
ಗೋಕರ್ಣ (ಉತ್ತರ ಕನ್ನಡ) (ಜು.12): ಗೋಕರ್ಣದ ರಾಮತೀರ್ಥ ಗುಡ್ಡದ ಮೇಲಿನ ಅಪಾಯಕಾರಿ ಗುಹೆಯ ಒಳಗೆ ಉಳಿದುಕೊಂಡಿದ್ದ ರಷ್ಯಾ ಮೂಲದ ವಿದೇಶಿ ಮಹಿಳೆ ಹಾಗೂ ಅವರ ಇಬ್ಬರು ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಆಧ್ಯಾತ್ಮಿಕತೆಯತ್ತ ಒಲವು ಹೊಂದಿದ್ದ ರಷ್ಯಾದ ನಿನಾ ಕುಟಿನಾ (40) ಹಾಗೂ ಅವರ ಮಕ್ಕಳಾದ ಪ್ರೀಮಾ (6), ಅಮಾ (4), ಗುಹೆಯೊಳಗೆ ವಾಸವಾಗಿದ್ದರು. ಕಳೆದ ವರ್ಷ ಇದೇ ಸ್ಥಳದ ಹತ್ತಿರ ಗುಡ್ಡ ಕುಸಿತವಾಗಿದ್ದು, ಇಂತಹ ಅಪಾಯಕಾರಿ ಸ್ಥಳದಲ್ಲಿ ಉಳಿದುಕೊಂಡಿದ್ದನ್ನು ಪತ್ತೆ ಮಾಡಿದ ಪೊಲೀಸರು, ಅಲ್ಲಿ ಉಳಿದುಕೊಳ್ಳದಂತೆ ಆಕೆಗೆ ತಿಳಿ ಹೇಳಿದ್ದಾರೆ.
ಅಲ್ಲಿಂದ ಮಹಿಳೆಯನ್ನು ಬಂಕಿಕೊಡ್ಲದ ಶಂಕರ ಪ್ರಸಾದ ಫೌಂಡೇಶನ್ ಆಶ್ರಮಕ್ಕೆ ಕಳುಹಿಸಲಾಗಿದೆ. ಬಳಿಕ, ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆಯ ಸ್ವೀಕಾರ ಕೇಂದ್ರಕ್ಕೆ ಸೇರಿಸಿ, ಆಪ್ತ ಸಮಾಲೋಚನೆ ನಡೆಸಲಾಯಿತು. ಪಾಸ್‌ಪೋರ್ಟ್ ಕೇಳಿದಾಗ ಅದು ರಾಮತೀರ್ಥ ಗುಡ್ಡದಲ್ಲಿ ಕಳೆದಿದೆ ಎಂದು ತಿಳಿಸಿದ್ದಾರೆ. ನಂತರ, ಅರಣ್ಯ ಇಲಾಖೆ, ಪೊಲೀಸರು ಜಂಟಿಯಾಗಿ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಪಾಸ್‌ಪೋರ್ಟ್ ಪತ್ತೆಯಾಗಿದೆ.
2016ರಲ್ಲಿ ಬ್ಯುಸಿನೆಸ್ ವೀಸಾದಲ್ಲಿ ಅವರು ಭಾರತಕ್ಕೆ ಬಂದಿದ್ದು, ಅದರ ಅವಧಿ ಏಪ್ರಿಲ್‌ನಲ್ಲೇ ಮುಗಿದಿದೆ. ಗೋವಾದಿಂದ ಮಕ್ಕಳೊಂದಿಗೆ ಗೋಕರ್ಣಕ್ಕೆ ಬಂದಿದ್ದ ಈಕೆ, ಗುಡ್ಡದ ಮೇಲಿರುವ ಗುಹೆಯಲ್ಲಿ ಉಳಿದುಕೊಂಡು ಧ್ಯಾನ ಹಾಗೂ ದೇವರ ಪೂಜೆಯಲ್ಲಿ ನಿರತರಾಗಿದ್ದರು ಎಂದು ತಿಳಿದು ಬಂದಿದೆ. ನಂತರ, ಮಹಿಳಾ ಪೊಲೀಸ್ ಸಿಬ್ಬಂದಿ ಜತೆ ಆ ಮಹಿಳೆಯನ್ನು ಬೆಂಗಳೂರಿನ ಎಫ್‌ಆರ್‌ಆರ್‌ಒ ಕಚೇರಿಗೆ ಕಳುಹಿಸಲಾಗಿದ್ದು, ಆಕೆಯ ದೇಶ, ರಷ್ಯಾಕ್ಕೆ ಕಳಿಸಲು ವ್ಯವಸ್ಥೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.
ಇಂತಹ ಘಟನೆ ಇದೇ ಮೊದಲಲ್ಲ: ಈ ಹಿಂದೆ ಸಹ ರಾಮತೀರ್ಥದ ಗುಹೆಯಲ್ಲಿ ರಷ್ಯನ್, ಫ್ರೆಂಚ್ ಪ್ರಜೆಗಳು ಬೇಸಿಗೆಯಲ್ಲಿ ಹಲವು ತಿಂಗಳ ಕಾಲ ವಾಸವಿರುತ್ತಿದ್ದರು. ಅಲ್ಲದೆ, ಬೆಲೆಕಾನ ಹತ್ತಿರದ ಬ್ರಹ್ಮಕಾನ ಬೆಟ್ಟಗಳಲ್ಲಿ ಟೆಂಟ್ ಹಾಕಿ ವಾಸವಾಗಿದ್ದರು. ಅಂದು ಪೊಲೀಸರು ಕಾರ್ಯಾಚರಣೆ ನಡೆಸಿ ಅವರನ್ನು ವಾಪಸ್ ಕಳುಹಿಸಿದ್ದರು. ಇದರಂತೆ ಉತ್ತರ ಭಾರತದ ಹಲವು ಬಾಬಾಗಳು ಇದೇ ಗುಹೆಯಲ್ಲಿ ಈ ಹಿಂದೆ ವಾಸವಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ