಯಾದ ದಿನದಿಂದ 14 ದಿನಗಳ ಕಾಲ ಸ್ವತಃ ಕೈದಿಯೇ ಹೋಂ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಹೈಕೋರ್ಟ್ ಷರತ್ತು ವಿಧಿಸಿದೆ.
ಕಳೆದ ಎರಡು ವಾರದಲ್ಲಿ ಸುಮಾರು 11 ಪ್ರಕರಣಗಳಲ್ಲಿ 19 ಮಂದಿ ಕೈದಿಗಳಿಗೆ ಜಾಮೀನು ನೀಡಿದ ಹೈಕೋರ್ಟ್, ಜೈಲಿನಿಂದ ಬಿಡುಗಡೆಯಾದ ಕೂಡಲೇ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು. ಕೊರೋನಾ ಸೋಂಕು ಇಲ್ಲವಾದರೆ 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ನಲ್ಲಿರಬೇಕು ಷರತ್ತು ವಿಧಿಸಿದೆ. ಆದರೆ 10ಕ್ಕೂ ಹೆಚ್ಚು ಪ್ರಕರಣಗಳಲ್ಲಿನ 15 ಜನರಿಗೆ ಜಾಮೀನು ನೀಡಿದಾಗ, ಕೈದಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕೊರೋನಾ ಸೋಂಕು ಇಲ್ಲದಿರುವುದನ್ನು ದೃಢಪಡಿಸಿಕೊಂಡ ನಂತರವೇ ಜೈಲಿನಿಂದ ಬಿಡುಗಡೆ ಮಾಡುವಂತೆ ಜೈಲಾಧಿಕಾರಿಗಳಿಗೆ ಆದೇಶಿಸಿದೆ.
ಮಲೆನಾಡಿಗೆ ಮುಂಬೈ ಸಂಪರ್ಕ ಅತಿ ದೊಡ್ಡ ಕಂಟಕ
600 ಕೈದಿಗಳು ಬಂಧಮುಕ್ತ
ಕೈದಿಗಳಿಗೆ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯುವ ಹಿನ್ನೆಲೆಯಲ್ಲಿ ಹೈಕೋರ್ಟ್ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆ ಮೇರೆಗೆ ರಾಜ್ಯದ ವಿಚಾರಣಾ ನ್ಯಾಯಾಲಯಗಳು ವಿವಿಧ ಕಾರಾಗೃಹಗಳಲ್ಲಿ ಬಂಧಿಯಾಗಿದ್ದ 600ಕ್ಕೂ ವಿಚಾರಣಾಧೀನ ಕೈದಿಗಳಿಗೆ ಮಧ್ಯಂತರ ಜಾಮೀನು ಹಾಗೂ ಸಜಾ ಬಂಧಿಗಳಿಗೆ ಪರೋಲ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.