ನಾನು ಕೇಸರಿ ಶಾಲು ಹಾಕೊಲ್ಲ, ಕುಮಾರಸ್ವಾಮಿನೂ ಹಾಕಬಾರದಿತ್ತು ಎಂಬ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮಾಜಿ ಸಚಿವ ಸಿಟಿ ರವಿ ಅವರು ಕೇಸರಿ ಶಾಲು ಹಾಕೋದಕ್ಕೆ ಸಂಕೋಚ ಅಲ್ಲ, ಹೆಮ್ಮೆ ಪಡಬೇಕು ಎಂದಿದ್ದಾರೆ.
ಹಾಸನ (ಫೆ.3): 'ಕೇಸರಿ ನಮ್ಮೆಲ್ಲರಿಗೂ ಪ್ರೇರಣೆ ಕೊಟ್ಟಿರೋ ಬಣ್ಣ. ಅದು ಬರೀ ಬಣ್ಣ ಮಾತ್ರ ಅಲ್ಲ, ಸಾವಿರ ವರ್ಷಗಳ ಪರಂಪರೆ ಅದಕ್ಕಿದೆ ಎಂದು ಬಿಜೆಪಿ ಮಾಜಿ ಸಚಿವ ಸಿಟಿ ರವಿ ತಿಳಿಸಿದರು.
ನಾನು ಕೇಸರಿ ಶಾಲು ಹಾಕೊಲ್ಲ, ಕುಮಾರಸ್ವಾಮಿನೂ ಹಾಕಬಾರದಿತ್ತು ಎಂಬ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಹೇಳಿಕೆ ಸಂಬಂಧ ಹಾಸನದಲ್ಲಿ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಟಿ ರವಿ, ಅವರ ಪಾರ್ಟಿ ಬಗ್ಗೆ ನಾವು ಕಮೆಂಟ್ಸ್ ಮಾಡಲು ಬರೊಲ್ಲ. ಆದರೆ ಒಂದು ಮಾತು ಹೇಳ್ತಿನಿ. ಭಗವಾ ಎಂದರೆ ತ್ಯಾಗ, ಶೌರ್ಯ, ಕೋಟ್ಯಂತರ ಜನರಿಗೆ ವಿಶ್ವಾಸ ತುಂಬಿದ ಬಣ್ಣ. ಅದನ್ನು ಧರಿಸುವುದಕ್ಕೆ ಹೆಮ್ಮೆ ಪಡಬೇಕು.ಗುರು ಗೋವಿಂದ ಸಿಂಗ್, ಶಿವಾಜಿ ಮಹಾರಾಜರು ಬಳಸಿದ್ದು ಇದೇ ಭಗವಾ. ಅದು ಅರ್ಜುನನ ಧ್ವಜದ ಬಣ್ಣವೂ ಹೌದು. ಋಷಿಮುನಿಗಳು ಅದನ್ನು ತ್ಯಾಗದ ಸಂಕೇತವಾಗಿ ಬಳಸಿದ್ರೆ, ಕ್ಷತ್ರಿಯರು ಅದನ್ನು ಶೌರ್ಯದ ಸಂಕೇತವಾಗಿ ಬಳಸಿದ್ರು ಎಂದು ತಿಳಿಸಿದರು.
ಕೇಸರಿ ಶಾಲು ಹಾಕೋದಕ್ಕೆ ನಮಗೇನೂ ಸಂಕೋಚ ಇಲ್ಲ. ಬದಲಾಗಿ ಹೆಮ್ಮೆ ಆಗುತ್ತೆ. ಎಚ್‌ಡಿ ಕುಮಾರಸ್ವಾಮಿಯವರು ಸಹ ಸಂಕೋಚ ಪಡಬೇಕಿಲ್ಲ. ಅದು ಹಿಂದೂ ವಿರೋಧಿ ನೀತಿಯ ವಿರುದ್ಧ ಹಿಂದೂ ಸಂಘಟನೆಗಳು ಕರೆಕೊಟ್ಟ ಪಾದಯಾತ್ರೆಯಾಗಿತ್ತು. ಕೇವಲ ರಾಜಕೀಯ ಪಕ್ಷದ ನಾಯಕರು ಅದರಲ್ಲಿ ಭಾಗವಹಿಸಿರಲಿಲ್ಲ. ಹಿಂದೂ ಸಂಘಟನೆಗಳು ಭಾಗಿಯಾಗಿದ್ದವು. ಕೇಸರಿ ಶಾಲು ಧರಿಸಲು ಯಾರೂ ಸಂಕೋಚ ಪಡಬೇಕಾದ ಅವಶ್ಯಕತೆ ಇಲ್ಲ. ಭಗವಾ ಹಾಕುವುದರಿಂದ ನಮಗೆ ಕೆಟ್ಟದಾಗಲ್ಲ, ಒಳ್ಳೆಯದೇ ಆಗುತ್ತೆ ಎಂದರು.