
ಬೆಂಗಳೂರು (ಡಿ.30): ವೈಯಕ್ತಿಕ ವ್ಯವಹಾರಗಳಿಂದ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಆದರೂ ಬಿಜೆಪಿ ನಾಯಕರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಹೀಗಾಗಿ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಐಡಿ ಅಥವಾ ಬೇರೆ ಯಾವುದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ಗೃಹ ಸಚಿವರಲ್ಲಿ ಮನವಿ ಮಾಡಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ನನ್ನ ಹೆಸರಿಲ್ಲ ಹಾಗೂ ಸಚಿನ್ ಬರೆದಿದ್ದರು ಎನ್ನಲಾದ ಡೆತ್‌ನೋಟ್‌ನಲ್ಲೂ ನನ್ನ ಮೇಲೆ ಆರೋಪವಿಲ್ಲ.
ಆದರೂ ಬಿಜೆಪಿ ನಾಯಕರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಹೀಗಾಗಿ ಪ್ರಕರಣವನ್ನು ಸಿಐಡಿ ಅಥವಾ ಬೇರೆ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು. ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಕಲಬುರಗಿ ರಿಪಬ್ಲಿಕ್ ಆಗಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಕಲಬುರಗಿ ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ರಿಪಬ್ಲಿಕ್ ಆಗಿದೆಯೇ ಹೊರತು, ಬಳ್ಳಾರಿ ರಿಪಬ್ಲಿಕ್ ರೀತಿ ಆಗಿಲ್ಲ. ಜಯದೇವ ಆಸ್ಪತ್ರೆ, ಕಲ್ಯಾಣ ಪಥದ ಮೂಲಕ ರಸ್ತೆ ಅಭಿವೃದ್ಧಿ, ಕೆಕೆಆರ್‌ಡಿಬಿಯಿಂದ ಹಲವು ಯೋಜನೆಗಳ ಅನುಷ್ಠಾನ ಮಾಡುವ ಮೂಲಕ ಜಿಲ್ಲೆಯು ಅಭಿವೃದ್ಧಿ ರಿಪಬ್ಲಿಕ್ ಆಗಿದೆ.
ನನ್ನ ಮೇಲೆ ಆರೋಪ ಮಾಡುವ ಬಿಜೆಪಿ ನಾಯಕರು ಮೊದಲು ಅವರ ಪಕ್ಷದ ಜಿಲ್ಲಾ ನಾಯಕರ ಬಗ್ಗೆ ತಿಳಿದುಕೊಳ್ಳಲಿ. ಅವರ ಪಕ್ಷದ ನಾಯಕರೇ ಐಪಿಎಲ್ ಬೆಟ್ಟಿಂಗ್ ದಂಧೆ, ಮರಳು ಮಾಫಿಯಾ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಅದರಲ್ಲಿ ಸಚಿನ್ ಕೆಲಸ ಮಾಡುತ್ತಿದ್ದ ಸಂಸ್ಥೆ ಮಾಲೀಕರೂ ಆರೋಪಿಗಳಾಗಿದ್ದಾರೆ. ಟೆಂಡರ್‌ಗೆ ಸಂಬಂಧಿಸಿ ಇಎಂಡಿ ಹಣ ಠೇವಣಿಯನ್ನಾಗಿಡಲು ಸಚಿನ್ ಆರೋಪಿಗಳಿಂದ 65 ಲಕ್ಷ ರು. ಪಡೆದಿದ್ದ ಎಂಬುದನ್ನು ಆರೋಪಿಗಳು ತಿಳಿಸಿದ್ದಾರೆ.
ಸಚಿನ್ ಪಂಚಾಳ ಕುಟುಂಬಕ್ಕೆ ₹10 ಲಕ್ಷ ಪರಿಹಾರ: ಸಚಿವ ಈಶ್ವರ್ ಖಂಡ್ರೆ
ಆದರೆ, ಸಚಿನ್ ಮಾತ್ರ ಕೆಐಎಡಿಬಿ ಸೇರಿ ಇನ್ನಿತರ ಇಲಾಖೆಗಳ ಗುತ್ತಿಗೆ ಕೊಡಿಸಲು ಹಣ ಪಡೆದಿದ್ದರು ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಡೀ ಪ್ರಕರಣದಲ್ಲಿ ನನ್ನ ಪಾತ್ರ ಏನಿದೆ ಎಂಬುದನ್ನು ಬಿಜೆಪಿ ನಾಯಕರು ತಿಳಿಸಬೇಕು ಎಂದರು. ಯಡಿಯೂರಪ್ಪ ಅವರ ಪೋಕ್ಸೋ ಪ್ರಕರಣ, ಮುನಿರತ್ನ ಮತ್ತು ಸಿ.ಟಿ.ರವಿ ಅವರ ಪ್ರಕರಣಗಳನ್ನು ಮುಚ್ಚಿ ಹಾಕಲು ಬಿಜೆಪಿ ನಾಯಕರು ನನ್ನ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಅಲ್ಲದೆ, ಕಲಬುರಗಿಯಲ್ಲಿ ಪೊಲೀಸ್ ಠಾಣೆಗೆ ತೆರಳಿ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಗದ್ದಲ ಎಬ್ಬಿಸಿದ್ದಾರೆ. ಬಿಜೆಪಿ ನಾಯಕರು ನನ್ನ ವಿರುದ್ಧದ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ